ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅಧಿಕಾರಿಗಳ ಎತ್ತಂಗಡಿ ಪರ್ವ ಮುಂದುವರಿದಿದೆ. ತಹಸೀಲ್ದಾರ್ ವರ್ಗಾವಣೆ ಬೆನ್ನಲ್ಲೇ ಮತ್ತೆ ಮೂವರ ವರ್ಗಾವಣೆಗೆ ಸೂಚನೆ ನೀಡಲಾಗಿದೆ. ಶಾಸಕ ಕುಮಾರ್ ಬಂಗಾರಪ್ಪ ಮನವಿ ಹಿನ್ನೆಲೆಯಲ್ಲಿ ಮೂವರ ವರ್ಗಾವಣೆಗೆ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಡಿಸಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಸರ್ಕಾರ ಹೊರಡಿಸಿದ ಆದೇಶದಲ್ಲಿ ಹಾಲಿ ತಹಸೀಲ್ದಾರ್ ಡಾ. ಮೋಹನ್ ಭಸ್ಮೆ ಅವರನ್ನು ಧಾರವಾಡ ತಹಸೀಲ್ದಾರ್ ಆಗಿ ವರ್ಗಾಯಿಸಲಾಗಿತ್ತು. ಇದು ಕುಮಾರ್ ಬಂಗಾರಪ್ಪ ಅವರು ಶಾಸಕರಾಗಿರುವ ಸೊರಬದಲ್ಲಿ ಅವರ ಅಧಿಕಾರದ ಅವಧಿಯ ಕಳೆದ ೪ ವರ್ಷ ೮ ತಿಂಗಳಲ್ಲಿ ೧೪ ತಹಸೀಲ್ದಾರ್ ವರ್ಗಾವಣೆಯಾಗಿತ್ತು. ಇದರ ಬೆನ್ನಲ್ಲೇ ಸೊರಬದ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್, ಎಫ್‌ಡಿಎ, ಆರ್‌ಐ ವರ್ಗಾವಣೆಗೆ ಸೂಚನೆ ನೀಡಲಾಗಿದೆ.
ಮೂವರನ್ನು ವರ್ಗಾವಣೆ ಮಾಡಲು ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಸೊರಬ ತಾಲೂಕಿಗೆ ಇದ್ದು, ಅಧಿಕಾರಿಗಳ ವರ್ಗಾವಣೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳದೆ ಜನ ನಿತ್ಯ ಅಲೆದು ಹೈರಾಣಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಂದಾಯ ಇಲಾಖೆ ನೌಕರರು ಆಕ್ರೋಶ
ಸೊರಬದಲ್ಲಿ ವಿವಿಧ ಇಲಾಖೆಯ ನೌಕರರ ವರ್ಗಾವಣೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ನೌಕರರು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅನಗತ್ಯ ವರ್ಗಾವಣೆ ಮಾಡುತ್ತಿರುವುದನ್ನು ವಿರೋಧಿಸಿ ನೌಕರರು ಮನವಿ ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ | ಸೊರಗಿದ ಸೊರಬ : 4 ವರ್ಷ 8 ತಿಂಗಳಲ್ಲಿ 14 ತಹಸೀಲ್ದಾರ್ ವರ್ಗಾವಣೆ: ಕುಮಾರ್ ಬಂಗಾರಪ್ಪ ಊರಲ್ಲಿ ಅಷ್ಟೊಂದು ಕಿರಿಕಿರಿನಾ?