ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು (contaminated water) ಕುಡಿದು ನಡೆದ ದುರಂತದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ. 157ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಕವಾಡಿಗರ ಹಟ್ಟಿ ನಿವಾಸಿ ರುದ್ರಪ್ಪ (57) ಎಂಬವರು ಸಾವಿಗೀಡಾಗಿದ್ದಾರೆ. ಕಳೆದ ಮೂರು ದಿನದಿಂದ ಇವರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ 16 ಮಂದಿ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ, ಎಫ್ಎಸ್ಎಲ್ ವರದಿ ಜಿಲ್ಲಾಡಳಿತದ ಕೈ ಸೇರಿದ್ದು, ಕವಾಡಿಗರಹಟ್ಟಿ ನೀರಿನಲ್ಲಿ ವಿಷಕಾರಿ ಅಂಶ ಇಲ್ಲ ಎಂದು ವರದಿ ಉಲ್ಲೇಖ ಮಾಡಿದೆ. ಕವಾಡಿಗರಹಟ್ಟಿಯ ಟ್ಯಾಂಕ್‌ನಿಂದ ಹಾಗೂ ಮೃತರು ಹಾಗೂ ಅಸ್ವಸ್ಥರ ಮನೆಯಿಂದ ನೀರಿನ ಸ್ಯಾಂಪಲ್ ಸಂಗ್ರಹಿಸಲಾಗಿತ್ತು.
ಯಾವ ನೀರಿನಲ್ಲಿಯೂ ಕೂಡ ವಿಷದ ಅಂಶ ಪತ್ತೆಯಾಗಿಲ್ಲ. ನೀರಲ್ಲಿ ವಿಷಕಾರಿ ಅಂಶ ಇಲ್ಲ ಎಂದು ಎಫ್‌ಎಸ್‌ಎಲ್ ವರದಿ ದೃಢಪಡಿಸಿದೆ. ಚಿತ್ರದುರ್ಗ ಎಸ್ಪಿ ಪರಶುರಾಮ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಿದ್ದರೆ ಈ ಸಾಮೂಹಿಕ ಸಾವು ಹಾಗೂ ಅಸ್ವಸ್ಥತೆಗೆ ಕಾರಣ ಏನು ಎಂಬ ಅಂಶ ನಿಗೂಢವಾಗಿ ಉಳಿದಿದೆ.
ಪ್ರಕರಣಕ್ಕೆ ಸಂಬಂಧಿಸಿ ಪಂಪ್ ಆಪರೇಟರ್ ಸೇರಿ ಐದು ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ನಗರಸಭೆಯ ಪ್ರಕಾಶ್ ಬಾಬು, ಪಂಪ್ ಆಪರೇಟರ್, ವಾಲ್ ಮ್ಯಾನ್ ಪ್ರಕಾಶ್, ಸುರೇಶ್ ಅಮಾನತಾಗಿದ್ದಾರೆ. AEE ಮಂಜುನಾಥ್ ರೆಡ್ಡಿ, JE ಕಿರಣ್ ಅಮಾನತಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಈಗಾಗಲೇ ಮೂವರನ್ನು ಅಮಾನತು ಮಾಡಿರುವ ನಗರಸಭೆ ಹಾಗೂ ಡಿಸಿ ದಿವ್ಯ ಪ್ರಭು ಇಬ್ಬರು ಇಂಜಿನಿಯರ್‌ಗಳ ಅಮಾನತಿಗೆ ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ: Contaminated Water: ಕವಾಡಿಗರಹಟ್ಟಿ ನೀರಿನಲ್ಲಿ ವಿಷಕಾರಿ ಅಂಶವಿಲ್ಲ: ಎಫ್ಎಸ್ಎಲ್ ವರದಿ