ಆನೇಕಲ್: ಗೋದಾಮಿಗೆ ಟಯರ್‌ಗಳನ್ನು ಸಾಗಿಸುತ್ತಿದ್ದ ಕಂಟೇನರ್ ಲಾರಿಯೊಂದಕ್ಕೆ ವಿದ್ಯುತ್ ತಂತಿ ಸ್ಪರ್ಶವಾಗಿ (Electricution) ವಾಹನವೇ ಹೊತ್ತಿ ಉರಿದಿದೆ. ಕಂಟೇನರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ವಡೇರ ಮಂಚನಹಳ್ಳಿ ಬಳಿ ಘಟನೆ ನಡೆದಿದೆ.
ಎಮ್ ಆರ್ ಎಫ್ ಕಂಪನಿಯಲ್ಲಿ ತಯಾರಾದ ಟೈರ್‌ಗಳನ್ನು ಗೋದಾಮಿಗೆ ಸಾಗಿಸಲಾಗುತ್ತಿತ್ತು. ಲಾರಿ ಜಿಗಣಿ ಕೈಗಾರಿಕಾರ ಪ್ರದೇಶದ ವಡೇರ ಮಂಚನಹಳ್ಳಿಯನ್ನು ತಲುಪಿದಾಗ 11 ಕೆವಿ ವಿದ್ಯುತ್ ತಂತಿ ಕಂಟೇನರ್ ಲಾರಿಗೆ ತಗುಲಿದೆ.
ಒಮ್ಮೆಗೇ ಬೆಂಕಿ ಹತ್ತಿಕೊಂಡಿದ್ದು ಕ್ಷಣಾರ್ಧದಲ್ಲಿ ಲಾರಿ ಹೊತ್ತಿ ಉರಿದಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರಾದರೂ ಅಷ್ಟು ಹೊತ್ತಿಗೆ ಲಾರಿ ಸಂಪೂರ್ಣ ಸುಟ್ಟು ಹೋಗಿದೆ. ಜತೆಗೆ ಅದರೊಳಗಿದ್ದ ಚಾಲಕ ರಾಜೇಂದ್ರನ್ ಅವರು ಹೊರಕ್ಕೆ ಬರಲಾಗದೆ ಸುಟ್ಟು ಕರಕಲಾಗಿದ್ದಾರೆ. ಮೃತಪಟ್ಟ ಚಾಲಕ ರಾಜೇಂದ್ರನ್ ಅವರು, ತಮಿಳುನಾಡಿನ ತಿರುವಣ್ಣಾಮಲೈ ಸಮೀಪದ ಕಂದಿಗೈ ಗ್ರಾಮದವರು ಎಂದು ತಿಳಿದುಬಂದಿದೆ.
ಬೆಳಗ್ಗೆ 10.19ಕ್ಕೆ ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ ಸಂಭವಿಸಿತ್ತು. 10.55ರ ಹೊತ್ತಿಗೆ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿದ್ದವು. ಕಂಟೇನರ್‌ನ ಹಿಂಬದಿಯ ಟಯರ್‌ಗಳಿಗೆ ಬೆಂಕಿ ಹತ್ತಿಕೊಂಡು ಅದು ಎಲ್ಲ ಕಡೆಗೂ ಹರಡಿದೆ. ವಿದ್ಯುತ್ ಆಘಾತದಿಂದ ಚಾಲಕ ರಾಜೇಂದ್ರನ್ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನಾಗೇಶ್ ತಿಳಿಸಿದ್ದಾರೆ. ಈ ಕಂಟೇನರ್ ಕೇರಳದಿಂದ ಜಿಗಣಿಯ ಗೋದಾಮಿಗೆ ಎಂಆರ್‌ಎಫ್ ಕಂಪನಿಯ ಟಯರ್‌ಗಳನ್ನು ಹೊತ್ತು ಬರುತ್ತಿತ್ತು ಎಂದು ಅವರು ಹೇಳಿದರು.
ಯುಗಾದಿ ಪುಣ್ಯ ಸ್ನಾನ ಮಾಡಲು ಬಂದ ವ್ಯಕ್ತಿ ತ್ರಿವೇಣಿ ಸಂಗಮದಲ್ಲಿ ಮುಳುಗಿ ಸಾವು
ಮೈಸೂರು: ತಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮಕ್ಕೆ ಯುಗಾದಿ ಪುಣ್ಯಸ್ನಾನ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ (Drowned in river) ಮೃತಪಟ್ಟಿದ್ದಾರೆ.
ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದ ಗಂಗಾಧರ್ ಮೃತ ದುರ್ದೈವಿ. ಮೈಸೂರಿನ ಎಸ್‌ಬಿಐ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಂಗಾಧರ್ ಅವರು ಪ್ರಸ್ತುತ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ವಾಸವಿದ್ದಾರೆ.
ಗಂಗಾಧರ್ ತಮ್ಮ ಮನೆಯವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಆಗಮಿಸಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನೀರಿನಲ್ಲಿ ಮುಳುಗಿದ ಅವರನ್ನು ರಕ್ಷಿಸಲು ಸ್ಥಳದಲ್ಲಿದ್ದವರು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ.
ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನೆ ಮಾಡಲಾಗಿದ್ದು, ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ Road accident : ಮದ್ಯ ಸಾಗಿಸುತ್ತಿದ್ದ ಲಾರಿಗೆ ಅದಿರು ಸಾಗಾಟದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಮೃತ್ಯುವಶ