ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಜನರಿಂದ ಹಣ ವಸೂಲಿ (Corruption Case) ಮಾಡುವ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಎಚ್ಚರಿಕೆಯ ಸಂದೇಶವನ್ನ ರವಾನಿಸಿದೆ. ಯಲಹಂಕ ಆಸ್ಪತ್ರೆಯಲ್ಲಿ (Yalahanka Govt. Hospital) ಹೆರಿಗೆಗೆ ವಾರ್ಡ್ ಬಾಯ್ ಮೂಲಕ ಲಂಚ ಪಡೆದಿದ್ದ (Money for Cesarean section) ಆರೋಪದ ಮೇಲೆ ಪ್ರಸೂತಿ ತಜ್ಞ ಡಾ. ರಾಮಚಂದ್ರ ಕೆ.ಸಿ (Dr. Ramachandra KC) ಅವರನ್ನು ಅಮಾನತು ಮಾಡಿ ಆರೋಗ್ಯ ಇಲಾಖೆ (Health Department) ಆಯುಕ್ತ ರಂದೀಪ್ (Commissioner Randeep) ಅವರು ಆದೇಶ ಹೊರಡಿಸಿದ್ದಾರೆ.
ಯಲಹಂಕ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡಿಸಲು 10 ಸಾವಿರ ಹಣ ಪಡೆದಿರುವುದು ಲೋಕಾಯುಕ್ತರ ತನಿಖೆಯಲ್ಲಿ ಸಾಬೀತಾಗಿತ್ತು. ಈ ಕುರಿತಂತ ಪ್ರಮುಖ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದವು. ಮಾಧ್ಯಮಗಳ ವರದಿ ಹಾಗೂ ಲೋಕಾಯುಕ್ತರ ತನಿಖೆ ಆಧಾರವಾಗಿಟ್ಟುಕೊಂಡು ವೈದ್ಯರ ವಿರುದ್ಧ ಕ್ರಮ ಜರುಗಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಯುಕ್ತರಿಗೆ ಸೂಚನೆ ನೀಡಿದ್ದರು.
ಇದೊಂದು ಗಂಭೀರ ಪ್ರಕರಣವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿ ಬಡವರಿಂದ ಹಣ ವಸೂಲಿ ಮಾಡುವವರನ್ನ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಈ ರೀತಿಯ ಯಾವುದೇ ಪ್ರಕರಣ ಕಂಡುಬಂದರೂ, ತಕ್ಷಣ ಕ್ರಮ ಜರುಗಿಸಲು ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿನೆ ನೀಡಿದ್ದರು.
ಪ್ರಕರಣದ ಗಂಭೀರತೆಯನ್ನ ಅರಿತ ಆಯುಕ್ತರು ಲಂಚ ಪಡೆದ ಆರೋಪದ ಮೇಲೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ ರಾಮಚಂದ್ರ ಕೆ.ಸಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮಂಜುಳಾ ಎಂಬ 20 ವರ್ಷದ ಮಹಿಳೆಗೆ ಸಿಸೇರಿಯನ್ ಮಾಡಲು ರೂ.15,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಜುಳಾ ಅವರ ಪತಿ ಅಂಗಪ್ಪ ಅವರು, ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದ್ದರು.
ಸಿಸೇರಿಯನ್ ಮುಗಿದು ಹೆಣ್ಣು ಮಗು ಜನಿಸಿದ ನಂತರ ಅಂಗಪ್ಪ ಅವರು, 10,000 ಹಣವನ್ನು ಆಸ್ಪತ್ರೆಯ ವಾರ್ಡ್ ಬಾಯ್ ವಾಹಿದ್ ಎಂಬುವವರಿಗೆ ನೀಡಿದ್ದರು. ವೈದ್ಯ ರಾಮಚಂದ್ರ ಕೆ.ಸಿ ಸೂಚನೆ ಮೇರೆಗೆ ಹಣ ಪಡೆದಿರುವುದಾಗಿ ವಾರ್ಡ್ ಬಾಯ್ ಲೋಕಾಯುಕ್ತರ ತನಿಖೆಯಲ್ಲಿ ಹೇಳಿಕೆ ನೀಡಿದ್ದರು.
ಲೋಕಾಯುಕ್ತ ಪೊಲೀಸರು ಪರಿಶೀಲನೆಗೆ ತೆರಳಿದಾಗ ಲಂಚ ಪಡೆದುಕೊಂಡಿರುವ ಆರೋಪ ಸಾಬೀತಾಗಿರುತ್ತದೆ. ವೈದ್ಯರ ವಿರುದ್ಧ ಸು-ಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ವೈದ್ಯರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಯಲಹಂಕ ಆಸ್ಪತ್ರೆಯಲ್ಲಿ ನಡೆದಿದ್ದೇನು?
ಕೂಲಿ ಕಾರ್ಮಿಕ ಲಿಂಗಪ್ಪ ತನ್ನ ಪತ್ನಿ ಮಂಜುಳಾ ಅವರನ್ನು ಮೊದಲ ಹೆರಿಗೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಹೆರಿಗೆ ನೋವು ಅನುಭವಿಸುತ್ತಿದ್ದ ಮಂಜುಳಾ ಅವರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದಾಗಿ ಸ್ತ್ರೀರೋಗ ತಜ್ಞ ಡಾ.ರಾಮಚಂದ್ರ ಅಭಯ ನೀಡಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ವೈದ್ಯರ ಪರವಾಗಿ ವಾರ್ಡ್‌ಬಾಯ್ ವಹೀದ್ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಅಂತಿಮವಾಗಿ ಮಂಜುಳಾ ಸಂಬಂಧಿಕರು 11 ಸಾವಿರ ರೂ.ಗಳನ್ನು ವಹೀದ್‌ಗೆ ನೀಡಿದ್ದರು. ಬಳಿಕ ಡಾ.ರಾಮಚಂದ್ರ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಿದ್ದರು. ಮಂಜುಳಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಈ ನಡುವೆ ಮಂಜುಳಾ ಅವರ ಸಂಬಂಧಿಯೊಬ್ಬರು ಲೋಕಾಯುಕ್ತರಿಗೆ ಕರೆ ಮಾಡಿ ದೂರು ನೀಡಿದ್ದರು. ಲೋಕಾಯುಕ್ತರ ಸೂಚನೆ ಮೇರೆಗೆ ಡಿವೈಎಸ್ಪಿ ಪ್ರದೀಪ್‌ಕುಮಾರ್ ಆಸ್ಪತ್ರೆಗೆ ಬಂದು ವಹೀದ್‌ನನ್ನು ವಶಕ್ಕೆ ಪಡೆದಿದ್ದರು. ಆಗ ಡಾ. ರಾಮಚಂದ್ರ ಅವರು ಆಸ್ಪತ್ರೆಯಲ್ಲಿ ಇರಲಿಲ್ಲ.
ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ವಶಕ್ಕೆ ಪಡೆದ ಕೂಡಲೇ ಕಂಗಾಲಾದ ವಹೀದ್, ವೈದ್ಯ ಡಾ. ರಾಮಚಂದ್ರ ಪರವಾಗಿ ಲಂಚದ ಹಣ ಸ್ವೀಕರಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿದ ಲೋಕಾಯುಕ್ತ ಡಿವೈಎಸ್‌ಪಿ ಅವರು ಡಾ. ರಾಮಚಂದ್ರ ಅವರನ್ನು ಕರೆಸಿ ಅವರ ಕೈಯಿಂದಲೇ ರೋಗಿ ಕಡೆಯವರಿಗೆ ಹಣ ಮರಳಿಸಿದ್ದರು. ಮತ್ತು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಇದೀಗ ಡಾ. ರಾಮಚಂದ್ರ ಸೇವೆಯಿಂದ ಅಮಾನತುಗೊಂಡಿದ್ದಾರೆ.
ಇದನ್ನೂ ಓದಿ : Lokayukta Raid: ಲಂಚ ಪಡೆಯುತ್ತಿದ್ದ ಉಪ ತಹಸೀಲ್ದಾರ್, ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ