Site icon Vistara News

Contaminated Water: ಮೊಳಕಾಲ್ಮೂರಿನಲ್ಲಿ ಕಲುಷಿತ ನೀರು ಸೇವಿಸಿ 33 ಮಂದಿ ಅಸ್ವಸ್ಥ

contaminated water in Molakalmuru

ಚಿತ್ರದುರ್ಗ: ಕಲುಷಿತ ನೀರು (Contaminated Water) ಸೇವಿಸಿ 33 ಮಂದಿ ಅಸ್ವಸ್ಥವಾಗಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಬುಧವಾರ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಓಬಕ್ಕ ಹಾಗೂ ಚಾಮುಂಡಮ್ಮ ಎಂಬುವವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ (VIMS Bellary) ಶಿಫ್ಟ್ ಮಾಡಲಾಗಿದೆ. ಬುಧವಾರ ಸಂಜೆ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ಗ್ರಾಮದಲ್ಲಿ ಚಿಕಿತ್ಸೆಗಾಗಿ ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭ ಮಾಡಲಾಗಿದೆ. ಅದೇ ರೀತಿ ರಾಂಪುರ ಆರೋಗ್ಯ ಕೇಂದ್ರದಲ್ಲೂ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ನಾಲ್ಕೈದು ಆಂಬ್ಯುಲೆನ್ಸ್‌ಗಳನ್ನು ರವಾನೆ ಮಾಡಲಾಗಿದೆ. ಅಗತ್ಯ ಔಷಧಗಳನ್ನು ದಾಸ್ತಾನು ಮಾಡಲಾಗುತ್ತಿದೆ.

ಇದನ್ನೂ ಓದಿ | Electric shock: ಮುಂಡರಗಿಯಲ್ಲಿ ವಿದ್ಯುತ್ ಹರಿದು ಪವರ್‌ಮ್ಯಾನ್‌ ಸಾವು

ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಹೊಡೆದು ಕಲುಷಿತ ನೀರು ಪೂರೈಕೆಯಾಗಿದೆ. ಜೆಜೆಎಂ ಯೋಜನೆಯ ಪೈಪ್‌ಲೈನ್ ಮಾಡುವ ವೇಳೆ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿದೆ. ಆದರೆ, ಪೈಪ್‌ಲೈನ್ ಸರಿ ಮಾಡದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಸೇರಿಕೊಂಡು ಸರಬರಾಜು ಆಗಿರುವ ಶಂಕೆ ವ್ಯಕ್ತವಾಗಿದೆ.

ಕಲುಷಿತ ನೀರಿನ ಮಾದರಿಯನ್ನು ಲ್ಯಾಬ್ ಟೆಸ್ಟಿಂಗ್‌ಗೆ ರವಾನೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಎಂದು ಬಹಿರಂಗವಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಇದನ್ನೂ ಓದಿ | Kidnap Case : 9ರ ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಧೂರ್ತ ಪೊಲೀಸ್‌ ಬಲೆಗೆ; 12 ಗಂಟೆಯೊಳಗೆ ಅರೆಸ್ಟ್‌

ರಾಂಪುರ ಆರೋಗ್ಯ ಕೇಂದ್ರಕ್ಕೆ ಶಾಸಕ ಎನ್. ವೈ. ಗೋಪಾಲಕೃಷ್ಣ ಭೇಟಿ ನೀಡಿ, ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಘಟನೆಗೆ ಕಾರಣ ಏನೆಂದು ಶೀಘ್ರ ತಿಳಿದುಕೊಂಡು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

Exit mobile version