ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೀಡಿರುವ ಬಿ ರಿಪೋರ್ಟ್ ಸರಿಯಾಗಿಲ್ಲ. ಪ್ರಕರಣದ ತನಿಖೆಯನ್ನು ಬೇರೆ ತನಿಖಾ ಸಂಸ್ಥೆಗೆ ಒಪ್ಪಿಸುವಂತೆ ಕೋರಿ ಮೃತನ ಸಹೋದರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಮಾಡಿದ ಕಾಮಗಾರಿಯ ಹಣ ಪಾವತಿಸುತ್ತಿಲ್ಲ. ಶೇಕಡಾ ೪೦ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದು ಮಾತ್ರವಲ್ಲದೆ, ಪ್ರಧಾನಿ ಮೋದಿಯವರೆಗೆ ದೂರು ನೀಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಕಳೆದ ಏಪ್ರಿಲ್ ೧೨ರಂದು ಉಡುಪಿಯ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗೆಳೆಯರೊಂದಿಗೆ ಬಂದಿದ್ದ ಅವರು ಒಬ್ಬರೇ ಒಂದು ಕೋಣೆಯಲ್ಲಿ ಇದ್ದು ಅಲ್ಲೇ ಪ್ರಾಣ ಕಳೆದುಕೊಂಡಿದ್ದರು. ಸಾಯುವ ಮುನ್ನ ತಮ್ಮ ಗೆಳೆಯರೆಲ್ಲರಿಗೂ ತಾವು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ಮೋಸಗಳ ಬಗ್ಗೆ ಸಂದೇಶ ಕಳುಹಿಸಿದ್ದರು. ಅದರಲ್ಲಿ ಆಗ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಗಂಭೀರವಾದ ಆರೋಪ ಮಾಡಿದ್ದರು. ಅವರು ಸಂದೇಶ ಕಳುಹಿಸಿದ ಲೊಕೇಶನ್ ಆಧಾರದಲ್ಲಿ ಉಡುಪಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡ ಹೋಟೆಲನ್ನು ಪತ್ತೆ ಹಚ್ಚಲಾಗಿತ್ತು.
ಈ ನಡುವೆ, ತನಿಖೆಯನ್ನು ನಾನಾ ಕೋನಗಳಿಂದ ನಡೆಸಿದ ಉಡುಪಿ ಪೊಲೀಸರು ಅಂತಿಮವಾಗಿ ಜುಲೈ ೨೦ಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಆತ್ಮಹತ್ಯೆಯಲ್ಲಿ ಈಶ್ವರಪ್ಪ ಅವರ ಪಾತ್ರವಿಲ್ಲ ಎಂದು ವಿವರಿಸಲಾಗಿತ್ತು. ಹೀಗಾಗಿ ಈಶ್ವರಪ್ಪ ಮತ್ತು ಅವರ ಬಣದವರು ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿದ್ದರು.
ಮತ್ತೆ ಎದ್ದುಬಂತು ಪ್ರಕರಣ
ಪೊಲೀಸರು ನೀಡಿದ ಬಿ ರಿಪೋರ್ಟ್ ಬಗ್ಗೆ ಆಗಲೇ ಸಂತೋಷ್ ಪಾಟೀಲ್ ಅವರ ಕುಟುಂಬಿಕರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಅವರು ಬಿ ರಿಪೋರ್ಟ್‌ನ್ನು ಪ್ರಶ್ನಿಸಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ʻʻಉಡುಪಿ ಪೊಲೀಸರ ತನಿಖೆ ಸರಿಯಿಲ್ಲ, ಅವರು ಪೂರ್ವಗ್ರಹಪೀಡಿತರಾಗಿ ತನಿಖೆ ನಡೆಸಿದ್ದಾರೆ. ಹೀಗಾಗಿ ಬೇರೊಂದು ತನಿಖಾ ಸಂಸ್ಥೆಯ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸಬೇಕುʼʼ ಎಂದು ಅವರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆಪ್ತರಾದ ಬಸವರಾಜ್, ರಮೇಶ್ ಅವರ ಹೆಸರು ಕೂಡ ಎಫ್ಐಆರ್ನಲ್ಲಿ ದಾಖಲಾಗಿತ್ತು. ಐಪಿಸಿ ಸೆಕ್ಷನ್ 34 ಮತ್ತು ಮತ್ತೊಂದು ಕಲಂ ಅಡಿಯಲ್ಲಿ ಸಂತೋಷ್ ಸೋದರ ಸಂಬಂಧಿ ಪ್ರಶಾಂತ ಪಾಟೀಲ್ ದೂರು ದಾಖಲಿಸಿದ್ದಾರೆ.
ʻʻರಸ್ತೆ ಕಾಮಗಾರಿಯ 4 ಕೋಟಿ ಬಿಡುಗಡೆಗೆ ಈಶ್ವರಪ್ಪ ತಮ್ಮ ಆಪ್ತರ ಮೂಲಕ ಶೇ 40ರಷ್ಟು ಕಮಿಷನ್ಗೆ ಒತ್ತಾಯಿಸಿದ್ದರು. ಈ ಬಗ್ಗೆ ಪ್ರಧಾನಿ ಸೇರಿದಂತೆ ಹಲವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಬಿಲ್ ಮಂಜೂರು ಮಾಡದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರೋಪ ಮಾಡಿದ್ದರು. ‘ಇದು ಅನುಮಾನಾಸ್ಪದ ಸಾವು ಇದಾಗಿದ್ದು, ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಪ್ರಶಾಂತ್ ಪಾಟೀಲ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ| ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪಗೆ ಕ್ಲೀನ್‌ಚಿಟ್