Site icon Vistara News

Suicide case: ಲಿವಿಂಗ್‌ ಟುಗೆದರ್‌ನಲ್ಲಿದ್ದ ಜೋಡಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ; ಕುಟುಂಬದ ಜತೆ ಜಗಳ ಕಾರಣ?

couple dead

#image_title

ಬೆಂಗಳೂರು: ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಜೋಡಿಯೊಂದು ಪ್ರಾಣ ಕಳೆದುಕೊಂಡ (Suicide case) ಘಟನೆ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಗದೀಶ್ ಮತ್ತು ನಂದಿನಿ ಆತ್ಮಹತ್ಯೆಗೆ ಶರಣಾದವರು.

ಮೂಲತಃ ದಾವಣಗೆರೆ ಚನ್ನಗಿರಿ ಮೂಲದ ಜಗದೀಶ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರೆ ‌ ತುಮಕೂರು ಮೂಲದ ನಂದಿನಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ಇವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಲಿವಿಂಗ್ ಟುಗೆದರ್‌ನಲ್ಲಿ ಇದ್ದರು. ಪೀಣ್ಯದ ಮನೆಯೊಂದರಲ್ಲಿ ವಾಸವಾಗಿದ್ದರು.

ಇವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದು, ಆಸುಪಾಸಿನವರು ಈ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಕೌಟುಂಬಿಕ ಸಮಸ್ಯೆಯಿಂದಾಗಿ ಇವರು ಇಂಥ ಅತಿರೇಕದ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಜಗದೀಶ್ ಚನ್ನಗಿರಿಯಲ್ಲಿರುವ ನಿವೇಶನವೊಂದರ ಸಂಬಂಧ ಕುಟುಂಬ ಸದಸ್ಯರೊಂದಿಗೆ ಜಗಳ ಮಾಡಿದ್ದ ಎನ್ನಲಾಗಿದೆ. ಮಾತ್ರವಲ್ಲ, ನಿವೇಶನದ ಕಾಗದ ಪತ್ರಗಳ ಸುಟ್ಟು ಬಂದಿದ್ದ.

ಈ ವಿಚಾರಗಳನ್ನು ಆತ ಡೆತ್ ನೋಟ್ ಬರೆದಿಟ್ಟು ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಡೆತ್‌ ನೋಟ್‌ನಲ್ಲಿ ತನ್ನ ತಂದೆ ಮತ್ತು ಮನೆಯ ಕುಟುಂಬದ ಸದಸ್ಯರ ಹೆಸರು ಬರೆದಿಟ್ಟಿದ್ದಾನೆ. ಹೀಗಾಗಿ ಇದು ಜಾಗದ ವಿಚಾರಕ್ಕೆ ಸಂಬಂಧಿಸಿ ಆಗಿರುವ ಗಲಾಟೆಯ ತೀವ್ರತೆಯ ಫಲವಾದ ಸಾವು ಎಂದು ಹೇಳಲಾಗಿದೆ. ಪೊಲೀಸರು ಡೆತ್ ನೋಟ್ ಹಿನ್ನೆಲೆಯನ್ನು ಇಟ್ಟುಕೊಂಡು ಐಪಿಸಿ ಸೆಕ್ಷನ್‌ 306 ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಗೆ ರವಾನೆ ಮಾಡಲಾಗಿದೆ.

ನೆಲಮಂಗಲ ಬಳಿ ಬೈಕ್‌ಗೆ ಲಾರಿ ಡಿಕ್ಕಿ; ಜೊಮ್ಯಾಟೊ ಡೆಲಿವರಿ ಬಾಯ್‌ ಸಾವು

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 75ರ ಬಿಲ್ಲಿನಕೋಟೆ ಬಳಿ ನಡೆದ ಅಪಘಾತದಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್‌ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬಿಲ್ಲಿನಕೋಟೆಯಲ್ಲಿ ಬೈಕ್‌ಗೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಮಲ್ಲೇಶ್ ಬಿ (24) ಮೃತಪಟ್ಟಿದ್ದಾರೆ.

ಬುಧವಾರ ಸಂಜೆ ಈ ಅಪಘಾತ ನಡೆದಿದ್ದು, ಗಾಯಗೊಂಡ ಯುವಕನನ್ನು ನಾಲ್ಕಾರು ಆಸ್ಪತ್ರೆಗೆ ಕರೆದೊಯ್ದರೂ ಕೊನೆಗೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮಲ್ಲೇಶ್‌ ಅವರನ್ನು ಮೊದಲು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಅಲ್ಲಿಂದ ನೆಲಮಂಗಲ ಖಾಸಗಿ ಆಸ್ಪತ್ರೆ, ವಿಕ್ಟೋರಿಯಾ, ನಿಮ್ಹಾನ್ಸ್ ಮಾತ್ರವಲ್ಲ, ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಪ್ರಾಣ ಉಳಿಯಲಿಲ್ಲ. ಕೊನೆಗೆ ಖಾಸಗಿ ಆಸ್ಪತ್ರೆಯಲ್ಲಿ ಯುವಕ ಕೊನೆಯುಸಿರೆಳೆದರು. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ: ಸವಾರ ಸಾವು

ಬಿಎಂಟಿಸಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಪ್ರಾಣ ಕಳೆದುಕೊಂಡ ಘಟನೆ ಯಲಹಂಕ ತಾಲೂಕಿನ ಸಾದಹಳ್ಳಿ ಗೇಟ್ ಬಳಿ ನಡೆದಿದೆ. ಉತ್ತನಹಳ್ಳಿ ಗ್ರಾಮದ ಬಸವರಾಜ್ (40) ಮೃತರು.

ಸಾದಹಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಬಸವರಾಜು ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಬಸವರಾಜು ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರು ಉಸಿರು ಕಳೆದುಕೊಂಡರು. ಅಪಘಾತ ಕುರಿತು ಚಿಕ್ಕ ಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Festival tragedy : ಗೋಲಕೇರಿ ಜಾತ್ರೆಯಲ್ಲಿ ರಥದ ಮೇಲಿಂದ ಬಿದ್ದು ಸಾವು, ಇನ್ನೊಂದು ಕಡೆ ಚಕ್ರಕ್ಕೆ ಸಿಲುಕಿದ ಕಾಲು

Exit mobile version