ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರರು ಸಂಕಷ್ಟಕ್ಕೀಡಾಗಿದ್ದರು (Contractors problem) ಎಂಬ ಆರೋಪವಿದ್ದರೆ ಈಗ ಕಾಂಗ್ರೆಸ್ ಸರ್ಕಾರದ (Congress Government) ಅವಧಿಯಲ್ಲೂ ಅವರ ಸಮಸ್ಯೆ ಮುಂದುವರಿಗಿದೆ. ರಸ್ತೆ ನಿರ್ವಹಣೆ ಬಿಲ್ ಮಂಜೂರು ಮಾಡದ ಹಿನ್ನೆಲೆಯಲ್ಲಿ ಗುತ್ತಿಗೆದಾರರೊಬ್ಬರು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಮುಂದೆಯೇ ವಿಷ ಕುಡಿದಿದ್ದಾರೆ. ಸ್ವತಃ ಲೋಕೋಪಯೋಗಿ ಖಾತೆ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರ ಬೆಳಗಾವಿ ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ.
ಗುತ್ತಿಗೆದಾರ ನಾಗಪ್ಪ ಬಂಗಿ ಅವರು ತಾವು ರಸ್ತೆ ನಿರ್ವಹಣೆ ಮಾಡಿದ್ದಕ್ಕೆ ಪ್ರತಿಯಾಗಿ ಬಿಲ್ ನೀಡಿಲ್ಲ ಎಂದು ಅರೋಪಿಸಿ ಎಕ್ಸಿಕ್ಯುಟಿವ್ ಎಂಜಿನಿಯರ್ ಎಸ್.ಎಸ್ ಸೋಬರದ ಅವರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಬೆಳಗಾವಿಯ ಕೋಟೆ ಆವರಣದಲ್ಲಿರುವ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಲೋಕೋಪಯೋಗಿ ಇಲಾಖೆ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರ ತವರು ಜಿಲ್ಲೆಯಲ್ಲಿ ಗುತ್ತಿಗೆದಾರರಿಗೆ ಸಂಕಷ್ಟ ಒದಗಿರುವುದು ಈಗ ಚರ್ಚೆಗೆ ಕಾರಣವಾಗಿದೆ. ನಾಗಪ್ಪ ಬಂಗಿ ಅವರು ವರ್ಕ್ ಆರ್ಡರ್ ಪಡೆದು ಕಾಮಗಾರಿ ಮಾಡಿದರೂ ಬಿಲ್ ಆಗಿಲ್ಲ ಎನ್ನಲಾಗಿದೆ.
ಕಳೆದ ಒಂದು ವರ್ಷದಿಂದ ಕಚೇರಿಗೆ ಅಲೆದು ಅಲೆದು ಸುಸ್ತಾದ ಗುತ್ತಿಗೆದಾರ, ಅಧಿಕಾರಿಗಳ ವರ್ತನೆಗೆ ಬೇಸತ್ತು ವಿಷದ ಬಾಟಲ್ ಜತೆಗೆ ಕಚೇರಿಗೆ ಆಗಮಿಸಿದ್ದರು.
ಬೆಳಗಾವಿ ನಗರದ ಕೋಟೆ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಗೆ ಬಂದ ಅವರು ಬೇಜವಾಬ್ದಾರಿ ತೋರಿದ ಅಧಿಕಾರಿಗಳು ಬರದಿದ್ದರೆ ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದರು. ಗಣಿಕೊಪ್ಪ ಗ್ರಾಮದ ನಾಗಪ್ಪ ಬಂಗಿ ಅವರು ತಾವೊಬ್ಬರೇ ಅಲ್ಲ ಕುಟುಂಬ ಸಮೇತ ಆಗಮಿಸಿ ಕಚೇರಿ ಮುಂದೆ ಧರಣಿ ಕುಳಿತರು.
2022ರಲ್ಲಿ ಹಲಗಾ ಗ್ರಾಮದಿಂದ ತಿಗಡಿ ಗ್ರಾಮದ ವರೆಗೆ ಮಾಡಿದ್ದ ರಸ್ತೆಯ ಬಿಲ್ ಪೆಂಡಿಂಗ್ ಇದೆ. ರಸ್ತೆಗೆ ಇಲಾಖೆ ಮೊದಲೇ ವರ್ಕ್ ಆರ್ಡರ್ ಕೊಟ್ಟಿತ್ತು. ಸುಮಾರು 6 ಲಕ್ಷ 50 ಸಾವಿರ ರೂ. ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಮುಗಿಸಿದ್ದೇನೆ. ಕಾಮಗಾರಿ ಮುಗಿದರೂ ಬಿಲ್ ನೀಡದೆ ಸತಾಯಿಸಲಾಗುತ್ತಿದೆ ಎಂದು ಬಂಗಿ ಅವರು ಎಇಇ ರಾಮೇಶ್ ಹೆಗಡೆ, ಎಇಇ ಬಸವರಾಜ್ ಹಲಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Politics : ಅನುದಾನ ವಾಪಸ್ ಪಡೆದ ಸರ್ಕಾರದ ವಿರುದ್ಧ ಮುನಿರತ್ನ ಧರಣಿ; ಬಿಎಸ್‌ವೈ ಸಾಥ್
ಬಿಲ್ ಕೊಡಿ ಇಲ್ಲವಾದ್ರೇ ಕುಟುಂಬ ಸಮೇತ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ಬಂಗಿ ಎಚ್ಚರಿಕೆ ನೀಡಿದರು. ಕೊನೆಗೆ ವಿಷ ಕುಡಿಯಲು ಯತ್ನಿಸಿದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಹಿಂದೆ ಬಿಲ್ ಮಂಜೂರು ಮಾಡದಿದ್ದಕ್ಕೆ ಸಂತೋಷ ಪಾಟೀಲ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ್ ಅವರ ಮೇಲೆ ಆರೋಪ ಮಾಡಿದ್ದರು. ಇದೀಗ ಜಿಲ್ಲೆಯಲ್ಲಿ ಮತ್ತೊಬ್ಬ ಗುತ್ತಿಗೆದಾರ ಸಂಕಷ್ಟಕ್ಕೆ ಬಿದ್ದು ಬಹಿರಂಗ ಆಕ್ರೋಶ ವ್ಯಕ್ತಪಡಿಸಿದರು.