ಚಿತ್ರದುರ್ಗ: ನ್ಯಾಯಾಲಯದ ಅನುಮತಿ ಪಡೆಯದೆ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಆಸ್ಪತ್ರೆಗೆ ದಾಖಲಿಸಿದ್ದಕ್ಕಾಗಿ ಕೋರ್ಟ್ ಗರಂ ಆಗಿದ್ದು, ಕೋರ್ಟ್ ಮುಂದೆ ಹಾಜರುಪಡಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ.
ಇದರೊಂದಿಗೆ ನಿನ್ನೆ ರಾತ್ರಿಯಿಂದ ನಡೆದಿರುವ ಮುರುಘಾ ಶರಣರ ಪ್ರಕರಣದ ಹೈಡ್ರಾಮಾಕ್ಕೆ ನ್ಯಾಯಾಲಯ ಬ್ರೇಕ್ ಹಾಕಿದೆ. ಬೆಂಗಳೂರಿಗೆ ಶಿಫ್ಟ್ ಮಾಡುವ ಬದಲು ಕೋರ್ಟ್ ಮುಂದೆ ಹಾಜರುಪಡಿಸಿ. ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳೋಣ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಮುರುಘಾ ಶರಣರನ್ನು ಮೊದಲು ನ್ಯಾಯಾಲಯಕ್ಕೆ ಹಾಜರು ಪಡಿಸಿ. ಬಳಿಕ ತೀರ್ಮಾನ ಎಂದು 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೋಮಲಾ ಅವರು ಆದೇಶಿಸಿದ್ದಾರೆ. ಪೊಲೀಸರು ಸಿಆರ್ಪಿಸಿ ಸೆಕ್ಷನ್ 41ಡಿ ಪ್ರಕಾರ ಆರೋಪಿ A1ನ್ನು ಐದು ದಿನಗಳ ಕಾಲ ಕಸ್ಟಡಿಗೆ ಕೋರಿದ್ದರು. ಮುರುಘಾ ಶರಣರು ಹಾಜರು ಆದ ಮೇಲೆ ಕಸ್ಟಡಿ ಅರ್ಜಿ ವಿಚಾರಣೆ ಮಾಡೋಣ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈಗಾಗಲೇ ಮುರುಘಾ ಶರಣರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ನ್ಯಾಯಾಲಯದ ಮುಂದೆ ಶ್ರೀಗಳ ಪರ ವಕೀಲರು ಹೇಳಿದ್ದಾರೆ.
ಗುರುವಾರ ರಾತ್ರಿ ಶರಣರ ಬಂಧನ ನಡೆದಿತ್ತು. ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಶುಕ್ರವಾರ ಮುಂಜಾನೆ ಎದೆನೋವಿನಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದ ಶ್ರೀಗಳನ್ನು ಅಗತ್ಯ ಚಿಕಿತ್ಸೆಗಳ ಬಳಿಕ ಐಸಿಯುದಲ್ಲಿ ಇಡಲಾಗಿತ್ತು. ಆದರೆ ನ್ಯಾಯಾಲಯದ ಅನುಮತಿ ಪಡೆಯದೆ ಆಸ್ಪತ್ರೆಗೆ ದಾಖಲು ಮಾಡಿದ್ದಕ್ಕಾಗಿ ಕೋರ್ಟ್ ಗರಂ ಆಗಿದೆ.
ಆದರೆ ವಿಚಾರ ಸಾಕಷ್ಟು ಸೂಕ್ಷ್ಮವಾಗಿರೋದರಿಂದ ವಿಡಿಯೊ ಕರೆ ಮುಖಾಂತರ ಹಾಜರುಪಡಿಸುತ್ತೇವೆಂದು ಕಾರಾಗೃಹ ಸೂಪರಿಂಟೆಂಡೆಂಟ್ ಎಂ ಎಂ ಮರಕಟ್ಟಿ ಅವರು ಮನವಿ ಮಾಡಿದ್ದರು, ಇದಕ್ಕೆ ನ್ಯಾಯಾಧೀಶರು ಒಪ್ಪಿಲ್ಲ
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳ ಶಿಫ್ಟ್ ಬಗ್ಗೆ ಜಯದೇವಕ್ಕೆ ಮಾಹಿತಿ ಇಲ್ಲ, ಹಾಗಾದರೆ ಎಲ್ಲಿಗೆ?