Site icon Vistara News

Consumer Court : 66 ವರ್ಷದ ವಿದ್ಯಾರ್ಥಿಗೆ ಸರಿಯಾಗಿ ಪಾಠ ಮಾಡದೆ ನಿರ್ಲಕ್ಷ್ಯ; ಕಂಪ್ಯೂಟರ್‌ ಸೆಂಟರ್‌ಗೆ ಕೋರ್ಟ್‌ ದಂಡ!

#image_title

ಬೆಂಗಳೂರು: ಕಂಪ್ಯೂಟರ್‌ ಕೋರ್ಸ್‌ಗಳನ್ನು ಸೇರಿಕೊಳ್ಳುವುದಕ್ಕೆ ವಯೋಮಿತಿಯ ಅವಶ್ಯಕತೆಯಿಲ್ಲ. ಆಸಕ್ತಿ ಇದ್ದರೆ ಹದಿಹರೆಯದವರಿಂದ ಹಿಡಿದು ವಯೋವೃದ್ಧರೂ ಕೋರ್ಸ್‌ ಪೂರ್ಣಗೊಳಿಸಿಕೊಳ್ಳಬಹುದು. ಅದೇ ರೀತಿ ಡಿಟಿಪಿ ಕೋರ್ಸ್‌ ಪಡೆಯುವುದಕ್ಕೆಂದು ಹುಬ್ಬಳ್ಳಿಯಲ್ಲಿ 66 ವರ್ಷದ ಚನ್ನಬಸಪ್ಪ ಅವರು ಕಂಪ್ಯೂಟರ್‌ ಕೋಚಿಂಗ್‌ ಸೆಂಟರ್‌ ಒಂದನ್ನು ಸೇರಿಕೊಂಡಿದ್ದರು. ವಯಸ್ಸಾಗಿದೆ ಎಂಬ ಕಾರಣಕ್ಕೆ ಆ ಕಂಪ್ಯೂಟರ್‌ ಸೆಂಟರ್‌ ಚನ್ನಬಸಪ್ಪರನ್ನು ನಿರ್ಲಕ್ಷಿಸುತ್ತಿತ್ತು. ಇದೀಗ ಆ ಸೆಂಟರ್‌ ಚನ್ನಬಸಪ್ಪ ಕಟ್ಟಿದ್ದ ಶುಲ್ಕವನ್ನು ವಾಪಸು ಕೊಡುವುದಷ್ಟೇ ಅಲ್ಲದೆ 10 ಸಾವಿರ ರೂ. ಪರಿಹಾರವನ್ನೂ ಕೊಡುವ ಸ್ಥಿತಿ (Consumer Court) ಬಂದೊದಗಿದೆ!

ಇದನ್ನೂ ಓದಿ: Road Accident: ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ; ಗಾಯಾಳುಗಳ ರಕ್ಷಣೆಗೆ ಧಾವಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಚನ್ನಬಸಪ್ಪ ಕಳೆದ ವರ್ಷದ ಹುಬ್ಬಳ್ಳಿಯಲ್ಲಿರುವ ಲಾಜಿಕ್‌ ಕಂಪ್ಯೂಟರ್‌ ಸೆಂಟರ್‌ನಲ್ಲಿ ಡಿಟಿಪಿ ಕೋರ್ಸ್‌ಗೆ ಸೇರಿಕೊಂಡಿದ್ದರು. ಅದಕ್ಕೆಂದು 5 ಸಾವಿರ ರೂ. ಶುಲ್ಕವನ್ನೂ ಕಟ್ಟಿದ್ದರು. ಅವರು ಸೇರಿಕೊಂಡ ಸಮಯದಲ್ಲಿ ಅಲ್ಲಿ ಹೆಚ್ಚು ಜನರು ಕೋರ್ಸ್‌ ಪಡೆಯುತ್ತಿರಲಿಲ್ಲವಂತೆ. ಆದರೆ ಬೇಸಿಗೆ ರಜೆಯ ಸಮಯದಲ್ಲಿ ಹೆಚ್ಚು ಜನ ಕೋರ್ಸ್‌ಗೆ ಸೇರಿಕೊಂಡಿದ್ದಾರೆ. ಆಗಿನಿಂದ ಕೋಚಿಂಗ್‌ ಕೊಡುತ್ತಿದ್ದವರು ಚನ್ನಬಸಪ್ಪರನ್ನು ನಿರ್ಲಕ್ಷಿಸಲು ಆರಂಭಿಸಿದ್ದರು. ಕೋರ್ಸ್‌ಗೆ ಸಂಬಂಧಿಸಿ ಏನೇ ಗೊಂದಲ ಕೇಳಿದರೂ ಅದಕ್ಕೆ ಸರಿಯಾಗಿ ಉತ್ತರಿಸುತ್ತಿರಲಿಲ್ಲವಂತೆ. ಕೋರ್ಸ್‌ಗೆ ಸಂಬಂಧಪಟ್ಟ ಪರೀಕ್ಷೆಯನ್ನು ಚನ್ನಬಸಪ್ಪ ಬರೆದಿದ್ದಾರಾದರೂ ಕೋರ್ಸ್ ಪ್ರಮಾಣಪತ್ರವನ್ನು ಸೆಂಟರ್‌ನವರು ಅವರಿಗೆ ಕೊಟ್ಟಿಲ್ಲ.

ಈ ವಿಚಾರವಾಗಿ ಚನ್ನಬಸಪ್ಪ ಧಾರವಾಡ ಜಿಲ್ಲೆಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಆಯೋಗವು ಈ ಪ್ರಕರಣದ ತನಿಖೆ ನಡೆಸಿದ್ದು, ಚನ್ನಬಸಪ್ಪ ಕಟ್ಟಿದ್ದ ಶುಲ್ಕದ ಜತೆಯಲ್ಲಿ ಅವರು ಅನುಭವಿಸಿದ ಮಾನಸಿಕ ಯಾತನೆಗೆ ಪರಿಹಾರವಾಗಿ 10,000 ರೂ.ಯನ್ನು ಅವರಿಗೆ ಕೊಡುವಂತೆ ಲಾಜಿಕ್‌ ಕಂಪ್ಯೂಟರ್‌ ಸೆಂಟರ್‌ಗೆ ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ: CLT Exam : ಕಂಪ್ಯೂಟರ್‌ ಪರೀಕ್ಷೆಯಲ್ಲಿ ಈಗಾಗಲೇ ಉತ್ತೀರ್ಣರಾಗಿರುವ ನೌಕರರಿಗೆ ಐದು ಸಾವಿರ ಪ್ರೋತ್ಸಾಹ ಧನ
ಚನ್ನಬಸಪ್ಪ ಅವರಿಗೆ 66 ವರ್ಷ ವಯಸ್ಸಾಗಿರುವುದರಿಂದ ಅವರಿಗೆ ಗ್ರಹಣ ಶಕ್ತಿ ಇರಲಿಲ್ಲ. ಏನು ಹೇಳಿಕೊಟ್ಟರೂ ಅರ್ಥವಾಗುತ್ತಿರಲಿಲ್ಲ. ಅದಲ್ಲದೆ ಅವರು ಸೆಂಟರ್‌ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಲಾಜಿಕ್‌ ಕಂಪ್ಯೂಟರ್‌ ಸೆಂಟರ್‌ನವರು ಆಯೋಗಕ್ಕೆ ತಿಳಿಸಿದ್ದರು. ಆದರೆ, ಕೇವಲ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಅವರಿಗೆ ಗ್ರಹಿಸುವ ಶಕ್ತಿಯಿಲ್ಲ ಎಂದು ಹೇಳುವುದು ತಪ್ಪು. ವಿದ್ಯಾರ್ಥಿಗಳು ಚಿಕ್ಕವರಿರಲಿ ಅಥವಾ ದೊಡ್ಡವರಿರಲಿ ಶಿಕ್ಷಣ ನೀಡುವುದು ಸಂಸ್ಥೆಯ ಕರ್ತವ್ಯ ಎಂದು ಆಯೋಗ ಹೇಳಿದೆ.

Exit mobile version