ಬೆಂಗಳೂರು: ಅಮೆರಿಕದ ಹತ್ತಾರು ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿವೆ. ಇವುಗಳಿಗೆ ಅನುಕೂಲ ಕಲ್ಪಿಸಲು ಸೂಕ್ತ ವೇದಿಕೆ ರಚಿಸಲಾಗುವುದು. ಇದರ ಜತೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಕನಿಷ್ಠಪಕ್ಷ ಶೇ. 75 ಅಭಿವೃದ್ಧಿಪಡಿಸಿದ ಕೈಗಾರಿಕಾ ನಿವೇಶನಗಳನ್ನೇ ಇನ್ನು ಮುಂದೆ ಉದ್ಯಮಗಳಿಗೆ ನೀಡಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಹೇಳಿದ್ದಾರೆ.
ಅಮೆರಿಕನ್ ಚೇಬರ್ ಆಫ್ ಕಾಮರ್ಸ್ ಇನ್ ಇಂಡಿಯಾ ಸಂಘಟನೆಯ ಕರ್ನಾಟಕ ಘಟಕವು ಶುಕ್ರವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಉದ್ಯಮಿಯೊಬ್ಬರ ಸಲಹೆಗೆ ಸ್ಪಂದಿಸಿದ ಸಚಿವರು, ಹಣಕಾಸು ಸಲಹಾ ಸಮಿತಿ ರಚಿಸುವ ಇಂಗಿತ ವ್ಯಕ್ತಪಡಿಸಿದರು.
ಇದನ್ನೂ ಓದಿ | Gruha Lakshmi Scheme : ಸೆಪ್ಟೆಂಬರ್‌ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ ಹಣ? 2500 ಕೋಟಿ ಉಳಿಸಲು ಪ್ಲ್ಯಾನ್!
ರಾಜ್ಯದಲ್ಲಿ ಇರುವ ಕೈಗಾರಿಕಾ ನೀತಿಗಳು ಉತ್ತೇಜನಕಾರಿಯಾಗಿದ್ದು, ದೇಶದಲ್ಲಿ ಬೇರಾವ ರಾಜ್ಯದಲ್ಲೂ ಇರದಂತಹ ಅನುಕೂಲಗಳನ್ನು ನೀಡುತ್ತಿದೆ. ಬಿಯಾಂಡ್ ಬೆಂಗಳೂರು ಉಪಕ್ರಮದಡಿ ರಾಜಧಾನಿಯಿಂದ ಆಚೆಗೆ ಹೋಗಿ ಉದ್ದಿಮೆಗಳನ್ನು ಸ್ಥಾಪಿಸುವವರಿಗೆ ರಿಯಾಯಿತಿ ಕೊಡಲಾಗುತ್ತಿದೆ. ಇನ್ನು 15 ದಿನಗಳಲ್ಲಿ ಉದ್ಯಮಿಗಳ ಸಭೆ ಕರೆದು, ಅವರ ಆಲೋಚನೆಗಳಿಗೆ ಕಿವಿಗೊಡುತ್ತೇವೆ ಎಂದು ಅವರು ಭರವಸೆ ನೀಡಿದರು.
ರಾಜ್ಯದ ಎಲ್ಲಾ ಕೈಗಾರಿಕಾ ಪ್ರದೇಶಗಳನ್ನೂ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸರ್ಕಾರವು ತೀರ್ಮಾನಿಸಿದೆ. ಇದಕ್ಕೆ ಪೂರಕವಾಗಿ ಹೊಸ ಕೈಗಾರಿಕಾ ನೀತಿಯನ್ನೂ ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಅಗತ್ಯ ಭೂಮಿ, ನೀರು ಮತ್ತು ವಿದ್ಯುತ್ ಸಮೃದ್ಧವಾಗಿರುವ ವಿಜಯಪುರ ಸೇರಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಉದ್ಯಮಿಗಳು ಹೂಡಿಕೆಗೆ ಮನಸ್ಸು ಮಾಡಬೇಕು. ಅದನ್ನು ನಾವು ಸಂಪೂರ್ಣ ಸ್ವಾಗತಿಸುತ್ತೇವೆ ಎಂದು ಅವರು ಆಹ್ವಾನ ನೀಡಿದರು.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳಲ್ಲೇ 40 ಸಾವಿರ ಕೋಟಿ ರೂ. ಬಂಡವಾಳ ರಾಜ್ಯಕ್ಕೆ ಹರಿದು ಬರುವುದು ಖಾತ್ರಿಯಾಗಿದೆ. ಮಿಕ್ಕಂತೆ ಇನ್ನೂ 60 ಸಾವಿರ ಕೋಟಿ ರೂ. ಹೂಡಲು ಅನೇಕ ಕಂಪನಿಗಳು ಮುಂದೆ ಬಂದಿವೆ. ಅಂದರೆ, ಕ್ಷಿಪ್ರ ಕಾಲಾವಧಿಯಲ್ಲಿ 1 ಲಕ್ಷ ಕೋಟಿ ರೂ.ಗಳ ಒಟ್ಟು ಬಂಡವಾಳ ಹರಿದು ಬರಲಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಟಾಟಾ ಸಮೂಹದ ಸಂಸ್ಥೆ ಮುಂದೆ ಬಂದಿದ್ದು, ಮೂರು ಕಡೆಗಳಲ್ಲಿ ಕಾಮನ್ ಫೆಸಿಲಿಟೀಸ್ ಸೆಂಟರ್‍ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ನುಡಿದರು.
ಇದನ್ನೂ ಓದಿ | Commission Politics : 40 ಪರ್ಸೆಂಟ್ ಹಗರಣದ ತನಿಖೆಗೆ ಆದೇಶ; ತಿಂಗಳೊಳಗೆ ವರದಿ ಸಲ್ಲಿಕೆಗೆ ಸೂಚನೆ
ನಮ್ಮಲ್ಲಿ ಐಟಿ ಕ್ಷೇತ್ರ ಚೆನ್ನಾಗಿದೆ. ಇದರ ಜತೆಗೆ ಉತ್ಪಾದನಾ ಕ್ಷೇತ್ರವೂ ಅಭಿವೃದ್ಧಿ ಆಗಬೇಕು. ಹೀಗಾಗಿ ಇದಕ್ಕೆ ಪೂರಕವಾದ ನಿಯಮಗಳನ್ನು ರೂಪಿಸಲಾಗುವುದು. ಅಮೆರಿಕದ ಕಂಪನಿಗಳು ಇ-ಮೊಬಿಲಿಟಿ, ಇಎಸ್‌ಡಿಎಂ, ಪರಿಸರಸ್ನೇಹಿ ಇಂಧನ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ಮಾತುಕತೆಗೆ ಚಾಲನೆ ನೀಡಲಾಗಿದೆ. ಇವೆಲ್ಲವೂ ಸಾಧ್ಯವಾಗುವಂತೆ ನೋಡಿಕೊಳ್ಳಲು ‘ಇನ್ವೆಸ್ಟ್ ಕರ್ನಾಟಕ ಫೋರಂ’ ಅನ್ನು ಪುನಾರಚಿಸಲಾಗುತ್ತಿದೆ. ಜತೆಗೆ, ಹೂಡಿಕೆ ಆಕರ್ಷಿಸಲು ಸರಕಾರಕ್ಕೆ ಸೂಕ್ತ ಸಲಹೆ ನೀಡಲು ‘ಸ್ಟ್ರಾಟೆಜಿಕ್ ಇನ್ವೆಸ್ಟ್‌ಮೆಂಟ್ಸ್ ಕಮಿಟಿ’ (ಎಸ್‌ಐಸಿ)ಯನ್ನು ಕೂಡ ರಚಿಸಲಾಗುತ್ತಿದೆ ಎಂದು ಪಾಟೀಲ ಹೇಳಿದರು.
ಅಮೆಜಾನ್ ಪ್ರತಿನಿಧಿಗಳಾದ ರಾಜಾನ್ ಖನ್ನಾ, ಸೋಮ್ ಸತ್ಸಂಗಿ, ಅತುಲ್ ಉಜಗರ್ ಮತ್ತಿತರರು ಇದ್ದರು.