ಸಿದ್ದಾಪುರ: ಕನ್ನಡ ತಾಯಿ ಭುವನೇಶ್ವರಿಯನ್ನು (Bhuvaneshwari Statue) ಅವಹೇಳನ ಮಾಡಿದ ಆರೋಪದಲ್ಲಿ ಕೋಡಿಹೊಸಹಳ್ಳಿ ರಾಮಣ್ಣ ಹಾಗೂ ಎ.ಎಸ್. ನಾಗರಾಜಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗಲು ನ್ಯಾಯಾಲಯದಿಂದ ನೋಟಿಸ್ ನೀಡಲಾಗಿದೆ.
ದೂರುದಾರರಾದ ಹಿರಿಯ ಪತ್ರಕರ್ತ, ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಾಗರಾಜ್ ಅವರು, ತಾಯಿ ಭುವನೇಶ್ವರಿ ಅವಮಾನ ಮಾಡಲಾಗಿದೆ ಎಂದು ಸಿದ್ದಾಪುರದ ನ್ಯಾಯಾಲಯಕ್ಕೆ 4ರಂದು ಅಪರಾಧಿಕ ದಾವೆಯನ್ನು ಹೂಡಿದ್ದರು.
ಕನ್ನಡಿಗರ ಅಸ್ಮಿತೆಯಾದ ಕನ್ನಡ ತಾಯಿ ಭುವನೇಶ್ವರಿಯ ಪರಿಕಲ್ಪನೆಯನ್ನು, ಮತೀಯ ನೆಲೆಯಲ್ಲಿ ನೋಡಿರುವ ರಾಮಣ್ಣ ಕೋಡಿಹೊಸಹಳ್ಳಿ, ಸಮಸ್ತ ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಹಾಗೂ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿದ್ದಾರೆ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲು ಎಸೆದಿದ್ದಾರೆ ಎಂಬ ಎಲ್ಲಾ ಅಂಶಗಳನ್ನು ನ್ಯಾಯಾಲಯವು ಪರಿಶೀಲಿಸಿ ಆರೋಪಿಗಳಿಗೆ ಸಮನ್ಸ್ ನೀಡಿದೆ.
ಡಿಸೆಂಬರ್ 7 ರಂದು ವಿಚಾರಣೆಗೆ ಹಾಜರಾಗಲು ಸೂಚನೆ
ಕೋಡಿಹೊಸಹಳ್ಳಿ ರಾಮಣ್ಣ ಹಾಗೂ ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಎ. ಎಸ್. ನಾಗರಾಜ ಸ್ವಾಮಿ ಅವರಿಗೆ ಕೋರ್ಟ್ ಸಮನ್ಸ್ ನೀಡಿದ್ದು, ಭಾರತೀಯ ದಂಡ ಸಂಹಿತೆ 153ಎ (ಧರ್ಮಗಳ ನಡುವೆ ದ್ವೇಷ ಉಂಟು ಮಾಡುವುದು), 295 ಎ (ಮತೀಯ ಗಲಭೆಗೆ ಕಾರಣವಾಗುವುದು), 298 (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಸೆಕ್ಷನ್ 499 (ಚಿನ್ಹೆ, ಪ್ರಾತಿನಿಧ್ಯಗಳ ಮೂಲಕ ಹಾನಿಯನ್ನು ಮಾಡುವುದು) 500 (ಮಾನನಷ್ಟ) 505 (ಸುಳ್ಳ ಮಾಹಿತಿ ಪ್ರಸಾರ)ಗಳ ಅನ್ವಯ, ಪ್ರಕರಣವನ್ನು ಮುಂದುವರೆಸಲು ಸೂಕ್ತ ಎಂದು ಅಭಿಪ್ರಾಯ ಪಟ್ಟು, ಆರೋಪಿಗಳಿಗೆ ಡಿಸೆಂಬರ್ 7 ರಂದು ನ್ಯಾಯಾಲಯದ ಮುಂದೆ ಹಾಜರಾಗಲು ಆದೇಶ ನೀಡಿದೆ.
ಏನಿದು ಪ್ರಕರಣ?
ಬೆಂಗಳೂರಿನಲ್ಲಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಸ್ಥಾಪಿತವಾಗಿರುವ ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆಗೆ ಕನ್ನಡ ಸಂಘರ್ಷ ಸಮಿತಿಯ ಸಲಹೆಗಾರ ಕೋಡಿಹೊಸಹಳ್ಳಿ ರಾಮಣ್ಣ ವಿರೋಧ ವ್ಯಕ್ತಪಡಿಸಿದ್ದರು.
ಒಂದು ಮತಧರ್ಮಕ್ಕೆ ಸೇರಿದ ಸ್ವರೂಪದ ಪ್ರತಿಮೆ ಸ್ಥಾಪಿಸುವುದು ಸರಿಯಲ್ಲ, ಭುವನೇಶ್ವರಿ ದೇವಿಯ ಪುತ್ಥಳಿಯನ್ನು ಸ್ಥಾಪನೆ ಮಾಡಿ ಹಿಂದುತ್ವದ ತೆಕ್ಕೆಗೆ ಒಳಪಡಿಸುವುದು ಸರಿಯಲ್ಲ. ವಿಗ್ರಹ ವೈದಿಕ ಪರಂಪರೆಯ ಪ್ರತಿರೂಪ, ಭುವನೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಒಂದು ಧರ್ಮಕ್ಕೆ ಸೀಮಿತ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದು ಸಹನೀಯವಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಹಿಂದುತ್ವದ ನಿಲುವು ಹೊಂದಿ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದೆ, ಹಿಂದುತ್ವದ ನಿಲುವಿನ ವಿರುದ್ಧ ಹೋರಾಟಕ್ಕೆ ದಾರಿ ಮಾಡಿ ಕೊಟ್ಟಿದೆ.
ಹಿಂದು, ಮುಸ್ಲಿಂ, ಜೈನ, ಬುದ್ಧ ಎಲ್ಲಾ ಜಾತಿ ಧರ್ಮದವರೂ ಇದ್ದು, ಭುವನೇಶ್ವರಿ ಸಾಮ್ರಾಜ್ಯದ ಸಂಕೇತ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹರಿಯ ಬಿಟ್ಟು, ಕನ್ನಡ ನಾಡ ದೇವತೆ ಭುವನೇಶ್ವರಿಗೆ ಅವಹೇಳನ ಮಾಡಿದ್ದು, ಈ ತಮ್ಮ ಕೃತ್ಯಕ್ಕೆ ಕನ್ನಡ ಸಂಘರ್ಷ ಸಮಿತಿಯ ಸಂಪೂರ್ಣ ಬೆಂಬಲ ಕೂಡ ಇದೆ ಎಂದು ಹೇಳಿಕೊಂಡಿದ್ದರು. ಇವರ ಹೇಳಿಕೆಗೆ ದೂರುದಾರ ನಾಗರಾಜ್ ಆಕ್ಷೇಪ ವ್ಯಕ್ತಪಡಿಸಿ, ಕೋರ್ಟ್ ಮೆಟ್ಟಿಲೇರಿದ್ದಾರೆ.
ಭುವನೇಶ್ವರಿಗೆ ಮತೀಯ ನೆಲೆಗಟ್ಟು ಇಲ್ಲ
ಕದಂಬ, ಬಾದಾಮಿ ಚಾಲುಕ್ಯರು, ವಿಜಯನಗರದ ಅರಸರು, ಮೈಸೂರು ಒಡೆಯರ್ ಎಲ್ಲರೂ ತಾಯಿ ಭುವನೇಶ್ವರಿಯನ್ನು ಆರಾಧಿಸುತ್ತಾ ಬಂದಿದ್ದು, ಕನ್ನಡದ ಕುಲಪುರೋಹಿತರು ಎನ್ನಿಸಿಕೊಂಡಿರುವ ಆಲೂರು ವೆಂಕಟರಾಯರು ತಮ್ಮ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ‘ಭುವನೇಶ್ವರಿ ಕನ್ನಡಿಗರ ತಾಯಿ’ ಎನ್ನುವ ಪರಿಕಲ್ಪನೆ ನೀಡಿದರು. ಅದಕ್ಕೆ ಆಚಾರ್ಯ ಬಿ.ಎಂ.ಶ್ರೀ, ಮಹಾಕವಿಗಳಾದ ಕುವೆಂಪು ಮತ್ತು ಬೇಂದ್ರೆ ತಮ್ಮ ಸಮ್ಮತಿ ನೀಡಿದರು. ಭುವನೇಶ್ವರಿಯ ಪರಿಕಲ್ಪನೆ ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಕನ್ನಡಿಗರನ್ನು ಒಂದುಗೂಡಿಸಿತು. ಅಲ್ಲಿಂದ ಮುಂದೆ ಕನ್ನಡಪರ ಹೋರಾಟಗಳಲ್ಲೆಲ್ಲಾ ಭುವನೇಶ್ವರಿಯನ್ನು ಕನ್ನಡದ ಕುಲದೇವತೆಯನ್ನಾಗಿ ನೋಡಿದ್ದನ್ನು ಕಾಣಬಹುದು. ಸುದೀರ್ಘ ಇತಿಹಾಸವನ್ನು ಹೊಂದಿರುವ ತಾಯಿ ಭುವನೇಶ್ವರಿ, ಕನ್ನಡ ಚರಿತ್ರೆಯಲ್ಲಿ ಎಲ್ಲಿಯೂ ಮತೀಯ ನೆಲೆಗಟ್ಟು ಇರುವುದು ಕಾಣುವುದಿಲ್ಲ ಎಂದು ದೂರುದಾರ ನಾಗರಾಜ್ ನ್ಯಾಯಾಲಯದ ಗಮನ ಸೆಳೆದಿದ್ದಾರೆ.
ಈ ಕನ್ನಡದ ಶ್ರೀಮಂತ ಪರಂಪರೆಗೆ ಮನ್ನಣೆ ನೀಡಿ, ಕನ್ನಡ ಸಾಹಿತ್ಯ ಪರಿಷತ್ತು ಬಹು ಸಂಖ್ಯಾತ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ, 2022ರ ನ.17ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಭುವನೇಶ್ವರಿ ದೇವಿಯ ಪುತ್ಥಳಿಯನ್ನು ಕನ್ನಡಿಗರೆಲ್ಲರ ಅಸ್ಮಿತೆಯ ಬಿಂಬವಾಗಿ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.