Site icon Vistara News

Covid Care Center | ಕೋವಿಡ್‌ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ; ಬಿಲ್ಲಿಂಗ್‌ನಲ್ಲಿ ಸಿಕ್ಕಿಬಿದ್ದರು

ಚಾಮರಾಜನಗರ: ಹನೂರಿನ ಎರಡು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ (Covid Care Center) ನಡೆದಿದ್ದ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಬಯಲಿಗೆ ಬರಲು, ಭ್ರಷ್ಟ ಅಧಿಕಾರಿಗಳೇ ಸೃಷ್ಟಿಸಿದ್ದ ನಕಲಿ ಬಿಲ್‌ಗಳೇ ಕಾರಣವಾಗಿದೆ! ಆದರೆ, ಪರಿಶೋಧನೆ ಮಾಡಿ ವರದಿ ನೀಡುವಂತೆ ಲೆಕ್ಕಪರಿಶೋಧನಾ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿ ಎರಡು ತಿಂಗಳು ಕಳೆದರೂ ಕ್ರಮವಿಲ್ಲದಿರುವುದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ.

ಹನೂರಿನ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ (Covid Care Center) ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಪ್ರಕರಣದ ಗಂಭೀರತೆಯನ್ನು ಅರಿತು ಚಾಮರಾಜನಗರದ ಜಿಲ್ಲಾಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸಲು ನಿರ್ದೇಶನ ನೀಡಿದ್ದರು. ಈಗ ವರದಿ ಹೊರಬಿದ್ದಿದ್ದು, ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ.

ಕಳೆದ ವರ್ಷ ಜಿಲ್ಲೆಯ ಹನೂರು ತಾಲೂಕಿನಲ್ಲಿ ಎರಡು ಕೋವಿಡ್ ಕೇರ್ ಸೆಂಟರ್‌ ತೆರೆಯಲಾಗಿತ್ತು. ಈ ವೇಳೆ ಅಧಿಕಾರಿಗಳು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಕನ್ನಹಾಕಿದ್ದರು. ಕೋವಿಡ್ ಕೇರ್ ಸೆಂಟರ್‌ಗಳ ನಿರ್ವಹಣೆಗೆ 2.35 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 33.67 ಲಕ್ಷ ದುರುಪಯೋಗ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿಗಳು ತನಿಖೆಗೆ ಎಸಿ ನೇತೃತ್ವದ 5 ಅಧಿಕಾರಿಗಳ ತಂಡ ರಚಿಸಿದ್ದರು. ‌ಈ ಅಧಿಕಾರಿಗಳ ತಂಡವು ತನಿಖೆ ನಡೆಸಿ ಕೋವಿಡ್‌ ಕೇರ್ ಸೆಂಟರ್‌ಗಳಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದಿದೆ.

ಆ ಒಂದು ಎಡವಟ್ಟಿನಿಂದ ಸಿಕ್ಕಿಬಿದ್ದರು

ನಕಲಿ ಬಿಲ್‌ ಸೃಷ್ಟಿಸುವ ಭರದಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಲೇ ಉಪ ವಿಭಾಗಾಧಿಕಾರಿ ಬಲೆಗೆ ಬೀಳುವಂತೆ ಮಾಡಿದೆ. ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೆ ಏನು ಕೆಲಸ‌? ಎಂಬ ಮಾತಿದೆ. ಅದೇ ರೀತಿ ಕಂಪ್ಯೂಟರ್‌ ಸೆಂಟರ್‌ನಲ್ಲಿ ದಿನಸಿ ಖರೀದಿಸಿದ್ದಾಗಿ ಹಾಕಿಸಿದ್ದ ಬಿಲ್‌ನಿಂದಲೇ ಭ್ರಷ್ಟರು ಸಿಕ್ಕಿ ಹಾಕಿಕೊಂಡಿದ್ದಾರೆ.

ದಿನಸಿ ಹಾಗೂ ದಿನಬಳಕೆ ವಸ್ತು ಖರೀದಿಗೆ ಕಂಪ್ಯೂಟರ್ ಸೆಂಟರ್‌ನ ಬಿಲ್‌ ಬಳಕೆ, ಮಾರುಕಟ್ಟೆಗೆ ಬೆಲೆಗಿಂತ ಹೆಚ್ಚಿನ ದರ ನಿಗದಿ, ಯಲ್ಲಿನ ದರಕ್ಕಿಂತ ಇಲ್ಲಿ ಬೆಲೆ ಜಾಸ್ತಿ ಅಂತೆ. ಹೆಚ್ಚಿನ ಬೆಲೆಗೆ ಸಾಮಾಗ್ರಿ ಖರೀದಿ, ಹೋಟೆಲ್ ಮಾಲೀಕರಲ್ಲದವರಿಗೆ ಚೆಕ್ ಮೂಲಕ ಹಣ ಪಾವತಿ, ಟೆಂಡರ್ ಕರೆಯದೇ ನೇರವಾಗಿ ವಸ್ತುಗಳ ಖರೀದಿ ಸೇರಿದಂತೆ ಅಧಿಕಾರಿಗಳು ನಕಲಿ ಬಿಲ್ ಸೃಷ್ಟಿ ಮಾಡಿ ಲಕ್ಷಾಂತರ ರೂಪಾಯಿ ಹಣ ದೋಚಿದ್ದಾರೆ. ಆದರೆ ಕಳ್ಳ ಬಿಲ್ ಸೃಷ್ಟಿ ಮಾಡುವುದರಲ್ಲಿ ಅಧಿಕಾರಿಗಳು ಎಡವಿದ್ದಾರೆ.

ಕಂಪ್ಯೂಟರ್‌ ಸೆಂಟರ್‌ನಲ್ಲಿ ಕಸದ ಪೂರಕೆ ಖರೀದಿ

ಕಂಪ್ಯೂಟರ್ ಸೆಂಟರ್‌ನಲ್ಲಿ ದಿನಸಿ ಅಷ್ಟೇ ಅಲ್ಲದೇ ಸ್ಯಾನಿಟೈಸರ್, ಸೋಪ್, ಟೂತ್‌ಪೇಸ್ಟ್, ಟೂತ್‌ಬ್ರಷ್ ಜತೆಗೆ ಕಸದಪೊರಕೆ, ಬಕೆಟ್, ಜಗ್ಗು ಖರೀದಿ ಮಾಡಿದ್ದೇವೆ ಎಂದು ಅಧಿಕಾರಿಗಳು ಬಿಲ್ ಸೃಷ್ಟಿ ಮಾಡಿದ್ದಾರೆ. ಹೀಗಾಗಿ ಕೋವಿಡ್ ಕೇರ್ ಸೆಂಟರ್‌‌ಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕೊಳ್ಳೇಗಾಲ ಉಪವಿಭಾಗಾಧಿಕಾರಿ ೨೦೨೨ ಏಪ್ರಿಲ್‌ನಲ್ಲಿ ವರದಿ ಸಲ್ಲಿಸಿದ್ದಾರೆ.

ಈ ಬಗ್ಗೆ ಲೆಕ್ಕ ಪರಿಶೋಧನೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಲೆಕ್ಕಪರಿಶೋಧನಾ ಇಲಾಖೆಗೆ ನಿರ್ದೇಶನ ನೀಡಿ ಎರಡು ತಿಂಗಳಾಗಿದೆ‌. ಆದರೆ ಈ ಗಂಭೀರ ಪ್ರಕರಣದ ಬಗ್ಗೆ ಲೆಕ್ಕಪರಿಶೋಧನಾ ಇಲಾಖೆ ಇನ್ನೂ ವರದಿ ನೀಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ.

ಇದನ್ನೂ ಓದಿ | ‌Covid 19 | ಕೋವಿಡ್ ವಿಚಾರದಲ್ಲಿ ಹಣ ದುರುಪಯೋಗ ಆಗಿದ್ದರೆ ತನಿಖೆ ನಡೆಸಿ: ಸಿಎಂಗೆ ಡಿಕೆಶಿ ಸವಾಲು

Exit mobile version