ಬೆಂಗಳೂರು: ನೆರೆಯ ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ಸೋಂಕಿತರ (Coronavirus) ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಭಾರತಕ್ಕೆ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ಹೈರಿಸ್ಕ್ ದೇಶಗಳಿಂದ ಬಂದಿರುವ ಪ್ರಯಾಣಿಕರಲ್ಲಿ ಮೂವರಿಗೆ ಪಾಸಿಟಿವ್ ಸೋಂಕು ದೃಢಪಟ್ಟಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ಹೈರಿಸ್ಕ್ ದೇಶಗಳಿಂದ ಬಂದಿದ್ದ 107 ಪ್ರಯಾಣಿಕರ ಸ್ಯಾಂಪಲ್ ಅನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಶೇ. 2ರಷ್ಟು ವಿದೇಶದಿಂದ ಬಂದ ಪ್ರಯಾಣಿಕರಲ್ಲಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಲಾಗಿತ್ತು. ಈಗ 107 ಮಂದಿಯ ವರದಿ ಬಂದಿದ್ದು, ಮೂವರಿಗೆ ಪಾಸಿಟಿವ್ ಬಂದಿದೆ.
ಈ ಮೂವರು ಅಬುದಾಬಿ, ದುಬೈ, ಹಾಂಕಾಂಗ್‌ನಿಂದ ಬಂದವರಾಗಿದ್ದಾರೆ. ಇವರಲ್ಲಿ ಇಬ್ಬರು ಬೆಂಗಳೂರು ನಗರದವರಾದರೆ, ಇನ್ನೊಬ್ಬರು ಜಮ್ಮು-ಕಾಶ್ಮೀರಕ್ಕೆ ತೆರಳಿದ್ದಾರೆ. ಪಾಸಿಟಿವ್ ಬಂದಿರುವ ಎಲ್ಲ ಪ್ರಯಾಣಿಕರನ್ನು ಆಸ್ಪತ್ರೆಯಲ್ಲಿ ಐಸೋಲೆಷನ್ ಮಾಡಲಾಗಿದೆ.
ಪಾಸಿಟಿವ್ ಸಂಖ್ಯೆ ೨೨ಕ್ಕೇರಿಕೆ
ಪಾಸಿಟಿವ್ ಬಂದಿರುವ ಪ್ರಯಾಣಿಕರ ಸ್ಯಾಂಪಲ್ ಅನ್ನು ಜಿನೋಮಿಕ್ ಟೆಸ್ಟ್‌ಗೆ ರವಾನೆ ಮಾಡಲಾಗಿದ್ದು, ಹೊಸ ರೂಪಾಂತರಿ ಕಾಣಿಸಿಕೊಂಡಿದೆಯೇ? ಅಥವಾ ಬೇರೆ ಇನ್ನು ಯಾವ ವೈರಸ್ ಕಾಣಿಸಿಕೊಂಡಿದೆ ಎಂಬ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ. ಸದ್ಯ ವರದಿಗಾಗಿ ಕಾಯಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ತಿಂಗಳಿನಿಂದ ಪಾಸಿಟಿವ್ ಸಂಖ್ಯೆ 22ಕ್ಕೆ ಏರಿಕೆ ಆಗಿದೆ.
ಹೆಚ್ಚುವರಿ ಸಿಬ್ಬಂದಿ ನೇಮಕ
ಪಾಸಿಟಿವ್ ಪ್ರಕರಣಗಳು ಏರಿಕೆ ಆಗುತ್ತಿರುವ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಏರ್‌ಪೋರ್ಟ್‌ನಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಒಟ್ಟು ಇಬ್ಬರು ವೈದ್ಯರು, ೮ ಜನ ಹೆಲ್ತ್ ಇನ್ಸ್‌ಪೆಕ್ಟರ್, ಡಾಟಾ ಆಪರೇಟರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಮೂರು ಪಾಳಿಯಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಏರ್‌ಪೋರ್ಟ್‌ನಲ್ಲಿ ಇನ್ನಷ್ಟು ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ | Coronavirus | ಬೆಂಗಳೂರಿನಲ್ಲಿ ಶುರುವಾದ ಕೊರೊನಾ ಆತಂಕ, ಲಸಿಕೆಗೆ ಹೆಚ್ಚಿದ ಬೇಡಿಕೆ