ಬೆಂಗಳೂರು: ಬಹುವೇಗವಾಗಿ ಹರಡುವ ಕೊರೊನಾ ವೈರಸ್ (Coronavirus) ಮತ್ತೆ ಎಲ್ಲೆಡೆ ವ್ಯಾಪಿಸುತ್ತಿದೆ. ಹೀಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಅಲರ್ಟ್ ಆಗಿದ್ದು, ಮಾರ್ಷಲ್ಸ್‌ಗಳನ್ನು ಫೀಲ್ಡಿಗಿಳಿಸಿದೆ. ಪ್ರಮುಖವಾಗಿ ಜನಸಂದಣಿ ಪ್ರದೇಶದಲ್ಲಿ ಮಾರ್ಷಲ್ಸ್‌ಗಳು ಹಾಜರ್ ಆಗಿದ್ದು, ಜನರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ನಗರದ ಕೆ.ಆರ್. ಮಾರ್ಕೆಟ್‌ನಲ್ಲಿ ವ್ಯಾಪಾರಸ್ಥರಿಗೆ ಜನ ಸಾಮಾನ್ಯರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಫೇಸ್ ಮಾಸ್ಕ್ ಹಾಕುವಂತೆ ಧ್ವನಿವರ್ಧಕದ ಮೂಲಕ ಅನೌನ್ಸ್ ಮಾಡಲಾಗುತ್ತಿದೆ. ಗುರುವಾರವಷ್ಟೇ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈ ಬಗ್ಗೆ ಅರಿವಿಲ್ಲದವರಿಗೆ ತಿಳಿ ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ
ನೆರೆಯ ಚೀನಾದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಡಿಸೆಂಬರ್ 24ರಿಂದ ಜಾರಿಗೆ ಬರಲಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರು ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು. ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಡ್ಡಾಯವಾಗಿ ಇರಲಿದೆ. ಕೋವಿಡ್ ರೋಗಲಕ್ಷಣ ಇರುವ ಪ್ರಯಾಣಿಕರನ್ನು ಪ್ರತ್ಯೇಕವಾಗಿರಿಸಬೇಕು. ಥರ್ಮಲ್ ಸ್ಟ್ರೀನಿಂಗ್ ಕಡ್ಡಾಯವಾಗಿದ್ದು, ರೋಗಲಕ್ಷಣ ಕಂಡು ಬಂದಲ್ಲಿ ಪ್ರಯಾಣಿಕರನ್ನು ಪ್ರತ್ಯೇಕವಾಗಿರಿಸಬೇಕು.
ಸ್ಯಾಂಪಲ್ ನೀಡಿದ ಬಳಿಕವಷ್ಟೇ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಒಂದು ವೇಳೆ ಪಾಸಿಟಿವ್ ಆಗಿದ್ದರೆ ಜಿನೋಮಿಕ್ ಟೆಸ್ಟ್‌ಗೆ ರವಾನೆ ಮಾಡಬೇಕು. ವಿಮಾನ ನಿಲ್ದಾಣಗಳಲ್ಲಿ ರ‍್ಯಾಂಡಮ್ ಟೆಸ್ಟ್‌ಗೂ ಅವಕಾಶ ಕಲ್ಪಿಸಿದ್ದು, 12 ವರ್ಷದೊಳಗಿನ ಮಕ್ಕಳಿಗೆ ರ‍್ಯಾಂಡಮ್ ಟೆಸ್ಟ್‌ನಿಂದ ವಿನಾಯಿತಿ ನೀಡಲಾಗುತ್ತಿದೆ. ಒಂದು ವೇಳೆ ಮಕ್ಕಳಲ್ಲಿ ರೋಗಲಕ್ಷಣ ಕಂಡು ಬಂದರೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಇದನ್ನೂ ಓದಿ | Coronavirus | 18 ವರ್ಷ ಮೇಲ್ಪಟ್ಟವರಿಗೆ ಮೂಗಿನ ಮೂಲಕ ಕೋವಿಡ್ ಲಸಿಕೆ, ಮೊದಲು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ