ಮಂಗಳೂರು: ನಗರ ಲಾಡ್ಜ್ ಒಂದರಲ್ಲಿ ಕೇರಳ ಮೂಲದ ದಂಪತಿ ಆತ್ಮಹತ್ಯೆ (Couple suicide) ಮಾಡಿಕೊಂಡಿದ್ದಾರೆ. ಮಂಗಳೂರಿನ ಫಳ್ನೀರಿನಲ್ಲಿರುವ ಬ್ಲೂ ಸ್ಟಾರ್ ಲಾಡ್ಜ್ ನಲ್ಲಿ ರವೀಂದ್ರ (55) ಮತ್ತು ಸುಧಾ(50) ಆತ್ಮಹತ್ಯೆ ಮಾಡಿಕೊಂಡವರು.
ಕೇರಳದ ಕಣ್ಣೂರಿನ ತಳೀಪುರಂನ ನಿವಾಸಿಗಳಾಗಿರುವ ಇವರು ಫೆ. 6ರಂದು ಲಾಡ್ಜ್‌ಗೆ ಬಂದು ರೂಂ ಬುಕ್ ಮಾಡಿದ್ದರು. ಆ ದಿನ ರಾತ್ರಿಯೇ ರೂಂನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅದು ತಡವಾಗಿ ಬೆಳಕಿಗೆ ಬಂದಿದೆ.
ಮೂಲತಃ ಬಟ್ಟೆ ವ್ಯಾಪಾರಿಗಳಾಗಿರುವ ದಂಪತಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದರೆ, ವ್ಯಾಪಾರದಲ್ಲಿನ ನಷ್ಟ ಇಲ್ಲವೇ ಕೌಟುಂಬಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಶಾಲ ನಗರದಲ್ಲಿ ನಿವೃತ್ತ ಅರಣ್ಯಾಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಮಡಿಕೇರಿ: ಕೊಡಗಿನ ವಿವಿಧೆಡೆ ರೇಂಜರ್ ಆಗಿ ಸೇವೆ ಸಲ್ಲಿಸಿದ್ದ, ನಿವೃತ್ತ ಅರಣ್ಯಾಧಿಕಾರಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Forest officer suicide) ಮಾಡಿಕೊಂಡಿದ್ದಾರೆ. ಈಗ ೮೦ನೇ ವಯಸ್ಸಿನವರಾಗಿರುವ ಟಿ.ವಿ. ಶಶಿ ಎಂಬವರೇ ಹೀಗೆ ಸಾವಿಗೆ ಶರಣಾದವರು.
ಕುಶಾಲನಗರ ತಾಲ್ಲೂಕಿನ ಬಸವನತ್ತೂರಿನಲ್ಲಿ ಘಟನೆ ನಡೆದಿದೆ. ಅವರು ತಮ್ಮ ಮನೆಯಲ್ಲೇ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಶಶಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರಿಗೆ ಪ್ರಮುಖವಾಗಿ ನಿದ್ರಾ ಹೀನತೆ ಕಾಡುತ್ತಿತ್ತು. ತಮ್ಮ ಸಮಸ್ಯೆಗಳನ್ನು ಅವರು ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Road Accident: ಬೇಲೂರಿನಲ್ಲಿ ಟಿಪ್ಪರ್ ಹರಿದು ಬೈಕ್ ಸವಾರ ಮೃತ್ಯು