ಬೆಂಗಳೂರು: ನೆರೆಯ ಚೀನಾ, ಯುಎಸ್, ಥೈಲ್ಯಾಂಡ್ ಸೇರಿ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ಸೋಂಕು (Coronavirus) ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ಇದು ದೇಶಕ್ಕೂ ವ್ಯಾಪಿಸುವ ಭೀತಿಯಿಂದ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳು ಸೇರಿ ವೈದ್ಯಕೀಯ ಮೂಲ ಸೌಕರ್ಯದ ಕುರಿತು ಖಾಸಗಿ ಆಸ್ಪತ್ರೆಗಳ ಸದಸ್ಯರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದೆ.
ಸಭೆಯಲ್ಲಿ ಪ್ರಮುಖವಾಗಿ ತುರ್ತು ಆರೋಗ್ಯ ಸಮಸ್ಯೆಗಳ ಜತೆಗೆ ಕೊರೊನಾ ಸೋಂಕಿನ ಮೇಲೂ ತೀವ್ರ ನಿಗಾ ವಹಿಸಲು ಕ್ಲೋಸ್ ಮಾನಿಟರ್ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಾದರೆ, ಖಾಸಗಿ ಆಸ್ಪತ್ರೆಗಳು ಹಾಸಿಗೆ ಮೀಸಲಿಡಲು ಸೂಚಿಸಲಾಗಿದೆ.
ಸಭೆಯಲ್ಲಿ ಫನಾ ಸಂಘದ ಅಧ್ಯಕ್ಷ ಡಾ ಗೋವಿಂದಯ್ಯ ಯತೀಶ್ ಬೆಡ್ ರಿಸರ್ವ್ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕೋವಿಡ್ ಕೇಸ್ ಪತ್ತೆ ಆಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ರಿಸರ್ವ್ ಇಟ್ಟರೆ ನಾನ್ ಕೋವಿಡ್ ಕೇಸ್‌ಗಳಿಗೆ ತೊಂದರೆ ಆಗಲಿದೆ ಎಂದು ಅಭಿಪ್ರಾಯ ಮಂಡಿಸಿದ್ದಾರೆ. ಬೆಡ್ ಮೀಸಲಿಡುವ ಬದಲಿಗೆ ಔಷಧ, ಆಕ್ಸಿಜನ್, ವೆಂಟಿಲೇಟರ್ ಕೊರತೆ ಆಗದಂತೆ ಅದರ ಸಿದ್ಧತೆಗೆ ಆದ್ಯತೆ ನೀಡುವುದಾಗಿ ಉಲ್ಲೇಖಿಸಿದ್ದಾರೆ.
ಇವೆಲ್ಲದರ ಜತೆಗೆ ವಿಷಮಶೀತ ಜ್ವರ (ILI-influenza like illness) ಹಾಗೂ ತೀವ್ರ ಉಸಿರಾಟದ ಸೋಂಕುಗಳು (SARI-severe acute respiratory infections) ಕೇಸ್‌ಗಳ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿ ಐಎಚ್ಐಪಿ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲು ಸೂಚನೆ ನೀಡಲಾಗಿದೆ. ಕೋವಿಡ್ ಚಿಕಿತ್ಸೆ, ಮುನ್ನೆಚ್ಚರಿಕೆ ಕ್ರಮಗಳ ಬದಲಾವಣೆ ಇದ್ದರೆ ನೋಟಿಫಿಕೇಶನ್ ಮೂಲಕ ಶೀಘ್ರ ಮಾಹಿತಿ ತಿಳಿಸಲಾಗುವುದೆಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬೇರೆ ಬೇರೆ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ವೇಳೆ ಯಾರಿಗಾದರೂ ಕೋವಿಡ್ ಪಾಸಿಟಿವ್ ದೃಢಪಟ್ಟರೆ, ಸ್ಯಾಂಪಲ್ಸ್ ಅನ್ನು ಜಿನೋಮ್ ಸೀಕ್ವೇನ್ಸ್‌ಗೆ ಕಳುಹಿಸಲು ಸೂಚನೆ ನೀಡಲಾಗಿದೆ. ಗೂಗಲ್ ಸ್ಪ್ರೇಡ್ ಶೀಟ್ ಶೇರ್ ಮಾಡುವ ಮೂಲಕ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸಾಮಾನ್ಯ ಹಾಸಿಗೆ, ಎಚ್‌ಡಿಯು, ಐಸಿಯು ಬೆಡ್ ಹಾಗೂ ಆಕ್ಸಿಜನ್ ಶೇಖರಣೆ ಇತ್ಯಾದಿ ಮೂಲಭೂತ ಸೌಕರ್ಯಗಳ ಲಭ್ಯತೆ ಕುರಿತು ಅಪಡೇಟ್ ಮಾಡುವಂತೆ ಪಾಲಿಕೆ ಸೂಚಿಸಿದೆ. ಕಳೆದ ಅಲೆಯಲ್ಲಿ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ದುರ್ಘಟನೆಯನ್ನು ಮೆಲುಕು ಹಾಕಿದ್ದು, ಆಕ್ಸಿಜನ್ ಪೂರೈಕೆ ಸಂಬಂಧ ರಾಜ್ಯ ಸರ್ಕಾರ ಕೆಎಸ್‌ಎಂಎಸ್‌ಸಿಎಲ್ ಮೂಲಕ ಸಮನ್ವಯ ಮಾಡಿ ಕೊಡಬೇಕೆಂದು ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳು ಪ್ರಸ್ತಾಪಿಸಿವೆ.
ಇದನ್ನೂ ಓದಿ | Coronavirus | ಕೋವಿಡ್ ಪ್ರೊಟೋಕಾಲ್ ಗಾಳಿಗೆ ತೂರಿದ ರಾಹುಲ್ ಗಾಂಧಿ, ಮಾಸ್ಕ್ ಇಲ್ಲದೇ ಪಾದಯಾತ್ರೆ