Site icon Vistara News

ಮುರುಘಾ ಶ್ರೀಗಳ ವೈದ್ಯಕೀಯ ವರದಿ ಕೋರ್ಟ್‌ಗೆ ಸಲ್ಲಿಕೆ: ಆಸ್ಪತ್ರೆಗೆ ದಾಖಲಿಸಿ ಆ್ಯಂಜಿಯೋಗ್ರಾಮ್‌ ನಡೆಸಲು ಸೂಚನೆ

ಮುರುಘಾಶ್ರೀಗಳಿಗೆ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ವೈದ್ಯಕೀಯ ವರದಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಇದನ್ನು ಪರಿಗಣಿಸಿದ ನ್ಯಾಯಾಧೀಶರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಅವಕಾಶ ನೀಡಿದ್ದಾರೆ.

ಬುಧವಾರ ಚಿತ್ರದುರ್ಗ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಲಯದಲ್ಲಿ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಕೋರ್ಟ್‌ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಈ ನಡುವೆ ಕೋರ್ಟ್‌ಗೆ ಶ್ರೀಗಳ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಸಲ್ಲಿಸಲಾಯಿತು.

ಜುಲೈ ೨೭ರಂದು ಬಯಲಿಗೆ ಬಂದಿದ್ದ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಮುರುಘಾಶರಣರನ್ನು ಸೆಪ್ಟೆಂಬರ್‌ ೧ರಂದು ಬಂಧಿಸಲಾಗಿತ್ತು. ಅಂದೇ ರಾತ್ರಿ ಅವರನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದಾಗ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ನಡುವೆ, ಸೆ.2ರಂದು ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡ ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಸಿಜಿ, ಸ್ಕ್ಯಾನಿಂಗ್, ರಕ್ತದ ಮಾದರಿ ಪರೀಕ್ಷಿಸಲಾಗಿತ್ತು.
ಈ ನಡುವೆ, ಕೋರ್ಟ್‌ ತನಗೆ ತಿಳಿಸದೆ ಆಸ್ಪತ್ರೆಗೆ ಕರೆದೊಯ್ದ ಕಾರಣಕ್ಕೆ ಗರಂ ಆಗಿತ್ತು. ವಕೀಲರು ಅವರಿಗೆ ಹೆಚ್ಚಿನ ಚಿಕಿತ್ಸೆ ಬೇಕು, ಆಸ್ಪತ್ರೆಗೆ ದಾಖಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರೂ ಒಪ್ಪದೆ, ಪೊಲೀಸರ ಕೋರಿಕೆಯಂತೆ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿತ್ತು.

ಇದೀಗ ಸೆಪ್ಟೆಂಬರ್‌ ಐದರಂದು ಕಸ್ಟಡಿ ಅವಧಿ ಮುಗಿದು ಕೋರ್ಟ್‌ಗೆ ಹಾಜರುಪಡಿಸಿದಾಗ ಜೈಲಿಗೆ ಕಳುಹಿಸುವಂತೆ ಸೂಚಿಸಲಾಯಿತು. ಹೀಗಾಗಿ ಕಳೆದ ಎರಡು ದಿನಗಳಿಂದ ಶ್ರೀಗಳು ಜೈಲಿನಲ್ಲಿದ್ದಾರೆ.

ಶ್ರೀಗಳಿಗೆ ಪ್ರಕರಣದಲ್ಲಿ ಜಾಮೀನು ಕೊಡಬೇಕು ಎಂದು ಸೋಮವಾರವೇ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ಬುಧವಾರ ನಡೆಯಿತಾದರೂ ನಾಳೆಗೆ ಮುಂದೂಡಲಾಗಿದೆ. ಈ ನಡುವೆ ವಕೀಲರು ಶ್ರೀಗಳ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅದರಲ್ಲಿ ಹೆಚ್ಚುವರಿ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ಉಲ್ಲೇಖ ಇರುವುದನ್ನು ಗಮನಿಸಿದ ಕೋರ್ಟ್‌ ಕೊರೊನರಿ ಆಂಜಿಯೊಗ್ರಾಂಗೆ ಅವಕಾಶ ನೀಡಿದೆ.

ವೈದ್ಯಕೀಯ ವರದಿ ಪರಿಶೀಲಿಸಿರುವ ನ್ಯಾಯಾಧೀಶರು, ಹೃದಯ ಸಂಬಂಧಿತ ಕಾಯಿಲೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಮುರುಘಾಶ್ರೀಗೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ, ಚಿಕಿತ್ಸೆಗೆ ಸೂಚಿಸಿದ್ದಾರೆ. ಚಿಕಿತ್ಸೆಗಾಗಿ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಮುರುಘಾಶ್ರೀ ಶಿಫ್ಟ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ | Umesh katti ತಮ್ಮ ರಮೇಶ್‌ ಕತ್ತಿ ಆರೋಗ್ಯದಲ್ಲಿ ಏರುಪೇರು, ಹೃದಯ ತಪಾಸಣೆ

Exit mobile version