ಬೆಂಗಳೂರು: ಕೊರೊನಾ ಸೋಂಕು (Coronavirus) ಇದೀಗ ಹೊಸ ಸ್ವರೂಪದಲ್ಲಿ ಕಾಡಲು ಮುಂದಾಗಿದೆ. ನೆರೆಯ ಚೀನಾದಲ್ಲಿ ಅಬ್ಬರಿಸುತ್ತಿರುವ ಕೊರೊನಾ ಸೋಂಕು ರಾಜ್ಯದಲ್ಲೂ ಆತಂಕ ಮೂಡಿಸಿದೆ. ಕೊರೊನಾ 4ನೇ ಅಲೆಯ ಭೀತಿ ಇರುವುದರಿಂದ ಆರೋಗ್ಯ ಇಲಾಖೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಈ ಮಧ್ಯೆ ಪೋಷಕರಲ್ಲಿ ಸೋಂಕು ಹರಡುವಿಕೆ ಭೀತಿ ಹೆಚ್ಚಾಗಿದ್ದು, ಶಾಲಾ ಮುಖ್ಯಸ್ಥರಿಗೆ ನಿತ್ಯ ನೂರಾರು ಕರೆಗಳು ಬರುತ್ತಿವೆಯಂತೆ. ಹೆಚ್ಚಿನವರ ಪ್ರಶ್ನೆ ಮತ್ತೆ ಆನ್‌ಲೈನ್ ಕ್ಲಾಸ್ ಶುರುವಾಗುತ್ತದೆಯಾ ಎನ್ನುವುದು.
ಕೊರೊನಾ ನಿಯಂತ್ರಣಕ್ಕೆ ತಾಂತ್ರಿಕ ಸಲಹಾ ಸಮಿತಿ ಸರಣಿ ಸಭೆಗಳನ್ನು ನಡೆಸುತ್ತಿರುವ ಹೊತ್ತಿನಲ್ಲಿ ಖಾಸಗಿ ಶಾಲಾ ಒಕ್ಕೂಟವೂ ಸಭೆ ನಡೆಸಲು ಮುಂದಾಗಿದೆ. ಕೊರೊನಾ ಭೀತಿಗೆ ಒಳಗಾದ ಪೋಷಕರಿಂದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ನಿತ್ಯ ನೂರಾರು ಕರೆ ಬರುತ್ತಿದೆ. ಹೀಗಾಗಿ ಶುಕ್ರವಾರ ಖಾಸಗಿ ಶಾಲೆ ಆಡಳಿತ ಮಂಡಳಿಗಳ ಜತೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಹತ್ವದ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ | coronavirus | ಕೊರೊನಾಗೆ ಹೆದರಿ 2 ವರ್ಷದಿಂದ ಮನೆಯಲ್ಲೇ ಬಂದಿಯಾಗಿದ್ದ ತಾಯಿ-ಮಗಳ ರಕ್ಷಣೆ!
ಸಭೆಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ, ಅವಶ್ಯಕತೆ ಇದ್ದರೆ ಆನ್‌ಲೈನ್ ಕ್ಲಾಸ್ ನಡೆಸುವ ಬಗ್ಗೆ ಚರ್ಚೆ ನಡೆಯಲಿದೆ. ಸರ್ಕಾರ ಮಾರ್ಗಸೂಚಿ ಬಿಡುಗಡೆಗೂ ಮುನ್ನವೇ ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ಜಾರಿಗೆ ನಿರ್ಧಾರ ಆಗಿತ್ತು. ಈಗ ಸಾಮಾಜಿಕ ಅಂತರ ಪಾಲನೆ ಮಾಡಲು ಸೂಚನೆ ನೀಡಲಾಗುವುದು ಎಂದು ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ. ಶಾಲೆಯಲ್ಲಿ ಯಾರಿಗಾದರೂ ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ಟೆಸ್ಟಿಂಗ್ ಮಾಡಿಸಲು ಸೂಚನೆ ನೀಡಲಾಗಿದೆ.
ರುಪ್ಸಾ ಸಂಘಟನೆ ಅಡಿಯಲ್ಲಿ 13 ಸಾವಿರ ಶಾಲೆಗಳು ನೊಂದಣಿ ಆಗಿದ್ದು, ಎಲ್ಲ ಸದಸ್ಯರ ಜತೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಕೋವಿಡ್ ಸಂಬಂಧ ಯಾವೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಪಬ್ಲಿಕ್ ಪರೀಕ್ಷೆ ಬಿಟ್ಟು ಉಳಿದ ತರಗತಿಗಳ ಪರೀಕ್ಷೆ ಹೇಗೆ ನಡೆಸಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಬೂಸ್ಟರ್ ಡೋಸ್ ಪಡೆಯುವಂತೆ ಮನವರಿಕೆ
ಕಾಲೇಜಿನಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲ ಡಾ.ಬಿ.ಜಿ ಭಾಸ್ಕರ್ ತಿಳಿಸಿದ್ದಾರೆ. ಮಕ್ಕಳಿಗೆ ಮಾಸ್ಕ್ ಧರಿಸಿ ಬರುವಂತೆ ಸೂಚಿಸಲಾಗಿದ್ದು, ಪ್ರಯಾಣ ಮಾಡುವಾಗ, ಬಸ್, ಮೆಟ್ರೋಗಳಲ್ಲಿ ಸಂಚರಿಸುವಾಗ ಎಚ್ಚರದಿಂದ ಇರಲು ಸೂಚಿಸಲಾಗಿದೆ. ಜತೆಗೆ ಬೂಸ್ಟರ್ ಡೋಸ್ ಪಡೆಯುವಂತೆ ಮನವರಿಕೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ | Coronavirus | ಫೇಸ್ ಮಾಸ್ಕ್, ಬೂಸ್ಟರ್ ಡೋಸ್ ಕಡ್ಡಾಯಗೊಳಿಸಿದ ಬೆಂಗಳೂರು ವಿಶ್ವವಿದ್ಯಾಲಯ