Site icon Vistara News

Cow slaughter: ಗೋಹತ್ಯೆ ನಿಷೇಧ ಹಿಂಪಡೆದರೆ ರಾಜ್ಯಾದ್ಯಂತ ಹೋರಾಟ; ಮುತಾಲಿಕ್‌ ಎಚ್ಚರಿಕೆ

Pramod mutalik

#image_title

ಬೆಂಗಳೂರು: ಗೋಹತ್ಯೆ ನಿಷೇಧ ಕಾಯಿದೆ (Anti cow slaughter bill), ಮತಾಂತರ ಕಾಯಿದೆ (Anti Cow slaughter) ಹಿಂಪಡೆದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಶ್ರೀರಾಮ ಸೇನೆ (Sree Rama sene) ಘೋಷಣೆ ಮಾಡಿದೆ. ಇದರ ಜತೆಗೆ ಯಾವ ಕಾರಣಕ್ಕೂ ಪಠ್ಯದಿಂದ ಸ್ವಾತಂತ್ರ್ಯ ಹೋರಾಟಗಾರರ ಪಾಠವನ್ನು ತೆಗೆದರೆ ಪ್ರತಿಭಟಿಸುವುದಾಗಿ ಹೇಳಿದೆ

ಈ ಮೂರೂ ಅಂಶಗಳನ್ನು ಉಲ್ಲೇಖಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸೋಮವಾರ ಶ್ರೀರಾಮ ಸೇನೆ ವತಿಯಿಂದ ರಾಜ್ಯಪಾಲರಿಗೆ ದೂರು ನೀಡಲಾಯಿತು. ಶ್ರೀ ರಾಮ ಸೇನೆ ರಾಜ್ಯ ಸಂಚಾಲಕ ಪ್ರಮೋದ್‌ ಮುತಾಲಿಕ್‌ (Pramod Mutalik) ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ರಾಜ್ಯ ಸರ್ಕಾರ ಹಿಂದು ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಅದಕ್ಕೆ ಅವಕಾಶ ನೀಡಬಾರದು. ಒಂದೊಮ್ಮೆ ಸರ್ಕಾರ ಕಾಯಿದೆಗಳನ್ನು ರದ್ದು ಮಾಡುವುದಾಗಿ ಪ್ರಕಟಿಸಿದರೂ ಅಂತಿಮವಾಗಿ ಅದಕ್ಕೆ ಸಮ್ಮತಿ ಕೊಡಬೇಕಾಗಿರುವುದು ರಾಜ್ಯಪಾಲರು. ಸರ್ಕಾರದ ಇಂಥ ಜನವಿರೋಧಿ ನೀತಿಯನ್ನು ತಡೆ ಹಿಡಿಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರಮೋದ್‌ ಮುತಾಲಿಕ್‌ ಅವರು ತಮ್ಮ ಬಳಗವನ್ನು ಕಟ್ಟಿಕೊಂಡು ರಾಜಭವನಕ್ಕೆ ತೆರಳಿದರಾದರೂ ಅವರಿಗೆ ರಾಜಭವನದ ಒಳಗೆ ಪ್ರವೇಶ ಸಿಗಲಿಲ್ಲ. ರಾಜ್ಯಪಾಲರ ಪರವಾಗಿ ರಾಜಭವನದ ಅಧಿಕಾರಿಗಳೇ ಮನವಿ ಪತ್ರ ಸ್ವೀಕರಿಸಿದರು.

ರಾಜ ಭವನದ ಮುಂದೆ ಮುತಾಲಿಕ್‌ ಮಾತು

ಮನವಿ ಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕಾಂಗ್ರೆಸ್‌ 1984ರಲ್ಲೇ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿತ್ತು. ಬಿಜೆಪಿ ಅದರಲ್ಲಿ ಕೆಲವು ಬದಲಾವಣೆ ಮಾಡಿ ಜಾರಿ ತಂದಿತ್ತು ಅಷ್ಟೆ. ನೀವೇ ಕಾಯ್ದೆ ಮಾಡಿ, ಈಗ ವಿರೋಧ ಮಾಡ್ತಿರೋದು ಸರಿನಾ.? ರೈತರಿಗೆ ಅನ್ಯಾಯ ಮಾಡುವ ಕೆಲಸ ಮಾಡ್ತಾ ಇದ್ದೀರಿʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʻʻಸೋನಿಯಾ ಗಾಂಧಿ ಅವರನ್ನು ಓಲೈಸುವುದಕ್ಕೆ ಈ ರೀತಿ ಮಾಡ್ತಾ ಇದ್ದೀರಾ? ಮುಸ್ಲಿಮರನ್ನು ಓಲೈಕೆ ಮಾಡೋದೇ ಕಾಂಗ್ರೆಸ್ ಕಾಯಕವಾಗಿದೆ.‌ ಜನರು ನಿಜಾರ್ಥದಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಿಲ್ಲ. ಬಿಜೆಪಿ ಮಾಡಿದ ತಪ್ಪಿನಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆʼʼ ಎಂದು ಮುತಾಲಿಕ್‌ ಹೇಳಿದರು.

ʻʻಪಠ್ಯದಿಂದ ಸ್ವಾತಂತ್ರ್ಯ ಹೋರಾಟಗಾರರ ಪಾಠ ತೆಗೆದಿರುವುದು ಸರಿಯಲ್ಲʼʼ ಎಂದು ಹೇಳಿದ ಮುತಾಲಿಕ್‌, ಅಧಿವೇಶನದಲ್ಲಿ ಸರ್ಕಾರ ಯಾವ ನಿಲುವು ಕೈಗೊಳ್ಳೊತ್ತದೋ ಕಾದು ನೋಡೋಣ. ಒಂದು ವೇಳೆ ಗೋಹತ್ಯೆ ನಿಷೇಧ ಕಾಯಿದೆ ರದ್ದು ಮಾಡಿದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆʼʼ ಎಂದರು.

ʻʻಒಂದು ವೇಳೆ ಕಾಂಗ್ರೆಸ್‌ ಸರ್ಕಾರ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಹಿಂಪಡೆಯಲು ಒಪ್ಪಿಗೆ ಪಡೆದರೂ ಅಂತಿಮವಾಗಿ ಅಂಕಿತ ಹಾಕುವುದು ರಾಜ್ಯಪಾಲರು. ಹೀಗಾಗಿ ರಾಜ್ಯಪಾಲರಿಗೆ ಮನವಿ ಮಾಡಲು ಬಂದಿದ್ದೇನೆʼʼ ಎಂದು ಹೇಳಿದರು ಮುತಾಲಿಕ್‌.

ಪಠ್ಯ ಪರಿಷ್ಕರಣೆಯನ್ನೂ ಆಕ್ಷೇಪಿಸಿದ ಮುತಾಲಿಕ್‌, ʻʻದೇಶದ್ರೋಹಿಗಳ, ದೇಶದ ಮೇಲೆ ದಾಳಿ ಮಾಡಿದವರ ಪಠ್ಯವನ್ನು ಮಕ್ಕಳು ಓದಬೇಕಾ? ಸಾರ್ವರ್ಕರ್ ಒಬ್ಬ ದೇಶ ಪ್ರೇಮಿ, ಕ್ರಾಂತಿಕಾರಿ. ಕಾಂಗ್ರೆಸ್‌ಗೆ ಚರಕ ತಿರುಗಿಸೋ ಗಾಂಧೀಜಿ ಬೇಕೇ ಹೊರತು ಕ್ರಾಂತಿಕಾರಿಗಳು ಬೇಡʼʼ ಎಂದರು. ಪಠ್ಯ ಪುಸ್ತಕಕ್ಕೆ ಸಲಹೆ ನೀಡಲು ಪಿಎಚ್‌ಡಿನೇ ಮಾಡಬೇಕು ಅಂತ ಏನೂ ಇಲ್ಲ ಎಂದು ಅವರು ನುಡಿದರು.

ಬರಗೂರು ರಾಮಚಂದ್ರಪ್ಪ ಅವರು ನಾಸ್ತಿಕ ವಿಚಾರಧಾರೆ ಇರುವವರು ಎಂದ ಬರಗೂರು, ಪಾಠಗಳ ಮೂಲಕ ಕಮ್ಯೂನಿಸ್ಟ್, ಇಸ್ಲಾಮಿನ ವಿಚಾರಧಾರೆಗಳನ್ನು ಪ್ರಚಾರ ಮಾಡೋದು ಬೇಡ ಎಂದರು.

ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಿಡಿಗೇಡಿ ಕೃತ್ಯಗಳಿಗೆ ಬಿಜೆಪಿಯೇ ಹೊಣೆ ಎಂದು ಹೇಳಿದರು ಪ್ರಮೋದ್‌ ಮುತಾಲಿಕ್‌. ಬಿಜೆಪಿ ಅಧಿಕಾರದಲ್ಲಿದ್ದರೂ ಕಿಡಿಗೇಡಿಗಳು, ಪಿಎಫ್ಐ ಅನ್ನ ಯಾಕೆ ಕಂಟ್ರೋಲ್ ಮಾಡ್ಲಿಲ್ಲ.?
ಜಿಲ್ಲೆಯವರೇ ಹೋಂ ಮಿನಿಸ್ಟರ್ ಇದ್ರಲ್ವಾ ಯಾಕೆ ಕಂಟ್ರೋಲ್ ಮಾಡ್ಲಿಲ್ಲ.? ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿನೇ ನೇರ ಹೊಣೆ. ಕಾಂಗ್ರೆಸ್ ಬಂದ ಮೇಲೆ ಇದು ಇನ್ನಷ್ಟು ಹೆಚ್ಚಳವಾಗುತ್ತದೆ ಎಂದು ಪ್ರಮೋದ್‌ ಮುತಾಲಿಕ್‌ ನುಡಿದರು.

ಇದನ್ನೂ ಓದಿ: Cow slaughter: ಎಮ್ಮೆ, ಕೋಣವನ್ನು ಕಡಿಯುವುದಾದರೆ ಹಸುಗಳನ್ನು ಏಕೆ ಕಡಿಯಬಾರದು?: ಸಚಿವ ಕೆ. ವೆಂಕಟೇಶ್

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುನಿಲ್‌ ಕುಮಾರ್‌ ವಿರುದ್ಧವೇ ಕಣಕ್ಕೆ ಇಳಿದಿದ್ದ ಪ್ರಮೋದ್‌ ಮುತಾಲಿಕ್‌ ಅವರು, ʻʻಚುನಾವಣೆಯಲ್ಲಿ ಸೋತ ನಂತರವೂ ನಾನು ಆಕ್ಟಿವ್ ಆಗಿಯೇ ಇದ್ದೇನೆ/ ನನ್ನ ಹೋರಾಟ ನಿರಂತರವಾಗಿ ನಡೀತಾ ಇದೆ. ಕೊನೆ ಉಸಿರು ಇರೋವರೆಗೂ ಹಿಂದುತ್ವದ ಪರವಾದ ಹೋರಾಟ ಇದ್ದೇ ಇರುತ್ತೆʼʼ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲೂ ಮನವಿ

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ಸು ಪಡೆಯದಂತೆ ಶಂಕರದೇವರ ಮಠದ ಚಂದ್ರ ಶೇಖರ ಸ್ವಾಮೀಜಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್‌ ರಮೇಶ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ವಿ.ಎಚ್.ಪಿ. ಹಾಗೂ ಬಜರಂಗದಳ ಮುಖಂಡರು ಸ್ವಾಮೀಜಿಗೆ ಸಾಥ್‌ ನೀಡಿದರು. ಕಾಯಿದೆ ಹಿಂಪಡೆದರೆ ಮುಂದಿನ ದಿನದಲ್ಲಿ ತೀವ್ರ ಹೋರಾಟದ ಎಚ್ಚರಿಕೆ ನೀಡಲಾಯಿತು.

Exit mobile version