Site icon Vistara News

ADGP Alok kumar : ಫೈಟರ್‌ ರವಿ Vs ಎಡಿಜಿಪಿ ಅಲೋಕ್‌ ಕುಮಾರ್‌ ಲಂಚ ಬೇಡಿಕೆ ಪ್ರಕರಣ, ರವಿಗೆ ನೋಟಿಸ್‌

ADGP Alok kumar Court Fighter ravi

#image_title

ಬೆಂಗಳೂರು: 2014ರಲ್ಲಿ ತನ್ನ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ಕೈಬಿಡಲು ಐಪಿಎಸ್‌ ಅಧಿಕಾರಿ, ಹಾಲಿ ಎಡಿಜಿಪಿ ಅಲೋಕ್‌ ಕುಮಾರ್‌ (ADGP Alok kumar) ಅವರು ಲಂಚ ಕೇಳಿದ್ದರು ಎಂಬ ಫೈಟರ್‌ ರವಿ ಅಲಿಯಾಸ್‌ ಬಿ.ಎನ್‌. ಮಲ್ಲಿಕಾರ್ಜುನ್‌ ಆರೋಪಕ್ಕೆ ಸಂಬಂಧಿಸಿದ ವಿಚಾರಣೆ ರಾಜ್ಯ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಫೈಟರ್‌ ರವಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದೆ.

ಪ್ರಸಕ್ತ ರಾಜಕಾರಣಿಯಾಗಿ ಪರಿವರ್ತನೆಯಾಗಿರುವ, ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಫೈಟರ್‌ ರವಿ ಅಲಿಯಾಸ್‌ ಬಿ.ಎಂ. ಮಲ್ಲಿಕಾರ್ಜುನ (44) ವಿರುದ್ಧ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆ ವ್ಯಾಪ್ತಿ‌ಯಲ್ಲಿ 2014ರಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಆಗಿನ ಉತ್ತರ ವಲಯದ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ₹ 1 ಕೋಟಿ ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂಬ ಗಂಭೀರ ಆರೋಪ ಎದುರಾಗಿತ್ತು.

ಫೈಟರ್‌ ರವಿ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯಿದೆ– ಕಲಂ 7, 13 (ಡಿ) ಮತ್ತು 13 (2)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ತನಿಖೆಯ ನಂತರ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಲಾಗಿತ್ತು. ಆದರೆ, ಲೋಕಾಯುಕ್ತ ವಿಶೇಷ ನ್ಯಾಯಾಲಯ ’ಬಿ’ ರಿಪೋರ್ಟ್‌ ಅನ್ನು ತಿರಸ್ಕರಿಸಿತ್ತು. ಈ ನಡುವೆ, ಅಲೋಕ್ ಕುಮಾರ್, ಎಸಿಪಿ ದಾನೇಶ್ ರಾವ್ ಮತ್ತಿತರರ ವಿರುದ್ಧದ ಆರೋಪಗಳನ್ನು ಸಂಜ್ಞೇಯ ಅಪರಾಧ ಎಂದು ತೀರ್ಮಾನಿಸಿತ್ತು. ಹೀಗಾಗಿ ಫೈಟರ್ ರವಿಯ ಸ್ವಯಂ ಹೇಳಿಕೆ ದಾಖಲಿಸುವ ಕ್ರಮಕ್ಕೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಹಾಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರ ಅರ್ಜಿಯ ಆಧಾರದಲ್ಲಿ ಸೋಮವಾರ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದ ವೇಳೆ, ಅಲೋಕ್‌ ಕುಮಾರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು ಅರ್ಜಿದಾರರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ. ತನಿಖಾಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ʼಬಿʼ ರಿಪೋರ್ಟ್ ಎಂದು ನಮೂದಾಗಿದೆ. ಆದರೆ, ವಿಶೇಷ ನ್ಯಾಯಾಲಯವು ಕೇವಲ ಫಿರ್ಯಾದಿಯ ದೂರು ಮತ್ತು ಪ್ರತಿಭಟನಾ ಅರ್ಜಿಯನ್ನು ಆಧರಿಸಿ ಸಂಜ್ಞೇಯ ಅಪರಾಧದಡಿ ವಿಚಾರಣೆಗೆ ಮುಂದಾಗಿದೆ. ಆದ್ದರಿಂದ, ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿದರು.

ವಾದ ಆಲಿಸಿದ ಪೀಠವು ಪ್ರತಿವಾದಿ ಬಿ ಎಂ‌ ಮಲ್ಲಿಕಾರ್ಜುನ ಅಲಿಯಾಸ್‌ ರವಿ ಯಾನೆ ಫೈಟರ್‌ ರವಿ ಬಿ‌ನ್ ಎನ್‌ ಮಲ್ಲಯ್ಯಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಐಪಿಎಸ್‌ ಅಧಿಕಾರಿ ಮತ್ತು ಹಳೆ ರೌಡಿ, ಹೊಸ ರಾಜಕಾರಣಿ ನಡುವಿನ ಈ ಕಾನೂನು ಸಮರ ಕುತೂಹಲ ಮೂಡಿಸಿದೆ. ಮುಂದಿನ ವಿಚಾರಣೆಯ ಮುನ್ನ ಫೈಟರ್‌ ರವಿ ಉತ್ತರ ನೀಡಬೇಕಾಗಿದೆ.

ಇದನ್ನೂ ಓದಿ : Karnataka High court : ಫ್ಲೆಕ್ಸ್‌ ಹಾಕಿದವರನ್ನು ಬಿಟ್ಟು ತಯಾರಿಸಿದವರ ಮೇಲೆ ಕ್ರಮ; ಬಿಬಿಎಂಪಿ ನಿಲುವಿಗೆ ಹೈಕೋರ್ಟ್‌ ಆಕ್ಷೇಪ

Exit mobile version