ಚಿಕ್ಕಮಗಳೂರು: ರಾಜ್ಯದ ನಾನಾ ಕಡೆ ಸುದ್ದಿ ಮಾಡುತ್ತಿರುವ ಕುಕ್ಕರ್, ಸೀರೆ ಪಾಲಿಟಿಕ್ಸ್ (Cooker politics) ಮಲೆನಾಡಿಗೂ ಎಂಟ್ರಿ ಕೊಟ್ಟಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ ಅವರ ಹೆಸರಿನಲ್ಲಿ ಯುಗಾದಿ ನೆಪದಲ್ಲಿ ಸೀರೆ ಹಂಚಿಕೆ ಮಾಡಿದ್ದನ್ನು ಒಬ್ಬ ಕುಡುಕ ರಸ್ತೆಗೆ ತಂದು ಸುಟ್ಟು ಹಾಕಿದ ಸುದ್ದಿ ವೈರಲ್ ಆದ ಬೆನ್ನಿಗೇ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರು ಕುಕ್ಕರ್ ಹಂಚಿ ಸುದ್ದಿಯಾಗಿದ್ದಾರೆ.
ಶಾರದಾಂಬೆ ನೆಲೆವೀಡಾದ ಶೃಂಗೇರಿಯಲ್ಲಿ ಕಾಂಗ್ರೆಸ್ ಶಾಸಕರಾದ ಟಿ.ಡಿ. ರಾಜೇಗೌಡ ಅವರ ಭಾವಚಿತ್ರ ಇರುವ ಕುಕ್ಕರ್ ವಿತರಣೆ ನಡೆಯುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಕುಕ್ಕರ್ ವಿತರಿಸುತ್ತಿರುವುದು ಕಂಡುಬಂದಿದೆ.
ಕಾಂಗ್ರೆಸ್ ಮುಖಂಡ ಬೇಗಾರು ರಮೇಶ್ ನೇತೃತ್ವದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಮನೆ-ಮನೆಗೆ ಕುಕ್ಕರ್ ವಿತರಣೆ ನಡೆಯುತ್ತಿದೆ. ಇದರ ಜತೆಗೇ ಹಾಲಿ ಶಾಸಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶವೂ ಕಾಣಿಸಿಕೊಂಡಿದೆ.
ಶಾಸಕರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅಭಿವೃದ್ಧಿ ಕೆಲಸ ಮಾಡುವ ಬದಲು ಕುಕ್ಕರ್ ಕೊಟ್ಟು ಮತ ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಲಾಗುತ್ತಿದೆ.
ಶೃಂಗೇರಿ ಕ್ಷೇತ್ರದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಕುಕ್ಕರ್ ವಿತರಣೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇದರ ಬಗ್ಗೆ ಮಾಹಿತಿಗಳು ಸ್ಪಷ್ಟವಾಗಿಲ್ಲ.
ಬೆಳಗಾವಿ, ತುಮಕೂರು, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಲ್ಲಿ ಪಕ್ಷ ಬೇಧವಿಲ್ಲದೆ ಕುಕ್ಕರ್ ಹಂಚಿಕೆ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಚುನಾವಣೆ ಷೋಷಣೆಗೆ ಮುನ್ನ ನಾನಾ ಕಾರಣಗಳನ್ನು ಇಟ್ಟುಕೊಂಡು ಜನರ ಮತ ಸೆಳೆಯಲು ಈ ಪ್ರಯತ್ನ ನಡೆದಿದೆ.
ಇದನ್ನೂ ಓದಿ : Cooker, saree politics : ತುಮಕೂರಿನಲ್ಲಿ ಸೀರೆ, ಕುಕ್ಕರ್ ಹಂಚಿದ ಅಟ್ಟಿಕಾ ಬಾಬು, ಕೊನೆಗೆ ಬಂದವರಿಗೆ ಸೀರುಂಡೆ!