ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು (Contaminated Water) ಸೇವನೆಯಿಂದ ಈಗಾಗಲೇ ಇಬ್ಬರು ಮೃತಪಟ್ಟಿದ್ದರೆ, ೯೪ ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಆದರೆ, ಸೋಂಕಿನ ಪ್ರಮಾಣ ಹೆಚ್ಚಿರುವುದರಿಂದ ವಾಂತಿ-ಭೇದಿ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೂ ೧೫ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಂತಿ-ಭೇದಿ ಪ್ರಕರಣ ದಾಖಲಾಗಿ ಐದು ದಿನಗಳು ಕಳೆದಿದ್ದರೂ ರೋಗವು ಉಲ್ಬಣಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದು, ಪರೀಕ್ಷೆ ನಡೆಸುತ್ತಿದ್ದಾರೆ. ವಾಂತಿ-ಭೇದಿಯಿಂದ ಬಳಲುತ್ತಿದ್ದ ಮುದೇನೂರು ಗ್ರಾಮದ 15 ಮಂದಿ ತೀವ್ರವಾಗಿ ಆಯಾಸಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ತೆರಳಿ ದಾಖಲಾಗುವಂತೆ ರಾಮದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಎಸ್. ಬಂತಿ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆ, ಬಾಗಲಕೋಟೆ, ಮುಧೋಳ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುರುವಾರದವರೆಗೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 94 ಮಂದಿಗೂ ಚಿಕಿತ್ಸೆ ಮುಂದುವರಿದಿದೆ. ಹಲವರಲ್ಲಿ ನಿರ್ಜಲೀಕರಣ ಸಮಸ್ಯೆ ತಲೆದೋರಿದ್ದು, ತೀವ್ರ ನಿಶ್ಯಕ್ತರಾಗಿದ್ದಾರೆ.
ಗ್ರಾಮದಲ್ಲೇ ವೈದ್ಯರ ತಂಡದಿಂದ ಪರೀಕ್ಷೆ
ಇನ್ನೂ ಕೆಲವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಯಾರಿಗೂ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮುದೇನೂರು ಗ್ರಾಮದಲ್ಲಿ ಒಂಬತ್ತು ವೈದ್ಯರು, ನಾಲ್ವರು ಆರೋಗ್ಯ ನಿರೀಕ್ಷಕರು, ಮೂವರು ನರ್ಸ್‌ಗಳು, 10 ಮಂದಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಎರಡು ಆಂಬ್ಯುಲೆನ್ಸ್ ಸೇರಿ 30 ಸಿಬ್ಬಂದಿ ತಪಾಸಣೆ ಮುಂದುವರಿಸಿದ್ದಾರೆ. ಮನೆಮನೆಗೆ ತೆರಳಿ ರಕ್ತದೊತ್ತಡ, ಮಧುಮೇಹದ ಬಗ್ಗೆಯೂ ತಪಾಸಣೆ ನಡೆಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ.ಆರ್.ಎಸ್. ಬಂತಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Contaminated water | ರಾಮದುರ್ಗ ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಕುಟುಂಬಕ್ಕೆ ₹10 ಲಕ್ಷ ಘೋಷಣೆ