Site icon Vistara News

SC ST Reservation: ಮಾರ್ಚ್‌ 30ಕ್ಕೆ ನಡೆಯಲ್ಲ ಬಂಜಾರ ಸಮುದಾಯದ ಪ್ರತಿಭಟನೆ; ನೀತಿ ಸಂಹಿತೆ ಜಾರಿ ಹಿನ್ನೆಲೆ ಮುಷ್ಕರ ವಾಪಸ್‌

Continued Banjara anger on Internal Reservation Protests in Shivamogga and Davanagere SC ST Reservation updates

ಶಿವಮೊಗ್ಗ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಗುರುವಾರ (ಮಾ. 30) ನಡೆಯಬೇಕಿದ್ದ ಬಂಜಾರ ಸಮುದಾಯದವರ ಬೃಹತ್ ಪ್ರತಿಭಟನೆಯನ್ನು ವಾಪಸ್‌ ಪಡೆಯಲಾಗಿದೆ. ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ತೀರ್ಮಾನವನ್ನು ಹಿಂತೆಗೆದುಕೊಳ್ಳಲಾಗಿದೆ.

ಈ ಸಂಬಂಧ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಬುಧವಾರ (ಮಾ. 29) ನಡೆಸಿದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಂಜಾರ, ಭೋವಿ, ಕೊರಚ, ಕೊರಮ ಸಮಾಜದ ಪ್ರಮುಖರು ಭಾಗಿಯಾಗಿದ್ದರು. ಬಳಿಕ ಬೋವಿ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.

ಒಳ ಮೀಸಲಾತಿ ಪ್ರಸ್ತಾವನೆ ಹಿಂಪಡೆಯಬೇಕು, ಶಿಕಾರಿಪುರದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಮಾಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ತಕ್ಕ ಉತ್ತರ ನೀಡುವುದಾಗಿ ಸಮುದಾಯದ ಮುಖಂಡರು ಹೇಳಿದ್ದಾರೆ.

ಮುಂದುವರಿದ ಬಂಜಾರರ ಆಕ್ರೋಶ; ಶಿವಮೊಗ್ಗ, ದಾವಣಗೆರೆಯಲ್ಲಿ ಪ್ರತಿಭಟನೆ ಬಿಸಿ

ಎಸ್‌ಸಿ-ಎಸ್‌ಟಿ ಮೀಸಲಾತಿಯಲ್ಲಿ (SC ST Reservation) ಒಳ ಮೀಸಲಾತಿ ನಿಗದಿಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ವಿರೋಧ ವಿರೋಧ ವ್ಯಕ್ತವಾಗುತ್ತಿದ್ದು, ಮೂರನೇ ದಿನವೂ ಆಕ್ರೋಶ ಮುಂದುವರಿದಿದೆ. ಶಿವಮೊಗ್ಗ, ದಾವಣಗೆರೆಯಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಶಿವಮೊಗ್ಗದ ಶಿಕಾರಿಪುರದಲ್ಲಿ ಹೊತ್ತಿಕೊಂಡಿರುವ ಕಿಡಿ ರಾಜ್ಯಾದ್ಯಂತ ವ್ಯಾಪಿಸುತ್ತಿರುವ ಬೆನ್ನಲ್ಲೇ ಶಿವಮೊಗ್ಗದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ತಯಾರಿ ನಡೆದಿದೆ. ಈ ಸಂಬಂಧ ಬಂಜಾರ ಸಮುದಾಯದವರು ಮಂಗಳವಾರ (ಮಾ. 28) ಸಭೆ ನಡೆಸಿ ಮಾರ್ಚ್‌ 30ರಂದು ಉಗ್ರ ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ. ಅಲ್ಲದೆ, ಶಿಕಾರಿಪುರ ಚಲೋ ನಡೆಸಲೂ ತೀರ್ಮಾನಿಸಲಾಗಿದೆ. ಈ ನಡುವೆ ಬುಧವಾರ (ಮಾ. 29) ಶಿವಮೊಗ್ಗದಲ್ಲಿ ಬಂಜಾರರ ಹೋರಾಟ ಮುಂದುವರಿದಿದೆ.

ಸಂಸದ ಬಿ.ವೈ. ರಾಘವೇಂದ್ರ ಅವರ ಫ್ಲೆಕ್ಸ್‌ ಅನ್ನು ಹರಿದುಹಾಕಿದ ಬಂಜಾರ ಸಮುದಾಯದ ಪ್ರತಿಭಟನಾಕಾರರು

ನಾರಾಯಣಪುರ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸ್ಥಳದಲ್ಲಿ ಅಳವಡಿಸಲಾಗಿದ್ದ ಸಂಸದ ಬಿ.ವೈ. ರಾಘವೇಂದ್ರ ಭಾವಚಿತ್ರವಿದ್ದ ಫ್ಲೆಕ್ಸ್ ಅನ್ನು ಹರಿದಿರುವ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಬ್ಯಾನರ್‌ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದರು. ಒಳ ಮೀಸಲಾತಿ ಕಡಿತ ವರದಿಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಆಯನೂರು-ಸವಳಂಗ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !

ದಾವಣಗೆರೆಯಲ್ಲಿ ಬಂಜಾರ ಸಮುದಾಯದವರಿಂದ ಬೈಕ್‌ ರ‍್ಯಾಲಿ

ದಾವಣಗೆರೆಯಲ್ಲಿ ಆಕ್ರೋಶ

ಎಸ್‌ಸಿ ಒಳ ಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ದಾವಣಗೆರೆಯ ಹೊನ್ನಾಳಿಯಲ್ಲಿ ಬಂಜಾರ ಸಮಾಜದಿಂದ ಪ್ರತಿಭಟನೆ ನಡೆದಿದ್ದು, ಐಬಿ ಸರ್ಕಲ್‌ನಿಂದ ಶಾಸಕ ಎಂ.ಪಿ. ರೇಣುಕಾಚಾರ್ಯ ನಿವಾಸದವರೆಗೂ ಪ್ರತಿಭಟನಾ ಮೆರವಣಿಗೆ ನಡೆದಿದೆ. ಈ ವೇಳೆ ರೇಣುಕಾಚಾರ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರ ಭಿಗಿ ಭದ್ರತೆ ಹಾಕಲಾಗಿತ್ತು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನಾಳಿ ತಾಲೂಕಿನಲ್ಲಿ ಬಂಜಾರ ಸಮಾಜದಿಂದ ಬೈಕ್ ರ‍್ಯಾಲಿ ನಡೆಸಲಾಗಿದ್ದು, ಸರ್ಕಾರ ನಿಗದಿಪಡಿಸಿರುವ ಒಳಮೀಸಲಾತಿಯನ್ನು ವಾಫಸ್‌ ಪಡೆಯಬೇಕು ಎಂದು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಯಾವುದೇ ಕಾರಣಕ್ಕೂ ಒಳ ಮೀಸಲಾತಿಯನ್ನು ಕೊಡಬಾರದು. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಸಮಾಜದ ಮುಖಂಡ ಡಾ. ಈಶ್ವರ ನಾಯಕ್ ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಾಣದ ಕೈಗಳ ಷಡ್ಯಂತ್ರ: ಬಿ ವೈ ರಾಘವೇಂದ್ರ

ಶಿಕಾರಿಪುರದಲ್ಲಿ ಪ್ರತಿಭಟನೆ ವೇಳೆ ತಮ್ಮ ನಿವಾಸಕ್ಕೆ ಕಲ್ಲು ಹೊಡೆದು ದಾಂಧಲೆ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ, ಮೀಸಲಾತಿ ನೆಪದಲ್ಲಿ ಕಾಂಗ್ರೆಸ್‌ನ ಕಾಣದ ಕೈಗಳು ಷಡ್ಯಂತ್ರ ಮಾಡಿವೆ. ಬಿಜೆಪಿ ವಿರೋಧಿ ಶಕ್ತಿಗಳು ಜನರನ್ನು ತಪ್ಪು ದಾರಿಗೆ ಎಳೆಯುವಲ್ಲಿ ಯಶಸ್ವಿಯಾಗಿದೆ. ಘಟನೆಗೆ ಮುಂಚಿತವಾಗಿ ಪೂರ್ವ ತಯಾರಿ ಮಾಡಲಾಗಿದೆ. ಜಿಲ್ಲೆ ಹಾಗೂ ಹೊರ ರಾಜ್ಯದವರಿಂದ ಈ ಪ್ರಯತ್ನವನ್ನು ಮಾಡಲಾಗಿದೆ. ಚುನಾವಣೆ ಹೊಸ್ತಿಲಲ್ಲಿ ವಿರೋಧ ಪಕ್ಷಗಳ ಸ್ಪಾನ್ಸರ್ ಪ್ರತಿಭಟನೆ ಇದಾಗಿತ್ತು. ಬಂಜಾರ ಸಮುದಾಯಕ್ಕಾಗಿ ನಮ್ಮ ಸರ್ಕಾರ ‌ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಮೀಸಲಾತಿ ಕುರಿತಂತೆ ಮನವರಿಕೆ ಮಾಡುವ ಕೆಲಸವು ಬಿಜೆಪಿಯಿಂದ ಆಗುತ್ತಿದೆ. ಪ್ರತಿ ತಾಂಡಾದ ನಮ್ಮ ಕಾರ್ಯಕರ್ತರಿಗೆ ಮೊದಲು ಮನವರಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: PAN-Aadhaar Link : ಈಗ ಪ್ಯಾನ್-ಆಧಾರ್‌ ಲಿಂಕ್‌ ಮಾಡಲು ಎಷ್ಟು ದಂಡ ನೀಡಬೇಕು?

ಬೊಮ್ಮಾಯಿ ಸರ್ಕಾರಕ್ಕೆ ಅಭಿನಂದಿಸ‌ಬೇಕು- ಶಾಸಕ ಅಶೋಕ ನಾಯಕ್

ಬಂಜಾರ ಸಮುದಾಯಕ್ಕೆ ಸರ್ಕಾರ ಮೀಸಲಾತಿ ಕೊಟ್ಟಿದೆ. ಜನಸಂಖ್ಯೆ ಹೆಚ್ಚಾದಂತೆ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಹೋರಾಟ ನಡೆಯುತ್ತಲೇ ಇತ್ತು. ಈವರೆಗೆ ಬಂದಂತಹ ಯಾವುದೇ ಸರ್ಕಾರ ತುಳಿತಕ್ಕೊಳ್ಳಗಾದವರ ಕೂಗು ಕೇಳಿರಲಿಲ್ಲ. ಆದರೆ, ನಮ್ಮ ಸರ್ಕಾರ 15 ಪರ್ಸೆಂಟ್ ಇದ್ದ ಮೀಸಲಾತಿಯನ್ನು ಶೇಕಡಾ 17ಕ್ಕೆ ಹೆಚ್ಚಳ ಮಾಡಿದೆ. ನ್ಯಾಯ ಕೊಡುವಂತಹ ಕೆಲಸ ಮಾಡಿದ ಬೊಮ್ಮಾಯಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು. ಪರಿಶಿಷ್ಟ ಜಾತಿಗಳಲ್ಲಿ 101 ಉಪ ಜಾತಿಗಳಿವೆ. ಇವರಿಗಿದ್ದ ಶೇಕಡಾ 15ರಷ್ಟು ಮೀಸಲಾತಿ ಕೆಲವೇ ಕೆಲವು ವರ್ಗಕ್ಕೆ ಸಿಗುತ್ತಿದೆ. ಹೀಗಾಗಿ ಒಳ ಮೀಸಲಾತಿಗಾಗಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲಾಯಿತು ಎಂದು ಶಿವಮೊಗ್ಗದಲ್ಲಿ ಗ್ರಾಮಾಂತರ ಶಾಸಕ ಅಶೋಕ ನಾಯಕ್ ಹೇಳಿದರು.

ಸದಾಶಿವ ಆಯೋಗ ಅಧ್ಯಯನ ಮಾಡಿ ಕೊಟ್ಟಿದ್ದ ವರದಿಯನ್ನು ಅಂದಿನ ಸರ್ಕಾರ ಅದನ್ನು ಜಾರಿ ಮಾಡಲು ಹೋಗಲಿಲ್ಲ. ನಮ್ಮ ಸರ್ಕಾರ ಅದರ ಗಂಭೀರತೆ ಅರಿತುಕೊಂಡು ಸಂಪುಟ ಉಪ‌ ಸಮಿತಿಯನ್ನು ರಚಿಸಿತ್ತು. 2011ರ ಪ್ರಕಾರ 1.04 ಲಕ್ಷ ಪರಿಶಿಷ್ಟ ಜಾತಿ ಜನಸಂಖ್ಯೆ ಇದೆ. ಇವರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಯಿತು. ಆ ನಾಲ್ಕು ವಿಭಾಗಗಳ ಜನಸಂಖ್ಯೆ ಆಧಾರಗಳ ಆಧಾರದ ಮೇಲೆ ಒಳ ಮೀಸಲಾತಿ ನಿಗದಿ ಮಾಡಲಾಗಿದೆ. ಎಲ್ಲ ಸಮುದಾಯಕ್ಕೂ ಪಾರದರ್ಶಕವಾಗಿ ನ್ಯಾಯವನ್ನು ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್‌, ಮುನಿರತ್ನ ಕರೆಸಿಕೊಂಡು ಚರ್ಚೆ

ಸಮುದಾಯದಲ್ಲಿ ಒಂದಷ್ಟು ಒಡಕು ಮೂಡಿಸುವ ಕೆಲಸ ನಡೆದಿತ್ತು. ನಮ್ಮ ಬಂಜಾರ ಸಮುದಾಯಕ್ಕೆ ಶೇಕಡಾ 3ರಷ್ಟು ಒಳ ಮೀಸಲಾತಿ ಸಿಗುವ ನಿರೀಕ್ಷೆಯಲ್ಲಿ ಇದ್ದೆವು. ಆದರೆ ನಮ್ಮ ಸರ್ಕಾರ ಶೇಕಡ 4.5 ಮೀಸಲಾತಿಯನ್ನು ನೀಡಿದೆ. ಬಂಜಾರ ಸಮುದಾಯದಲ್ಲಿ ಗುಳೇ ಹೋಗುವ ಪದ್ಧತಿ ಇರುವುದರಿಂದ ಸರಿಯಾದ ಲೆಕ್ಕ ಸಿಗುವುದಿಲ್ಲ. ಹೀಗಾಗಿ ನಮ್ಮ ಸಮುದಾಯಕ್ಕೆ ಅನ್ಯಾಯ ಆಗದಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಸರ್ಕಾರ ಉತ್ತಮ ನಿರ್ಧಾರವನ್ನು ಕೈಗೊಂಡಿದೆ. ಉಳಿದ ಸಮುದಾಯಕ್ಕೆ ನ್ಯಾಯಯುತ ಮೀಸಲಾತಿಯನ್ನು ಸರ್ಕಾರ ನೀಡಿದೆ. ಇದರ ನಡುವೆಯೂ ಶಿಕಾರಿಪುರದಲ್ಲಿ ನಡೆಯಬಾರದ ಘಟನೆ ನಡೆದಿದೆ. ಕಾರ್ಯಕರ್ತರಲ್ಲಿ ಯಡಿಯೂರಪ್ಪ ಏಳಿಗೆಗೆ ನಮ್ಮ ಸಮಾಜದ ಕೊಡುಗೆ ಇದೆ. ಅವರು ಕೂಡ ನಮ್ಮ ಸಮಾಜದ ಏಳ್ಗೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ಕೆಲವರು ಮಾಡಿದ ಕೃತ್ಯ ಖಂಡನೀಯ ಎಂದು ಹೇಳಿದರು.

Exit mobile version