ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್ ಅವರು ಸೋಮವಾರ ದಿಢೀರ್ ಭೇಟಿ ನೀಡಿ, ಕೊರೊನಾ ಸೋಂಕಿತರಿಗೆ (Coronavirus) ಚಿಕಿತ್ಸೆ ನೀಡಲು ಕೈಗೊಂಡ ಸಿದ್ಧತಾ ಕ್ರಮಗಳ ಪರಿಶೀಲನೆ ನಡೆಸಿದರು.
ನಂತರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ವಿದೇಶಗಳಲ್ಲಿ ಕೋವಿಡ್ ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ನಿಯಂತ್ರಣ ಸಂಬಂಧ ಬೆಳಗ್ಗೆ ಆರ್. ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಸಭೆ ಮಾಡಿದ್ದೇವೆ ಎಂದ ಅವರು, ಬಿಮ್ಸ್ ಆಸ್ಪತ್ರೆಯಲ್ಲಿ ಯಾವ ರೀತಿ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಪರಿಶೀಲಿಸಲು ಆಗಮಿಸಿದ್ದೇವೆ ಎಂದರು.
ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಐದು ಆಕ್ಸಿಜನ್ ಪ್ಲಾಂಟ್ ಅಳವಡಿಸಿದ್ದೇವೆ. ಇವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾವೋ? ಇಲ್ಲವೋ ಎಂಬುದನ್ನು ನೋಡಿದ್ದೇವೆ. ನಾಳೆ ಮಾಕ್ ಡ್ರಿಲ್ ಇದೆ, ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಯಲ್ಲಿ ಐಸಿಯು, ಎನ್‌ಐಸಿಯು ವಿಭಾಗಗಳ ಕಾರ್ಯ ನಿರ್ವಹಣೆ ಹೇಗಿದೆ, ಆಕ್ಸಿಜನ್ ಪ್ಲಾಂಟ್ ಕೆಲಸ ಮಾಡುತ್ತಿವೆಯೇ ಎಂಬುದರ ಮಾಕ್ ಡ್ರಿಲ್ ನಡೆಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನವನ್ನು ಧರ್ಮದ ಆಧಾರದಲ್ಲಿ ನೋಡುವುದು ಕನ್ನಡದ ಪರಂಪರೆಗೆ ಅವಮಾನ: ಮಹೇಶ್ ಜೋಶಿ
ಚೀನಾ ರೀತಿಯಲ್ಲಿ ಭಾರತದಲ್ಲಿ ಕೋವಿಡ್ ಸ್ಥಿತಿ ಇಲ್ಲ. ಜನರ ಜೀವ ಉಳಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಹಿಂದೆ ಬಿಮ್ಸ್ ಸಮಸ್ಯೆಗಳನ್ನು ನಾವು ನೋಡಿದ್ದೆವು. ಕಳೆದ ಒಂದೂವರೆ ವರ್ಷದಲ್ಲಿ ಆಸ್ಪತ್ರೆ ಯಾವ ರೀತಿ ಅಭಿವೃದ್ಧಿ ಆಗಿದೆ ಎಂಬುವುದನ್ನು ನೋಡಬಹುದು. ಇಡೀ ದೇಶದಲ್ಲಿ ಗುಣಮಟ್ಟದ ಚಿಕಿತ್ಸೆಗೆ 112ರ ಸ್ಥಾನದಲ್ಲಿದ್ದ ಬಿಮ್ಸ್, ಈಗ ೧೨ನೇ ಸ್ಥಾನಕ್ಕೆ ಬಂದಿದೆ. ಕೊರೊನಾ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಜನರ ಪ್ರಾಣ ರಕ್ಷಣೆ ಮಾಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಅದಕ್ಕಾಗಿ ನಾನು ಮತ್ತು ಸುಧಾಕರ್ ಕಳೆದ ಮೂರ್ನಾಲ್ಕು ದಿನಗಳಿಂದ ಸಭೆಗಳನ್ನು ಮಾಡುತ್ತಿದ್ದೇವೆ. ಚೀನಾದಲ್ಲಿರುವ ಕೋವಿಡ್ ಆತಂಕ ರಾಜ್ಯಕ್ಕೆ ಬರಬಾರದು ಎಂಬ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಆಕ್ಸಿಜನ್ ಸಿಕ್ಕಿಲ್ಲ ಎಂದು ಲಕ್ಷಾಂತರ ಜನ ತೀರಿ ಹೋಗಿದ್ದು ನೋಡಿದ್ದೇವೆ. ಆಕ್ಸಿಜನ್ ಕೊರತೆ ಎಲ್ಲಿಯೂ ಬರಬಾರದು ಎಂಬುವುದು ಸಚಿವ ಸುಧಾಕರ್ ಅವರ ಉದ್ದೇಶ. ಹೀಗಾಗಿ ಆ್ಯಂಬುಲೆನ್ಸ್, ಔಷಧ ಕೊರತೆ ಬಾರದಂತೆ ಮುಂಜಾಗ್ರತೆ ವಹಿಸಲಾಗಿದೆ. ಜನರು ಆತಂಕ ಪಡಬಾರದು, ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳ ಸಿದ್ಧತೆ ಮಾಡಲಾಗುತ್ತಿದೆ ಎಂದು ಹೇಳಿದರು.