ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರ ಸಾವಿನ ಸಂಖ್ಯೆ ಏರುತ್ತಲೇ ಇದೆ. ಈಗಾಗಲೇ ಏಳು ಜನರು ಬಲಿಯಾಗಿದ್ದಾರೆ. ಈಗ ಸಿಂಧನೂರು ತಾಲೂಕಿನಲ್ಲಿಯೂ ಕಲುಷಿತ ನೀರಿನ ಸಮಸ್ಯೆ ವ್ಯಾಪಿಸಿದೆ. ಕಲುಷಿತ ನೀರಿನಿಂದಾಗಿ ಚರ್ಮದ ಸಮಸ್ಯೆ, ಅಲರ್ಜಿ ಕಾಯಿಲೆಗಳಿಗೆ ತುತ್ತಾಗುವ ಮೂಲಕ ಹಳ್ಳಿಗರು ಹೈರಾಣರಾಗಿದ್ದಾರೆ.
ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪ್, ವೆಂಕಟಗಿರಿ ಕ್ಯಾಂಪ್‌ಗಳಲ್ಲಿ ಮಕ್ಕಳು, ವೃದ್ಧರು, ವಯಸ್ಕರರಿಗೆ ಅಲರ್ಜಿ ತುರಿಕೆಯಂತಹ ಕಾಯಿಲೆಗಳು ಬಾಧಿಸುತ್ತಿದೆ. ತುರಿಕೆ ತಾಳಲಾರದೆ ಚಿಕ್ಕ ಮಕ್ಕಳ ಗೋಳಾಟ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಎಂದರೆ ಸ್ಥಳೀಯ ಕ್ಲಿನಿಕ್‌ಗಳಲ್ಲಿ ದಿನಕ್ಕೆ ಏನಿಲ್ಲವೆಂದರೂ ಸುಮಾರು 10 ಜನವಾದರೂ ಚಿಕಿತ್ಸೆಗೆ ಬರುತ್ತಿದ್ದಾರೆ.
ಇದನ್ನೂ ಓದಿ | ರಾಯಚೂರು ಕಲುಷಿತ ನೀರು ಸೇವನೆ ಪ್ರಕರಣ: ಮತ್ತೊಬ್ಬ ಮಹಿಳೆ ಸಾವು
ತುಂಗಭದ್ರಾ ನದಿಯಿಂದ ಕಾಲುವೆ ಮೂಲಕ ಕೆರೆಗೆ ನೀರು ಸಂಗ್ರಹಣೆ ಮಾಡಿ ಬಳಿಕ ಅಲ್ಲಿಂದ ನೀರನ್ನು ಓವರ್ ಹೆಡ್ ಟ್ಯಾಂಕ್‌ಗೆ ಸರಬರಾಜು ಮಾಡಲಾಗಿತ್ತು. ಈ ನೀರನ್ನು ಶುದ್ಧೀಕರಣಗೊಳಿಸದೆ ಗ್ರಾಮಗಳಿಗೆ ಸರಬರಾಜು ಮಾಡಲಾಗಿದೆ. ಹೀಗಾಗಿ ಸುಮಾರು 6000 ಸಾವಿರ ಜನರಿಗೆ ನೀರು ಸೇವನೆಯಿಂದ ತೊಂದರೆಯಾಗಿದೆ. ಜನರಿಗೆ ಕೆಸರು ತುಂಬಿಕೊಂಡಿರುವ ಕೆರೆ ನೀರನ್ನೇ ಅಧಿಕಾರಿಗಳು ಸರಬರಾಜು ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ.
ಹೈರಾಣಾಗಿದ್ದ ವಲ್ಕಂದಿನ್ನಿ, ಜೂಕೂರು ಗ್ರಾಮಸ್ಥರು
ಇದಕ್ಕೂ ಮೊದಲು ಅಂದರೆ ಮೇ 31 ರಂದು ಜಿಲ್ಲೆಯ ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮದ ಜನತೆ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದರು. ಸುಮಾರು ೮೦ ಮಂದಿ ತೀವ್ರ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವರು ಮೃತಪಟ್ಟಿದ್ದರು. ಎರಡು ಗ್ರಾಮಕ್ಕೂ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನೇರವಾಗಿ ಹೊಳೆ ನೀರು ಮನೆಗಳಿಗೆ ಪೂರೈಕೆಯಾಗಿರುವುದೇ ಕಾರಣ ಎಂದು ವರದಿ ನೀಡಿದ್ದರು. ಹೀಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನತೆ ಸಮಸ್ಯೆಗೆ ಸಿಲುಕುವಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ | ಕಲುಷಿತ ನೀರು ಸೇವನೆ ಪ್ರಕರಣ: ಮತ್ತೊಬ್ಬರ ಸಾವು, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 80ಕ್ಕೆ ಏರಿಕೆ