Site icon Vistara News

Corruption case: ಜೈಲುಪಾಲಾಗಿದ್ದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಸಿಕ್ತು ಬೇಲ್‌; 5 ಷರತ್ತು ವಿಧಿಸಿದ ಜನಪ್ರತಿನಿಧಿಗಳ ಕೋರ್ಟ್

Madal Virupakshappa

#image_title

ಬೆಂಗಳೂರು: ಕೆಎಸ್‌ಡಿಎಲ್‌ ಹಗರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿದ್ದ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ (Madalu virupakshappa) ಜನಪ್ರತಿನಿಧಿಗಳ ಕೋರ್ಟ್‌ ಕೆಲವು ಷರತ್ತುಗಳೊಂದಿಗೆ (Corruption case) ಜಾಮೀನು ಮಂಜೂರು ಮಾಡಿದೆ. ಶಾಸಕ ವಿರೂಪಾಕ್ಷಪ್ಪ ಅವರ ಪುತ್ರ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತರಿಗೆ (Lokayukta Raid) ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಅಲ್ಲದೆ, ಅವರ ಮನೆಯನ್ನು ಶೋಧ ಮಾಡಿದಾಗ ದಾಖಲೆ ಇಲ್ಲದ 8 ಕೋಟಿ ರೂಪಾಯಿ ದೊರೆತಿತ್ತು.

ಲಂಚ ಪಡೆದ ಸಂಬಂಧ ಹಾಗೂ ಮನೆಯಲ್ಲಿ ಸಿಕ್ಕ ಕೋಟಿ ಕೋಟಿ ಹಣದ ಬಗ್ಗೆ ಪ್ರತ್ಯೇಕ ಪ್ರಕರಣಗಳನ್ನು ಲೋಕಾಯುಕ್ತ ಅಧಿಕಾರಿಗಳು ದಾಖಲಿಸಿ, ವಿರೂಪಾಕ್ಷಪ್ಪರನ್ನು ಬಂಧಿಸಿದ್ದರು. ಲೋಕಾಯುಕ್ತ ಕಚೇರಿಯಲ್ಲಿ ತೀವ್ರ ವಿಚಾರಣೆ ಮಾಡಿದ ಬಳಿಕ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದರು.

ಈ ಮಧ್ಯೆ ಮಾಡಾಳ್‌ ಪರ ವಕೀಲರು ಅನಾರೋಗ್ಯ ಕಾರಣ ನೀಡಿ ಜಾಮೀನು ಕೊಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ವೇಳೆ ಕೋರ್ಟ್ ಅನಾರೋಗ್ಯ ಕಾರಣಕ್ಕೆ ಸೂಕ್ತ ದಾಖಲೆ ನೀಡುವಂತೆ ಕೇಳಿತ್ತು. ಅದರಂತೆ ಶಾಸಕರ ಪರ ವಕೀಲರು ದಾಖಲೆಯನ್ನು ಸಲ್ಲಿಕೆ ಮಾಡಿದ್ದರು. ಇದೀಗ 15 ದಿನಗಳ ಸೆರೆವಾಸ ಅನುಭವಿಸಿದ ಮಾಡಾಳು ವಿರೂಪಾಕ್ಷಪ್ಪಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಜಯಂತ್ ಕುಮಾರ್ ಅವರು ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ಪಾಸ್‌ಪೋರ್ಟ್ ಸರೆಂಡರ್ ಮಾಡುವಂತೆ ಆದೇಶ

ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯವು ಕೆಲ ಷರತ್ತುಗಳನ್ನು ವಿಧಿಸಿದೆ. ಸಾಕ್ಷಿದಾರರಿಗೆ ಬೆದರಿಕೆ ಹಾಕಬಾರದು, ನ್ಯಾಯಾಲಯದ ಅನುಮತಿ‌ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು, ನ್ಯಾಯಾಲಯದ ದಿನಗಳಿಗೆ ಕೋರ್ಟ್‌ಗೆ ಹಾಜರಾಗಬೇಕು, ತನಿಖಾಧಿಕಾರಿಗಳು ಕರೆದಾಗ ಹಾಜರಾಗಬೇಕು. ಮಾತ್ರವಲ್ಲದೆ 3 ವಾರಕ್ಕೊಮ್ಮೆ ಲೋಕಾಯುಕ್ತ ಕಚೇರಿಗೆ ಹಾಜರಾಗಬೇಕು. ಪಾಸ್‌ಪೋರ್ಟ್‌ ಅನ್ನು ಸರೆಂಡರ್ ಮಾಡುವಂತೆ‌ ಷರತ್ತು ಹಾಕಿದೆ. 5 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡುವಂತೆ‌ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Theft Case In Bengaluru: ಉಂಡ ಮನೆಗೆ ಕನ್ನ ಹಾಕಿದ ಮನೆಕೆಲಸದಾಕೆ; ಮಾಲು ಸಮೇತ ಮೂವರ ಸೆರೆ

ಚುನಾವಣೆ ಟಿಕೆಟ್‌ ಮಿಸ್‌

ಮಾಡಾಳ್ ವಿರೂಪಾಕ್ಷಪ್ಪ ಜೈಲಿಗೆ ಹೋಗಿದ್ದೇ ಇತ್ತ ಪಕ್ಷದಲ್ಲಿಯೂ ವಿಧಾನಸಭಾ ಚುನಾವಣೆಯ ಟಿಕೆಟ್ ಮಿಸ್ ಆಗಿದೆ. ಮಾತ್ರವಲ್ಲ‌ ಪುತ್ರ ಮಾಡಾಳ್ ಪ್ರಶಾಂತ್‌ಗೆ ಬಿಜೆಪಿ ಪಕ್ಷ ಟಿಕೆಟ್ ನೀಡಲು ನಿರಾಕರಿಸಿದೆ.

Exit mobile version