Site icon Vistara News

ರಾಜ್ಯದಲ್ಲಿ ಮಳೆ ಅಬ್ಬರ: ವಿವಿಧೆಡೆ ರಸ್ತೆ, ಸೇತುವೆಗಳು ಜಲಾವೃತ

ಕೊಡಗಿನಲ್ಲಿ ಮುಂದುವರೆದ ಮಳೆಯ ಅಬ್ಬರ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕಾಫಿನಾಡು ಕೊಡಗು, ದಕ್ಷಿಣ ಕನ್ನಡ ಸೇರಿ ವಿವಿಧೆಡ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ. ಅನೇಕ ಕಡೆಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆಗಳು ಮುಳುಗಡೆಯಾಗಿವೆ.

ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಭಾರಿ ಮಳೆಯಿಂದಾಗಿ ಕಾವೇರಿ ನದಿ ನೀರಿನ‌ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಮಡಿಕೇರಿ ತಾಲೂಕಿನ ನಾಪೋಕ್ಲು – ಭಾಗಮಂಡಲ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.

ರಸ್ತೆ ಮೇಲೆ 2 ರಿಂದ ೩ ಅಡಿ ನೀರು ನಿಂತಿದೆ. ಮಳೆ ಮತ್ತಷ್ಟು ಹೆಚ್ಚಾದಲ್ಲಿ ಭಾಗಮಂಡಲ, ಮಡಿಕೇರಿ ರಸ್ತೆ ಬಂದ್ ಆಗುವ ಸಾಧ್ಯತೆ ಇದೆ. ಭಾರಿ ಮಳೆಯಿಂದಾಗಿ ಕೆಲವು ಕಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಕೋರಂಗಾಲದ ವಾಜಪೇಯಿ ವಸತಿ ಶಾಲೆಗೆ ಎಂಟು ದಿನ ರಜೆ ಘೋಷಿಸಲಾಗಿದೆ. ಕೊಡಗು ಮತ್ತು ದಕ್ಷಿಣ ಕನ್ನಡದ ಹಲವು ಕಡೆಗಳಲ್ಲಿ ಕೆಲ ದಿನಗಳಿಂದ ಭೂಮಿ ಕಂಪಿಸಿದ ಅನುಭವ ಆಗುತ್ತಿರುವುದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ. 

ಇದನ್ನೂ ಓದಿ | ಕೊಡಗು ಜಿಲ್ಲೆಯಾದ್ಯಂತ ವರುಣನ ಅಬ್ಬರ, ರಾಜ್ಯದಲ್ಲಿ ಮುಂಗಾರು ಮಳೆ ಚುರುಕು

ಚಿಕ್ಕಮಗಳೂರಿನ ಕುದುರೆ ಮುಖ ಸುತ್ತಮುತ್ತ ಭಾನುವಾರ ರಾತ್ರಿಯಿಡೀ ಇಡೀ ರಾತ್ರಿ ಮಳೆ ಸುರಿದಿದೆ. ಭಾರೀ ಮಳೆಗೆ ಮೈದುಂಬಿ ಹರಿಯುತ್ತಿರುವ ಭದ್ರಾ ನದಿಯ ಕಾರಣಕ್ಕೆ ಕಳಸದ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ. ಕಳಸ-ಹೊರನಾಡು ದೇವಸ್ಥಾನ ಸಂಪರ್ಕ ಕಡಿತವಾಗಿದ್ದು, ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ದಕ್ಷಿಣ ಕನ್ನಡದಲ್ಲಿಯೂ ಮಳೆ ಮುಂದುವರಿದಿದ್ದು, ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಬೆಳ್ತಂಗಡಿಯ ಶಾಲೆಗಳಿಗೆ ರಜೆ ಸೋಮವಾರ ರಜೆಯನ್ನು ಘೋಷಣೆ ಮಾಡಲಾಗಿತ್ತು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಕಾರಣಕ್ಕೆ ನೇತ್ರಾವತಿ ನದಿಯಲ್ಲಿ ಹೆಚ್ಚಿದ ಒಳಹರಿವು ಹೆಚ್ಚಾಗಿದೆ. ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ. ಇಲ್ಲಿನ ಸ್ನಾನಘಟ್ಟಗಳು ಜಲಾವೃತವಾಗಿವೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ಗಾಳಿ ಮುಂದುವರಿದಿದ್ದು, 64.5 ಮಿ.ಮೀ.ನಿಂದ 115.5 ಮಿ.ಮೀ.ವರೆಗೆ ಮಳೆ ಬೀಳುವ ಸೂಚನೆಯಿದೆ. ಕಡಲತೀರ, ನದಿಪಾತ್ರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲೂ ಮಳೆ ಮುಂದುವರಿದಿದೆ. ಗಂಗಾವಳಿ ನದಿತುಂಬಿ ಹರಿಯುತ್ತಿದ್ದು, ಯಲ್ಲಾಪುರದ ಅರಬೈಲ್‌ ಸಮೀಪದ ಫಣಸಗುಳಿ ಬಳಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಿಂದ ಕೈಗಡಿ, ಶೇವ್ಕಾರ, ಹೆಗ್ಗಾರ, ಕಲ್ಲೇಶ್ವರ ಭಾಗದ ಜನರ ಓಡಾಟಕ್ಕೆ ತೊಂದರೆಯಾಗಿದೆ.

ಇದನ್ನೂ ಓದಿ | Rain News | ಒಂದೇ ದಿನದಲ್ಲಿ ಕೆಆರ್‌ಎಸ್‌ ಒಳಹರಿವು ದುಪ್ಪಟ್ಟು

Exit mobile version