Site icon Vistara News

Corruption case: ಮಧ್ಯಂತರ ಜಾಮೀನು ಸಂಬಂಧ ಬಿಜೆಪಿ ಶಾಸಕ ಮಾಡಾಳುಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್

Madal Virupakshappa

ಬೆಂಗಳೂರು, ಕರ್ನಾಟಕ: ಭ್ರಷ್ಟಾಚಾರ ಪ್ರಕರಣ (Corruption case) ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಕುರಿತು ಸಮರ್ಥನೆ ಮಾಡಿಕೊಳ್ಳಲು ಆರೋಪಿ, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳು (Madal Virupakshappa) ಅವರಿಗೆ ಸೋಮವಾರ ಸುಪ್ರೀಂ ಕೋರ್ಟ್‌ (Supreme Court) ನೋಟಿಸ್ ಜಾರಿ ಮಾಡಿದೆ.

ಶಾಸಕ ವಿರೂಪಾಕ್ಷಪ್ಪ ಮಾಡಾಳು ಅವರ ಪುತ್ರ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯಕ್ತರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿದ್ದರು. ಅಲ್ಲದೇ, ಅವರ ಮನೆಯನ್ನು ಶೋಧ ಮಾಡಿದಾಗ ದಾಖಲೆ ಇಲ್ಲದ 8 ಕೋಟಿ ರೂಪಾಯಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಮಾಡಾಳು ಅವರು ಮಾರ್ಚ್ 7ರಂದು ಕರ್ನಾಟಕ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ಲೋಕಾಯುಕ್ತ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ವಿರೂಪಾಕ್ಷಪ್ಪ ಅವರು ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಡಿಎಸ್ಎಲ್) ಅಧ್ಯಕ್ಷರಾಗಿದ್ದರು. ಹೀಗಾಗಿ ಟೆಂಡರ್‌ಗೆ ಸಂಬಂಧಿಸಿದಂತೆ ಅವರ ಪುತ್ರ ಲಂಚ ಸ್ವೀಕರಿಸುತ್ತಿದ್ದರು ಎಂದ ಆರೋಪ ಅವರ ಮೇಲಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಮಾಡಾಳು ಅವರು ಕೆಡಿಎಸ್‌ಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಮಾಡಾಳು ಅವರು ಕರ್ನಾಟಕ ಹೈಕೋರ್ಟ್‌ನಿಂದ ಬಂಧನ ಪೂರ್ವ ಜಾಮೀನು ಪಡೆದುಕೊಂಡಿದ್ದರು.

ಕರ್ನಾಟಕ ಹೈಕೋರ್ಟ್ ನೀಡಿದ್ದ ಈ ಮಧ್ಯಂತರ ಜಾಮೀನು ಪ್ರಶ್ನಿಸಿ ಕಳೆದ ವಾರ ಲೋಕಾಯುಕ್ತವು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ದೆ ವಕೀಲರ ಮೂಲಕ ಹಾಜರಾಗಲು ಮತ್ತು ವಾದಿಸಲು ನೋಟಿಸ್‌ ನೀಡಲಾಗಿದೆ.

ಲೋಕಾಯುಕ್ತ ಎಫ್‌ಐಆರ್‌ನಲ್ಲಿ ಏನಿದೆ?

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್‌)ಕ್ಕೆ ಕಚ್ಚಾ ವಸ್ತು ಖರೀದಿ ಟೆಂಡರ್‌ಗೆ ಸಂಬಂಧಿಸಿ 40 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಜಲ ಮಂಡಳಿ ಮುಖ್ಯಾಧಿಕಾರಿ ಮಾಡಾಳ್‌ ಪ್ರಶಾಂತ್‌ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತರ ಬಲೆಗೆ (Lokayukta raid) ಬಿದ್ದಿದ್ದರೂ ಈ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿ ಗುರುತಿಸಲಾಗಿರುವುದು, ಅವರ ತಂದೆ, ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು. ಅವರನ್ನು ನಂಬರ್‌ ಒನ್‌ ಆರೋಪಿಯಾಗಿ ಗುರುತಿಸಿದ ಎಫ್‌ಐಆರ್‌ನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ನಡುವೆ ಲೋಕಾಯುಕ್ತ ದಾಳಿಯಲ್ಲಿ 8.13 ಕೋಟಿ ರೂ. ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ.

ಇದನ್ನೂ ಓದಿ: Lokayukta Raid: ನಾನು ಮಾಡಾಳು ಮನೆಯಲ್ಲೇ ಇದ್ದೆ; ನಾನೊಬ್ಬ ಸಜ್ಜನ ರಾಜಕಾರಣಿ: ಮಾಡಾಳು ವಿರೂಪಾಕ್ಷಪ್ಪ ಸಮರ್ಥನೆ

ಹೌದು, ಇದು ಮಾಡಾಳು ವಿರೂಪಾಕ್ಷಪ್ಪ ಅವರೇ ರೂಪಿಸಿಕೊಂಡ ಲಂಚದ ಜಾಲ ಎನ್ನುವುದನ್ನು ಪ್ರಾಥಮಿಕ ತನಿಖೆಯಲ್ಲೇ ಸ್ಪಷ್ಟಪಡಿಸಿಕೊಂಡಿರುವ ಲೋಕಾಯುಕ್ತ ಅವರನ್ನೇ ನಂಬರ್‌ ಒನ್‌ ಆರೋಪಿಯಾಗಿ ಗುರುತಿಸಿದೆ. ಬಿಜೆಪಿಯ ಕೆಲವು ನಾಯಕರು ಇದು ಮಾಡಾಳು ಪ್ರಶಾಂತ್‌ ಅವರ ವೈಯಕ್ತಿಕ ವ್ಯವಹಾರ. ಅವರು ಸರ್ಕಾರಿ ಅಧಿಕಾರಿ ಎಂದೆಲ್ಲ ಹೇಳಿದ್ದರು. ಇದರಲ್ಲಿ ಕೇವಲ ಪ್ರಶಾಂತ್‌ ಅವರನ್ನು ಮಾತ್ರ ಸಿಕ್ಕಿಸಿಹಾಕುವ ಪ್ರಯತ್ನವೊಂದು ಕಾಣುತ್ತಿತ್ತು. ಆದರೆ, ಲೋಕಾಯುಕ್ತರು ಮಾಡಾಳು ವಿರೂಪಾಕ್ಷಪ್ಪ ಅವರನ್ನೇ ಪ್ರಧಾನ ಆರೋಪಿಯಾಗಿ ನಮೂದಿಸಿದ್ದಾರೆ.

Exit mobile version