ಬೆಂಗಳೂರು: ವಿಶ್ವದರ್ಜೆಯ ಗುಣಮಟ್ಟದ ಶಿಕ್ಷಣದ ಜತೆಗೆ ಅಂತಾರಾಷ್ಟ್ರೀಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಿದೆ ಬಿಜಿಎಸ್ ನಾಲೆಡ್ಜ್ ಸಿಟಿ. ದೇಶ – ವಿದೇಶಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡಿರುವ ಬಿಜಿಎಸ್ ಇಂಟರ್‌ನ್ಯಾಷನಲ್ ಅಕಾಡೆಮಿಯ ಹಾಸ್ಟೆಲ್ ಅನ್ನು ಕೇವಲ 9 ತಿಂಗಳಲ್ಲಿ ನಿರ್ಮಿಸುವ ಮೂಲಕ ಮೆಗಾಲೈಟ್ ಸಂಸ್ಥೆ (Meghalite) ದಾಖಲೆ ಬರೆದಿದೆ.
ನಗರದ ಕೆಂಗೇರಿಯ ನಿತ್ಯಾನಂದನಗರದ ಬಳಿ ಇರುವ ಬಿಜಿಎಸ್ ನಾಲೆಡ್ಜ್ ಸಿಟಿಯಲ್ಲಿ ನೂತನ ಕಟ್ಟಡವನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು. ಭಾರತದ ಅನೇಕ ಭಾಗಗಳಿಂದ ಮತ್ತು 6ಕ್ಕೂ ಹೆಚ್ಚು ದೇಶಗಳಿಂದ ಆಗಮಿಸಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ವಾಸಕ್ಕಾಗಿ ಈ ಹಾಸ್ಟೆಲ್ ಅನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಬಿಜಿಎಸ್ ಇಂಟರ್‌ನ್ಯಾಷನಲ್ ಅಕಾಡೆಮಿಯ ಸ್ಕೂಲ್‌ಗಾಗಿ 60 ಸಾವಿರ ಚದರ ಅಡಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ.
ಈ ಕಟ್ಟಡವನ್ನು ನಗರದ ಖ್ಯಾತ ಬಿಲ್ಡರ್ ಎಚ್.ವಿ.ಧರ್ಮೇಶ್ ಅವರ ಒಡೆತನದ ಮೆಗಾಲೈಟ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಬೃಹತ್ ಕಟ್ಟಡವನ್ನು ಕೇವಲ 9 ತಿಂಗಳಲ್ಲೇ ಪೂರ್ಣಗೊಳಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಎಎಸಿ ಬ್ಲಾಕ್‌ಗಳ ತಯಾರಿಕೆಯಲ್ಲಿ ಮೆಗಾಲೈಟ್ ಅಗ್ರಮಾನ್ಯ ಸಂಸ್ಥೆಯಾಗಿದ್ದು, ಮೆಗಾ ಪ್ರಾಜೆಕ್ಟ್ಗಳನ್ನು ಅತ್ಯಂತ ಶೀಘ್ರ ಹಾಗೂ ಅತ್ಯುನ್ನತ ದರ್ಜೆಯಲ್ಲಿ ನಿರ್ಮಾಣ ಮಾಡುತ್ತಿರುವುದು ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ.
ಬಿಜಿಎಸ್ ಇಂಟರ್ ನ್ಯಾಷನಲ್ ಅಕಾಡೆಮಿ ಹಾಸ್ಟೆಲ್ ಮಾತ್ರವಲ್ಲದೇ ಬಿಜಿಎಸ್ ಹಾರ್ಸ್ ಟ್ರೈನಿಂಗ್ ಯೂನಿಟ್, ಬಿಜಿಎಸ್ ಹೋಟೆಲ್ ಮ್ಯಾನೇಜ್‌ಮೆಂಟ್ ಯೂನಿಟ್, ಬಿಜಿಎಸ್ ಆರ್ಕಿಟೆಕ್ಟ್ ಯೂನಿಟ್, ಕ್ರಿಕೆಟ್ ಗ್ರೌಂಡ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಮತ್ತೊಂದೆಡೆ, 2023ರ ಹೊಸ ಬ್ಯಾಚ್‌ನ ಫ್ರೆಶರ್ಸ್ ಡೇ ಕೂಡ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಆದಿಚುಂಚನಗಿರಿ ಶಿಕ್ಷಣ ದತ್ತಿಯ ಅಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಪ್ರಕಾಶನಾಥ ಸ್ವಾಮೀಜಿ, ಶ್ರೀ ಅವಧೂತ ವಿನಯ್ ಗೂರೂಜಿ ಭಾಗಿಯಾಗಿದ್ದರು.
ಇದನ್ನೂ ಓದಿ | Infrastructure funds : ಮೂಲಸೌಕರ್ಯ ಫಂಡ್‌ಗಳಲ್ಲಿ 1 ವರ್ಷಕ್ಕೆ 29% ಆದಾಯ, ಟಾಪ್ ಫಂಡ್‌ಗಳ ಡಿಟೇಲ್ಸ್
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಮೆಗಾಲೈಟ್ನ ಚೇರ್ಮನ್ ಹಾಗೂ ವಿಸ್ತಾರ ನ್ಯೂಸ್ ಸಿಎಂಡಿ ಎಚ್.ವಿ.ಧರ್ಮೇಶ್, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಭಾಗವಹಿಸಿದ್ದರು.
ಮೆಗಾಲೈಟ್ನ ಚೇರ್ಮನ್, ವಿಸ್ತಾರ ನ್ಯೂಸ್ ಸಿಎಂಡಿ ಎಚ್.ವಿ.ಧರ್ಮೇಶ್ ಹಾಗೂ ವಿಸ್ತಾರ ನ್ಯೂಸ್‌ನ ಸಿಇಒ, ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರನ್ನು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ ಹಾಗೂ ಶ್ರೀ ಪ್ರಕಾಶನಾಥ ಸ್ವಾಮೀಜಿ ಅವರು ಸನ್ಮಾನಿಸಿ ಗೌರವಿಸಿದರು.