Site icon Vistara News

ಮರಳುಕೋರರ ಚೇಸಿಂಗ್‌ ಮಾಡುವಾಗ ಟ್ರ್ಯಾಕ್ಟರ್‌ ಹರಿದು ಪೊಲೀಸ್‌ ಪೇದೆ ಮೃತ್ಯು; ಕೊಲೆ ಶಂಕೆ

Smuggling of illegal sands

ಕಲಬುರಗಿ: ಇಲ್ಲಿನ ಅಫಜಲಪುರ ತಾಲೂಕಿನ ನಾರಾಯಣಪುರ ಬಳಿ ಅಕ್ರಮ ಮರಳು ಸಾಗಾಣಿಕೆ (Smuggling of sands) ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಕರ್ತವ್ಯ ನಿರತ ಪೊಲೀಸ್ ಪೇದೆ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಯೂರ ಚವ್ಹಾಣ್‌ (51) ಮೃತ ದುರ್ದೈವಿ.

ಚೌಡಾಪುರ ತಾಂಡಾ ನಿವಾಸಿಯಾಗಿರುವ ಮಯೂರ ಅವರು ನೆಲೋಗಿ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ 10.45 ರ ಸುಮಾರಿಗೆ ಕರ್ತವ್ಯದಲ್ಲಿದ್ದಾಗ ನೆಲೋಗಿಯ ಬಳಿ ಟ್ರ್ಯಾಕ್ಟರ್‌ ಹರಿದು ಮೃತಪಟ್ಟಿರುವ ಘಟನೆ ನಡೆದಿದೆ. ಇದು ಅಪಘಾತವೇ ಅಥವಾ ಅಕ್ರಮ ಮರಳು ಸಾಗಾಟಗಾರರು ಹತ್ಯೆ ಮಾಡಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಪ್ರಕರಣ ಸಂಬಂಧ ಎಸ್‌ಪಿ ಇಷಾಪಂತ್ ಪ್ರತಿಕ್ರಿಯಿಸಿದ್ದು, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಪೆಟ್ರೋಲಿಂಗ್ ಹಾಕಲಾಗಿತ್ತು. ಪೆಟ್ರೋಲಿಂಗ್‌ಗಾಗಿ ಹೆಡ್ ಕಾನ್ಸ್‌ಟೇಬಲ್ ಮಯೂರ್ ಮತ್ತು ಪಿಸಿ ಪ್ರಮೋದ್ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಅಕ್ರಮ ಮರಳು ಟ್ರ್ಯಾಕ್ಟರ್ ಬರುತ್ತಿದ್ದಾಗ ಪೊಲೀಸರು ನಿಲ್ಲಿಸಲು ಹೇಳಿದ್ದಾರೆ. ಆದರೂ ಮರಳುಕೋರರು ಟ್ರ್ಯಾಕ್ಟರ್ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಬೈಕ್ ಮೂಲಕ ಮಯೂರ್ ಮತ್ತು ಪ್ರಮೋದ್ ಇಬ್ಬರು ಟ್ರ್ಯಾಕ್ಟರ್ ಅನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಹೆಡ್ ಕಾನ್ಸ್‌ಟೇಬಲ್ ಮಯೂರ್ ಮೇಲೆ ಟ್ರ್ಯಾಕ್ಟರ್ ಹರಿದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಆರೋಪಿಗಳ ಮೇಲೆ IPC 302, 307 ಅಡಿ ಕೇಸ್ ದಾಖಲಾಗಿದೆ. ಟ್ರ್ಯಾಕ್ಟರ್‌ ಚಾಲಕ ಸಿದ್ದಣ್ಣ ಎಂಬಾತನನ್ನು ಬಂಧಿಸಲಾಗಿದೆ. ಟ್ರ್ಯಾಕ್ಟರ್‌ ಮಾಲೀಕ ಸಾಯಬಣ್ಣಾ ಎಂಬಾತನನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದೇವೆ. ಆರೋಪಿಗಳಿಬ್ಬರು ನಾರಾಯಣಪುರ ಗ್ರಾಮದವರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Electric shock:‌ ಮೀನು ಹಿಡಿಯಲು ಹೋದ ವ್ಯಕ್ತಿಗೆ ಪ್ರವಹಿಸಿದ ವಿದ್ಯುತ್‌; ಕ್ಷಣಾರ್ಧದಲ್ಲೇ ಹಾರಿಹೋಯ್ತು ಪ್ರಾಣ

ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ- ಪ್ರಿಯಾಂಕ್‌ ಖರ್ಗೆ

ಅಕ್ರಮ ಮರಳು ಸಾಗಾಣಿಕೆ ಮಾಡುವ ಟ್ರ್ಯಾಕ್ಟರ್ ಹರಿದು ಪೊಲೀಸ್ ಪೇದೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸಂತಾಪ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ ಖರ್ಗೆ ಮೃತ ಪೇದೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಇನ್ನು ಅಕ್ರಮ‌ ಮರಳು ಸಾಗಾಣಿಕೆ ತಡೆಗೆ ಕೂಡಲೇ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಸಂಪರ್ಕಿಸಿ ತನಿಖೆಗೆ ಸೂಚಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version