ಗದಗ/ಶಿವಮೊಗ್ಗ: ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ (SC ST Reservation) ಹೆಚ್ಚಳ ಮಾಡುವ ವೇಳೆ ಒಳ ಮೀಸಲಾತಿ ನಿಗದಿ ಮಾಡಿರುವ ಕ್ರಮ ಪ್ರಶ್ನಿಸಿ ಸಿಡಿದೆದ್ದಿರುವ ಬಂಜಾರ ಸಮುದಾಯದವರು ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕಾರಿಪುರದಲ್ಲಿ ಹೊತ್ತಿದ ಕಿಡಿ ಈಗ ಹಲವು ಕಡೆ ವ್ಯಾಪಿಸಿದ್ದು, ಶಿವಮೊಗ್ಗದಲ್ಲಿ ಗುರುವಾರವೂ (ಮಾ. 30) ಮುಂದುವರಿದಿದೆ. ಇತ್ತ ಗದಗದಲ್ಲಿಯೂ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಕೇಶ ಮುಂಡನ ಮಾಡಿಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಗದಗನಲ್ಲಿ ಒಳಮೀಸಲಾತಿ ವಿರೋಧಿಸಿ ಬಂಜಾರ ಸಮಾಜದಿಂದ ಪ್ರತಿಭಟನೆ ನಡೆದಿದ್ದು, ತಲೆ ಬೋಳಿಸಿಕೊಂಡು ಸಮುದಾಯದವರು ಆಕ್ರೋಶವನ್ನು ಹೊರಹಾಕಿದ್ದಾರೆ. ಪ್ರತಿಭಟನಾ ರ‌್ಯಾಲಿ ವೇಳೆ ಸಮುದಾಯದ ಕಾರ್ಯಕರ್ತರು ಕೇಶ ಮುಂಡನ ಮಾಡಿಸಿಕೊಳ್ಳುವ ಮುಖಾಂತರ ವಿಭಿನ್ನವಾಗಿ ಹೋರಾಟ ಮಾಡಿದ್ದಾರೆ. ನಡು ರಸ್ತೆಯಲ್ಲಿ ಕುಳಿತು ತಲೆ ಕೂದಲು ಬೋಳಿಸಿಕೊಂಡು ಆಕ್ರೋಶವನ್ನು ಹೊರಹಾಕಿದ್ದಾರೆ.
ಪ್ರತಿಭಟನಾ ರ‍್ಯಾಲಿ
ಗದಗ ನಗರದ ಕಿತ್ತೂರ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಗಿದ್ದು, ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿ ಮಾಜಿ ಸಚಿವರು, ಮಾಜಿ ಶಾಸಕರ ಫೋಟೋ ಸಹಿತ ಬ್ಯಾನರ್ ಹಾಕಿ ಶ್ರಧ್ಧಾಂಜಲಿ ಸಲ್ಲಿಸಲಾಯಿತು. ಪ್ರಭು ಚವ್ಹಾನ್, ಪಿ.ಟಿ. ಪರಮೇಶ್ವರ ನಾಯಕ್, ರಾಮಣ್ಣ ಲಮಾಣಿ, ಪಿ. ರಾಜೀವ್ ಸೇರಿದಂತೆ ಹಲವು ನಾಯಕರ ಫೋಟೊಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮುಳಗುಂದ ನಾಕದಲ್ಲಿ ರಸ್ತೆ ತಡೆ ನಡೆಸಲಾಗಿದ್ದು, ಸವಾರರಿಗೆ ಪರದಾಟ ನಡೆಸಲಾಯಿತು.
ಇದನ್ನೂ ಓದಿ: Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
ಶಿವಮೊಗ್ಗದಲ್ಲಿ ಆಕ್ರೋಶ
ಶಿವಮೊಗ್ಗದ ಮಲವಗೊಪ್ಪದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದ್ದು, ಮಲವಗೊಪ್ಪ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಅಲ್ಲದೆ, ಬಿ.ಎಚ್. ರಸ್ತೆ ಬಳಿ ಹೆದ್ದಾರಿ ತಡೆ ನಡೆಸಿ, ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.