Site icon Vistara News

Cow Slaughter : ಮನೆಮನೆಗೆ ತೆರಳಿ ಗೋಮಾಂಸ ಮಾರಾಟ ಮಾಡುತ್ತಿದ್ದ ಯುವಕನಿಗೆ ಬಜರಂಗದಳ ಧರ್ಮದೇಟು

#image_title

ಭದ್ರಾವತಿ: ನಗರದ ಕಂಚಿ ಬಾಗಿಲಿನಲ್ಲಿ ವ್ಯಕ್ತಿಯೊಬ್ಬ ದನದ ಮಾಂಸವನ್ನು (Cow Slaughter) ಮಾರಾಟ ಮಾಡಲು ಬೈಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಬಜರಂಗ ದಳದ ಯುವಕರು ಆತನಿಗೆ ಅಡ್ಡಗಟ್ಟಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಭದ್ರಾವತಿಯ ಅನ್ವರ್ ಕಾಲೋನಿಯ ಮೂಮಿನ್ ಮೊಹಲ್ಲಾ ವಾಸಿ ಅಬ್ದುಲ್ ರೆಹಮಾನ್ ಬಿನ್ ಮೊಹಮ್ಮದ್ (30) ದನದ ಮಾಂಸದ ವ್ಯಾಪಾರ ಮಾಡುವ ಯುವಕ. ಈತ ಶುಕ್ರವಾರ ಬೆಳಗ್ಗೆ 10 ರಿಂದ 12 ಕೆಜಿಯಷ್ಟು ದನದ ಮಾಂಸದ ಪ್ಯಾಕೆಟ್‌ಗಳನ್ನು ಮಾಡಿಕೊಂಡು ಮನೆ ಮನೆಗೆ ಕೊಡಲು ತನ್ನ ಬೈಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಬಜರಂಗಳದ ಕಾರ್ಯಕರ್ತರು ತಡೆದಿದ್ದಾರೆ.

ಸುರಗಿತೋಪು ನಿವಾಸಿ ಕಿರಣ, ಕಡದಕಟ್ಟೆಯ ಮಂಜುನಾಥ ಮತ್ತು ಬೂತನಗುಡಿಯ ಆಕಾಶ ಎಂಬ ಮೂವರು ಅಬ್ದುಲ್ ರೆಹಮಾನ್ ನನ್ನು ಹಿಡಿಯಲು ಹೋದಾಗ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಕಿರಣ ಮತ್ತು ಇತರರು ಆತನಿಗೆ ಧರ್ಮದೇಟು ನೀಡಿದ್ದು, ಅಷ್ಟರಲ್ಲೇ ಸ್ಥಳಕ್ಕೆ ಬಂದ ಎಎಸ್ಐ ಜಗದೀಶ್ ಅವರಿಗೆ ಒಪ್ಪಿಸಿದ್ದಾರೆ.

ಹಲ್ಲೆಗೊಳಗಾದ ಅಬ್ದುಲ್ ರೆಹಮಾನ್‌ನನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ತೆರಳಿದ್ದಾನೆ. ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಭದ್ರಾವತಿ ಕಾಂಗ್ರೆಸ್ ಶಾಸಕರ ಮಗ ಗಣೇಶ್ ಭೇಟಿ ನೀಡಿದ್ದರು. ಬಜರಂಗದ ಕಾರ್ಯಕರ್ತನನ್ನು ತಕ್ಷಣ ಬಂಧಿಸಬೇಕೆಂದು ಎಎಸ್‌ಪಿ ಜಿತೇಂದ್ರ ಕುಮಾರ್ ದಯಾಮರಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Bengaluru Pothole: ಮುಂದುವರಿದ ಗುಂಡಿ ಗಂಡಾಂತರ; ಶಿವಾನಂದ ಸರ್ಕಲ್‌ನಲ್ಲಿ ಕುಸಿದ ರಸ್ತೆ, ಕಂದಕ ನಿರ್ಮಾಣ

ಖಾಜಿ ಮೊಹಲ್ಲಾದ ಮನ್ಸೂರ್ ಎಂಬವರ ನೇತೃತ್ವದಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಯುವಕರು ಹಲ್ಲೆ ಮಾಡಿದವರನ್ನು ದಸ್ತಗಿರಿ ಮಾಡದೆ ಇದ್ದಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಮಾಜ್ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

Exit mobile version