Site icon Vistara News

Karnataka Politics : ತಾರಕಕ್ಕೆ ರಾಜ್ಯ ಸರ್ಕಾರ- ಗುತ್ತಿಗೆದಾರರ ತಿಕ್ಕಾಟ; ರಾಷ್ಟ್ರ ಮಟ್ಟದಲ್ಲಿ ಕೈ ಮಾನ ತೆಗೆಯಲು ಬಿಜೆಪಿ ರೆಡಿ!

BBMP Contractors Association Appeals To Basavaraj Bommai

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಗುತ್ತಿಗೆದಾರರ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಈ ವಿಚಾರವಾಗಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು (Karnataka Politics) ನಡೆದಿವೆ. ಕಳೆದ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್‌ ಕಮಿಷನ್‌ ಕೇಳುತ್ತಿದೆ ಎಂದು ಆರೋಪಿಸಿದ್ದ ಗುತ್ತಿಗೆದಾರರ ಸಂಘದವರು (Contractors Association) ಈಗ ಬಾಕಿ ಬಿಲ್‌ ಪಾವತಿಗಾಗಿ ಬಿಜೆಪಿಯ ಸಹಾಯವನ್ನು ಕೇಳಿದ್ದಾರೆ. ಅಲ್ಲದೆ, ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ವಿರುದ್ಧ 15 ಪರ್ಸೆಂಟ್‌ ಕಮಿಷನ್‌ ಕೇಳಿದ್ದಾರೆಂದು ರಾಜ್ಯಪಾಲರಿಗೂ (Governor of Karnataka) ದೂರನ್ನು ಸಲ್ಲಿಸಲಾಗಿದೆ. ಈ ನಡುವೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ (Karnataka State Contractors Association) ಅಧ್ಯಕ್ಷ ಕೆಂಪಣ್ಣ ಶುಕ್ರವಾರ (ಆಗಸ್ಟ್‌ 11) ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಇನ್ನು ಬಿಜೆಪಿ ಈ ವಿಷಯವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗುವ ಪ್ಲ್ಯಾನ್‌ ಹಾಕಿಕೊಂಡಿದೆ. ಗುತ್ತಿಗೆದಾರರ ಸಂಘದವರನ್ನು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಯಾರು ಕರೆಯುತ್ತಿದ್ದಾರೆ? ಇದರ ಹಿಂದೆ ಯಾರು ಇದ್ದಾರೆ ಎಂಬುದು ನನಗೆ ಗೊತ್ತು ಎಂದು ‌ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಅವಧಿಯಲ್ಲಿ ಬಿಬಿಎಂಪಿ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಂಶಯ ವ್ಯಕ್ತಪಡಿಸಿ ಹಣ ಪಾವತಿಯನ್ನು ತಡೆಹಿಡಿದಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧದ ತಮ್ಮ ಹೋರಾಟಕ್ಕೆ ಕೈ ಜೋಡಿಸಿ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ನೇತೃತ್ವದ ನಿಯೋಗದವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ (Former CM Basavaraj Bommai) ಹಾಗೂ ಮಾಜಿ ಸಚಿವ ಆರ್.‌ ಅಶೋಕ್‌ (Former minister R Ashok) ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: No Confidence Motion: ಪ್ರತಿಪಕ್ಷಗಳಿಂದ ನೋ ಬಾಲ್‌, ನಮ್ಮಿಂದ ಸೆಂಚುರಿ ಮೇಲೆ ಸೆಂಚುರಿ; ಕುಟುಕಿದ ಮೋದಿ

ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರು(Bruhat Bengaluru Mahanagara Palike (BBMP) Contractor) ತಮ್ಮ ಸಮ್ಮುಖದಲ್ಲಿ ನೆರವೇರಿಸಿದ್ದಾರೆ. ಆದರೆ, ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್‌ ಅವರು, ಕಾಮಗಾರಿ ಬಗ್ಗೆ ಸಂಶಯ ವ್ಯಕ್ತಪಡಿಸಿ ತನಿಖಾ ತಂಡವನ್ನು ರಚಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಆದರೆ, ಈ ತನಿಖಾ ಸಂಸ್ಥೆಗಳು ಪ್ರತಿಯೊಂದು ಕಾಮಗಾರಿಗಳನ್ನು ಪರಿಶೀಲಿಸಿ ವರದಿ ನೀಡುವುದು ತುಂಬಾ ತಡವಾಗುತ್ತದೆ. ಈಗಾಗಲೇ ಪಾಲಿಕೆಯಲ್ಲಿ ಹಣ ಪಾವತಿ ವಿಳಂಬವಾಗಿ ಗುತ್ತಿಗೆದಾರರ ಪರಿಸ್ಥಿತಿ ಸಂಕಷ್ಟಕ್ಕೆ ತುತ್ತಾಗಿದೆ. ಹಲವಾರು ಗುತ್ತಿಗೆದಾರರು ಈಗಾಗಲೇ ದಯಾಮರಣ ಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ತನಿಖಾ ತಂಡದವರು ತನಿಖೆ ನಡೆಸಿ ವರದಿ ನೀಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಈಗಾಗಲೇ ಪೂರ್ಣಗೊಳಿಸಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿ ಎಂದು ಡಿಸಿಎಂ ಸಹಿತ ಸಿಎಂಗೆ ಮನವಿ ಮಾಡಿದ್ದೇವೆ. ಆದರೂ ಪಾವತಿ ಮಾಡಿಲ್ಲ. ನಮ್ಮ ನ್ಯಾಯ ಸಮ್ಮತ ಕೋರಿಕೆಗೆ ಸಹಕಾರವನ್ನು ನೀಡಿ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಕೋರಿದ್ದಾರೆ. ಬುಧವಾರವಷ್ಟೇ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ, ಶಾಸಕ ಅಶ್ವತ್ಥನಾರಾಯಣ್ ಅವರನ್ನು ಭೇಟಿಯಾಗಿದ್ದ ನಿಯೋಗ ಸಹಕಾರ ಕೋರಿತ್ತು. ಅಲ್ಲದೆ, ಸಚಿವರಾಗಿರುವ ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿತ್ತು.

ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಬಿಜೆಪಿ ತಂತ್ರ

ಡಿಸಿಎಂ ಡಿ.ಕೆ. ಶಿವಕುಮಾರ್ ಮೇಲಿನ‌ 15 ಪರ್ಸೆಂಟ್ ಕಮಿಷನ್ ಬಗ್ಗೆ‌ ದೆಹಲಿಯಲ್ಲಿ ಪ್ರಸ್ತಾಪಿಸಿ, ಕಾಂಗ್ರೆಸ್‌ಗೆ ದೊಡ್ಡ ಮುಜುಗರ ತರಲು ಬಿಜೆಪಿ ಪ್ಲ್ಯಾನ್‌ ಮಾಡಿಕೊಂಡಿದೆ.

ಸಮಸ್ಯೆ ಬಗೆಹರಿಸುತ್ತೇವೆ: ಆರ್‌. ಅಶೋಕ್‌

ಗುತ್ತಿಗೆದಾರರು ಸಮಸ್ಯೆಯನ್ನು ಆಲಿಸಿದ ಮಾಜಿ ಸಚಿವ ಆರ್.‌ ಅಶೋಕ್‌, ನಿಮ್ಮ ಸಮಸ್ಯೆಗಳನ್ನು ನಾವು ಸರ್ಕಾರಕ್ಕೆ ತಿಳಿಸುತ್ತೇವೆ. ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಮ್ಮ ಉದ್ದೇಶ ಬೆಂಗಳೂರಿನ ಕೆಲಸ ನಿಲ್ಲಬಾರದು. ಪಾರ್ಕ್ ಕ್ಲೀನಿಂಗ್, ಕಸ‌ ಎತ್ತುವುದು ಯಾವುದೂ ‌ನಿಲ್ಲಬಾರದು. ಕಾಂಗ್ರೆಸ್‌ನವರು ‌ಒಂದು ರೂಪಾಯಿ ಹಣ ತಗೊಳ್ಳಲ್ಲ ಅಂತ ಬಂದರು. ಎರಡು ತಿಂಗಳಿಂದ ಯಾವುದೇ ಪ್ಲ್ಯಾನ್ ಮಂಜೂರು ಆಗಿಲ್ಲ.26 ಕಂಡಿಷನ್ ಹಾಕಿದ್ದಾರೆ. ಅದೆಲ್ಲಾ ಪೂರೈಸಬೇಕಾದ್ರೆ 26 ವರ್ಷ ಬೇಕಾಗುತ್ತದೇನೋ ಎಂದು ಕುಟುಕಿದರು.

ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಟ್ ಮಾಡಲು ಹೊರಟಿದ್ದಾರೆ

3 ವರ್ಷದ ಹಿಂದೆ ಕಳೆ ಕಿತ್ತಿರುವುದನ್ನು ಚೆಕ್ ಮಾಡಲು ಹೊರಟಿದ್ದಾರೆ. ಆದರೆ, ಅಲ್ಲಿಂದ ಇಲ್ಲಿಯವರೆಗೆ 30 ಸಲ ಕಳೆ ಬಂದಿರುತ್ತದೆ. ಕಿತ್ತಿರುತ್ತಾರೆ. ಅಂದ್ರೆ ದಾಖಲೆ ಯಾವುದಕ್ಕೂ ಸಿಗಬಾರದು. ದಾಖಲೆ ಇಲ್ಲ‌‌ ಅಂತ ಬಿಲ್ ಕೊಡುವುದಿಲ್ಲ. ನಾನು ನಾಲ್ಕು ಸಾರಿ ಬೆಂಗಳೂರು ಉಸ್ತುವಾರಿ ಆಗಿದ್ದೆ. ಆದ್ರೆ ಹೀಗೆ ಯಾವತ್ತೂ ಮಾಡಿಲ್ಲ. ಅವರು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಟ್ ಮಾಡಲು ಹೊರಟಿದ್ದಾರೆ. ಬಿಜೆಪಿ‌ ಇದ್ದಾಗ ಪೇ ಸಿಎಂ ಅಂತ ಮಾಡಿದ್ರಿ. ಆದರೆ, ನೀವು ಈಗ ಮಾಡುತ್ತಿರುವುದು ಏನು? ಎಂದು ಆರ್.‌ ಅಶೋಕ್‌ ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಸರ್ಕಾರಕ್ಕೆ 11 ಪ್ರಶ್ನೆ ಹಾಕಿದ ಮಾಜಿ ಸಚಿವ ಅಶೋಕ್

ಇದೇ ವೇಳೆ ಕಾಂಗ್ರೆಸ್‌ ಸರ್ಕಾರಕ್ಕೆ ಮಾಜಿ ಸಚಿವ ಆರ್‌. ಅಶೋಕ್‌ 11 ಪ್ರಶ್ನೆಗಳನ್ನು ಕೇಳಿದ್ದಾರೆ.

ಡೆಲ್ಲಿಗೆ ಯಾರು ಕರಿಯುತ್ತಾ ಇದ್ದಾರೆ ಅಂತ ಗೊತ್ತಿದೆ: ಡಿಸಿಎಂ ಡಿ‌.ಕೆ. ಶಿವಕುಮಾರ್

ಗುತ್ತಿಗೆದಾರರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ‌.ಕೆ. ಶಿವಕುಮಾರ್, ಕಾನೂನು ಪ್ರಕಾರ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ. ಕೆಂಪಣ್ಣ ದೂರು ಕೊಟ್ಟಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕು. ಕೆಲಸಕ್ಕೆ ಮತ್ತು ಜನರಿಗೆ ನ್ಯಾಯ ಒದಗಿಸಬೇಕು. ಸರ್ಕಾರಕ್ಕೆ ನ್ಯಾಯ ಒದಗಿಸಬೇಕು. ಪ್ರಚಾರಕ್ಕೆ ಯಾರು ಬೇಕಾದರೂ ಹೋಗಲಿ. ಡೆಲ್ಲಿಗೆ ಯಾರು ಕರೆಯುತ್ತಿದ್ದಾರೆ ಅಂತ ನನಗೆ ಗೊತ್ತಿದೆ. ದೆಹಲಿಗೆ ಬಂದು ಸ್ಟೇಟ್‌ಮೆಂಟ್ ಕೊಡಿ ಅಂತ ಕರೆಯುತ್ತಿದ್ದಾರೆ. ಪ್ರೆಸ್ ಮುಂದೆ ಯಾರು ಕಳಿಸುತ್ತಿದ್ದಾರೆ ಅಂತ ಎಲ್ಲವೂ ನನಗೆ ಗೊತ್ತಿದೆ. ನಾವು ತನಿಖೆಗೆ ಆರ್ಡರ್ ಮಾಡಿದ್ದೇವೆ. ಅವರು ಮಾಡಿರುವ ಕಾಮಗಾರಿ ಪ್ರೂವ್ ಮಾಡಲಿ. ಯಾರೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆಯೋ ಅವರಿಗೆಲ್ಲ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Cabinet Meeting : ಲೋಕಾಯುಕ್ತ ಕೈಯಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ; ಸಂಪುಟ ಒಪ್ಪಿಗೆ

ಶುಕ್ರವಾರ ಸುದ್ದಿಗೋಷ್ಠಿ ಕರೆದ ಕೆಂಪಣ್ಣ

ಬಾಕಿ ಬಿಲ್ ಪಾವತಿ ವಿಚಾರದಲ್ಲಿ ಸರ್ಕಾರ ವರ್ಸಸ್ ಗುತ್ತಿಗೆದಾರರು ಎಂಬಂತೆ ಆಗಿದ್ದು, ಕಳೆದ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಶುಕ್ರವಾರ ಸುದ್ದಿಗೋಷ್ಠಿ ಕರೆದಿದ್ದಾರೆ.

Exit mobile version