ಬೆಂಗಳೂರು: ಈಗಾಗಲೇ ಸಾಂಕ್ರಾಮಿಕ ಕೋವಿಡ್ ಹೊಡೆತಕ್ಕೆ (Coronavirus) ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ನಾಲ್ಕನೇ ಅಲೆಯ ಭೀತಿ ಹೆಚ್ಚಾಗಿದ್ದು, ಇದನ್ನು ಎದುರಿಸಲು ವಾರಿಯರ್ಸ್ ಜತೆಗೆ ಆರೋಗ್ಯ ಇಲಾಖೆ ಸನ್ನದ್ಧವಾಗಿವೆ. ಇದರ ಭಾಗವಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು.
ರಾಜ್ಯದಲ್ಲಿ BF.7 ರೂಪಾಂತರ ತಳಿಯು ಉಲ್ಬಣಿಸುವ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈ ಅಲರ್ಟ್ ಆಗಿದ್ದು, ಮೊದಲ- ಎರಡನೇ ಅಲೆಯಲ್ಲಿ ಐಸಿಯು ಬೆಡ್, ಆಕ್ಸಿಜನ್ ಇಲ್ಲದೆ ಜನರು ನರಳುವಂತಾಯಿತು. ಹೀಗಾಗಿ ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳಾದ ಸಿವಿ ರಾಮನ್ ಆಸ್ಪತ್ರೆ, ಕೆಸಿ ಜನರಲ್, ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಗಳು ನಾಲ್ಕನೆ ಅಲೆ ಎದುರಿಸಲು ಸಿದ್ಧವಾಗುತ್ತಿದೆ.
ಇಂದಿರಾನಗರದ ಸಿವಿ ರಾಮನ್ ಆಸ್ಪತ್ರೆಯಲ್ಲಿ ಒಟ್ಟು ೯೧ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತ್ಯೇಕ ಎರಡು ಆಕ್ಸಿಜನ್ ಘಟಕಗಳನ್ನು ನಿರ್ಮಿಸಿದ್ದು, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಂ ಮೂಲಕ ರೋಗಿಗಳ ಮೇಲೆ ನಿಗಾ ವಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇತ್ತ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಏಕಕಾಲಕ್ಕೆ ಸೋಂಕಿತರು ಬಂದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು. ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್, ವೈದ್ಯಕೀಯ ಸಿಬ್ಬಂದಿ ಲಭ್ಯತೆಗಳ ಬಗ್ಗೆ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು.
ಇತ್ತ ಬೌರಿಂಗ್ ಆಸ್ಪತ್ರೆಯಲ್ಲಿ ಮಾಕ್ ಡ್ರಿಲ್ ಮಾಡಲಿಲ್ಲ, ಬದಲಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. ಒಟ್ಟು ೬೦ ಸೋಂಕಿತರಿಗೆ ಚಿಕಿತ್ಸೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಈ ಪೈಕಿ ೧೦ ಐಸಿಯು ಬೆಡ್‌ಗಳನ್ನೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೆಡ್, ಆರೆಂಜ್, ಗ್ರೀನ್ ಹೀಗೆ ಮೂರು ಜೋನ್‌ಗಳ ಮೂಲಕ ಚಿಕಿತ್ಸೆಗೆ ತಯಾರಿ ನಡೆದಿದೆ.
ವಿವಿಧ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರು ಕ್ಷೇತ್ರದಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು. ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್ ಸೇರಿದಂತೆ ಚಿಕಿತ್ಸಾ ಸಲಕರಣೆಗಳನ್ನು ಪರಿಶೀಲಿಸಲಾಯಿತು. ಜಿಲ್ಲಾ ಕೇಂದ್ರದಲ್ಲಿ ನೂರೈವತ್ತು ಬೆಡ್‌ಗಳಿದ್ದು ಒಂದು ವೇಳೆ ಏಕಕಾಲಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಯಾವ ರೀತಿಯಲ್ಲಿ ನಿರ್ವಹಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಜತೆಗೆ ವಿಜಯನಗರ, ಮೈಸೂರು, ಚಾಮರಾಜನಗರ ಹಾಗೂ ರಾಯಚೂರು, ಶಿವಮೊಗ್ಗ ಸೇರಿ ಧಾರವಾಡ, ಹುಬ್ಬಳ್ಳಿಯ ಜಿಲ್ಲಾ ಕೇಂದ್ರ ಸೇರಿದಂತೆ ಹಲವು ಕಡೆಗಳಲ್ಲಿ ಯಶಸ್ವಿಯಾಗಿ ಮಾಕ್ ಡ್ರಿಲ್ ನಡೆಸಲಾಯಿತು.
ಇದನ್ನೂ ಓದಿ | Coronavirus | ಎಲ್ಲ ರಾಜ್ಯಗಳಲ್ಲೂ ಇಂದು ಅಣಕು ಕಾರ್ಯಾಚರಣೆ, ಏನಿದು ಮಾಕ್ ಡ್ರಿಲ್?