ಮಂಗಳೂರು: ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಬಳಿಕ ಪಕ್ಷದ ಕಾರ್ಯಕರ್ತರಲ್ಲಿ ಉಂಟಾಗಿರುವ ಆಕ್ರೋಶ, ಬೇಗುದಿಯನ್ನು ಉಪಶಮನಗೊಳಿಸಲು ಹಾಗೂ ಅವರಲ್ಲಿ ವಿಶ್ವಾಸ ವೃದ್ಧಿಸಲು ಇದೀಗ ಯತ್ನಿಸಲಾಗುತ್ತಿದೆ.
ಮಂಗಳೂರಿನ ಸಂಘ ನಿಕೇತನದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ ಬೈಠಕ್ ನಡೆಯಿತು. ಬೈಠಕ್‌ನಲ್ಲಿ ಜಿಲ್ಲಾ ಬಿಜೆಪಿ ನಾಯಕರು ಭಾಗವಹಿಸಿದ್ದರು. ಬೆಳ್ಳಾರೆಯಲ್ಲಿ ಪ್ರವೀಣ್ ಅಂತ್ಯಕ್ರಿಯೆಯಲ್ಲಿ ನಡೆದ ವಿದ್ಯಮಾನಗಳನ್ನು ಚರ್ಚಿಸಲಾಯಿತು. ಕಾರ್ಯರ್ತರ ಆಕ್ರೋಶ ರಾಜ್ಯವ್ಯಾಪಿ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಅವಲೋಕನ ನಡೆಸಲಾಯಿತು. ಸಂಘದಿಂದ 50 ಲಕ್ಷ ನೀಡುವ ಬಗ್ಗೆ ಹಾಗೂ ಪ್ರವೀಣ್ ಅವರ ಕನಸಿನ ಮನೆ ನಿರ್ಮಿಸಿ ಕೊಡುವ ಬಗ್ಗೆಯೂ ಚರ್ಚೆ ನಡೆಯಿತು.
ಈ ಮೂಲಕ ಕಾರ್ಯಕರ್ತರಲ್ಲಿ ಭರವಸೆ ಮತ್ತು ವಿಶ್ವಾಸ ವೃದ್ಧಿಗೆ ಯತ್ನಿಸಲು ನಿರ್ಧರಿಸಲಾಯಿತು. ಒಂದು ವೇಳೆ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡದಿದ್ದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಆತಂಕ ಸೃಷ್ಟಿಯಾಗಿದೆ. ಎಲ್ಲವನ್ನೂ ಸರಿದೂಗಿಸಲು ಆ‌್ಯಕ್ಷನ್ ಪ್ಲಾನ್ ಬಗ್ಗೆ ಚರ್ಚೆ ನಡೆಯಿತು.