Site icon Vistara News

Cow slaughter : ಜಾನುವಾರು ಸಾಗಾಟಗಾರನ ಸಾವು; ಪುನೀತ್‌ ಕೆರೆಹಳ್ಳಿ ಸೇರಿ ಐವರು ರಾಜಸ್ಥಾನದಲ್ಲಿ ಸೆರೆ

Puneeth Kerehalli and Team sent to police custody for 7 days

Puneeth Kerehalli and Team sent to police custody for 7 days

ರಾಮನಗರ: ಮಾರ್ಚ್‌ 31ರಂದು‌ ರಾತ್ರಿ 11.30ರ ಹೊತ್ತಿಗೆ ಸಾತನೂರು ಪೊಲೀಸ್ ಠಾಣೆ ಎದುರು ನಡೆದ ಜಾನುವಾರು (Cow slaughter) ಸಾಗಾಟಗಾರ ಇದ್ರಿಸ್‌ ಪಾಷಾನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪುನೀತ್‌ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ.

ಸಾತನೂರು ಪೊಲೀಸರು ಪುನೀತ್‌ ಕೆರೆಹಳ್ಳಿ ಸೇರಿದಂತೆ ಐವರನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಅಂದು ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಪುನೀತ್‌ ಕೆರೆಹಳ್ಳಿ ಮಧ್ಯದಲ್ಲಿ ಫೇಸ್‌ ಬುಕ್‌ ಲೈವ್‌ ಮೂಲಕ ಪ್ರತ್ಯಕ್ಷನಾಗಿದ್ದ. ಇದೀಗ ಆತನ ಚಲನವಲನವನ್ನು ಬೆನ್ನಟ್ಟಿದ ಪೊಲೀಸರು ಆತನನ್ನು ರಾಜಸ್ಥಾನದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಷ್ಟ್ರೀಯ ರಕ್ಷಣೆ ಪಡೆಯ ಪುನೀತ್ ಕೆರೆಹಳ್ಳಿ, ರಾಮನಗರದ ಗೋಪಿ, ತೀರ್ಥಹಳ್ಳಿಯ ಪವನ್ ಕುಮಾರ್, ಬಸವನಗುಡಿಯ ಪಿಲ್ಲಿಂಗ ಅಂಬಿಗಾರ್ ಮತ್ತು ರಾಯಚೂರಿನ ಸುರೇಶ್ ಕುಮಾರ್ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದೇವೆ. ಅವರು ಪರಾರಿಯಾಗಲು ಸಹಕರಿಸಿದವರು ಕಂಡು ಬಂದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ 31ರಂದು ರಾತ್ರಿ 11.30ರ ಸುಮಾರಿಗೆ ಮಂಡ್ಯದಿಂದ ಕೇರಳ ಮತ್ತು ತಮಿಳುನಾಡಿಗೆ ಸಾಗಾಟ ಮಾಡುತ್ತಿದ್ದ ಸುಮಾರು 16 ಜಾನುವಾರುಗಳನ್ನು ಗೋರಕ್ಷಕರು ಸಾತನೂರಿನಲ್ಲಿ ವಶಕ್ಕೆ ಪಡೆದಿದ್ದರು. ವಾಹನವನ್ನು ತಡೆದಾಗ ಅದರಲ್ಲಿದ್ದ ಮೂವರ ಪೈಕಿ ಇಬ್ಬರು ಓಡಿ ಪರಾರಿಯಾಗಿದ್ದರು. ಮತ್ತೊಬ್ಬ ಕೂಡಲೇ ಪೊಲೀಸ್‌ ಠಾಣೆ ಸೇರಿಕೊಂಡಿದ್ದ. ಓಡಿಹೋದವರಲ್ಲಿ ಒಬ್ಬನಾದ ಇದ್ರಿಸ್‌ ಪಾಷಾನ ಶವ ಮರುದಿನ ಮುಂಜಾನೆ ಘಟನಾ ಸ್ಥಳದ ಸಮೀಪವೇ ಪತ್ತೆಯಾಗಿತ್ತು. ವಾಹನವನ್ನು ತಡೆದು ಜಾನುವಾರುಗಳನ್ನು ಪೊಲೀಸರಿಗೆ ಒಪ್ಪಿಸಿದ ಪುನೀತ್‌ ಕೆರೆಹಳ್ಳಿ ತಂಡ ಇದ್ರಿಸ್‌ ಪಾಷಾನನ್ನು ಕೊಲೆ ಮಾಡಿದೆ ಎಂದು ಆರೋಪಿಸಲಾಗಿತ್ತು.

ಇದ್ರಿಸ್‌ ಪಾಷಾ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿ ಸಾತನೂರು ಪೊಲೀಸರು ಮೂರು ಎಫ್‌ಐಆರ್‌ ದಾಖಲಿಸಿದ್ದರು. ಅಕ್ರಮ ಹಸು ಸಾಗಣೆ ಬಗ್ಗೆ ಪುನೀತ್ ಕೆರೆಹಳ್ಳಿ ಕೊಟ್ಟ ದೂರಿನ ಮೇಲೆ ಒಂದು ಎಫ್ಐಆರ್ ದಾಖಲಾಗಿದ್ದರೆ, ಕ್ಯಾಂಟರ್ ಡ್ರೈವರ್ ಹಾಗೂ ಮೃತ ವ್ಯಕ್ತಿ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಎರಡು ಎಫ್ಐಆರ್ ದಾಖಲಾಗಿದ್ದವು.

ಕಳೆದ ನಾಲ್ಕು ದಿನಗಳಿಂದ ಸಾತನೂರು ಪೊಲೀಸರ ನಾಲ್ಕು ತಂಡಗಳು ಪುನೀತ್‌ ಕೆರೆಹಳ್ಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಎಸ್‌ಪಿ ಕಾರ್ತಿಕ್‌ ರೆಡ್ಡಿ ತಿಳಿಸಿದ್ದರು.

ಈ ನಡುವೆ, ನಾಪತ್ತೆಯಾಗಿ ನಾಲ್ಕು ದಿನಗಳ ಬಳಿಕ ಮಾರ್ಚ್‌ 4ರಂದು ಫೇಸ್‌ಬುಕ್‌ ಲೈವ್‌ನಲ್ಲಿ ಕಾಣಿಸಿಕೊಂಡ ಪುನೀತ್‌ ಕೆರೆಹಳ್ಳಿ ಅನುಮಾನಾಸ್ಪದ ಸಾವಿಗೂ ತನಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದ.ʻʻ ನಾನು ಅಂದು ಸಾತನೂರು ಪೊಲೀಸ್‌ ಠಾಣೆಯ ಎದುರೇ ಕಾರ್ಯಾಚರಣೆ ಮಾಡಿದ್ದೆ. ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದೇನೆ. ಘಟನೆ ನಡೆದ ಬಳಿಕ ಕೂಡಲೇ ಠಾಣೆಗೆ ಹೋಗಿದ್ದೇನೆ. ಹೀಗಾಗಿ ಇದ್ರಿಸ್‌ ಪಾಷಾನ ಕೊಲೆ ಮಾಡಿರುವ ಆಪಾದನೆ ಸುಳ್ಳುʼʼ ಎಂದಿದ್ದ.

ಇಷ್ಟೆಲ್ಲ ಹೇಳಿದ ಪುನೀತ್‌ ಕೆರೆಹಳ್ಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್‌ ಮಾಡಿರುವುದು ಖಚಿತವಾಗಿದೆ. ಆದರೆ, ಪೊಲೀಸರು ಮಾತ್ರ ಆತನನ್ನು ಬೆನ್ನಟ್ಟಿ ಹಿಡಿದು ರಾಜಸ್ಥಾನದಿಂದ ಮರಳಿ ಕರೆತರುತ್ತಿದ್ದಾರೆ. ಆತನ ಪೂರ್ಣ ವಿಚಾರಣೆಯ ಬಳಿಕ ಅಂದು ನಿಜವಾಗಿ ನಡೆದಿದ್ದೇನು? ಇದ್ರಿಸ್‌ ಪಾಷಾನ ಸಾವಿಗೆ ಏನು ಕಾರಣ ಎನ್ನುವುದು ಬಯಲಾಗಲಿದೆ. ಜತೆಗೆ ಪೋಸ್ಟ್‌ ಮಾರ್ಟಂ ವರದಿ ಕೂಡಾ ಬರಲಿದ್ದು ಪೂರಕ ಸಾಕ್ಷ್ಯ ಒದಗಿಸಲಿದೆ.

ಇದನ್ನೂ ಓದಿ : Cow slaughter : ಗೋಸಾಗಾಟಗಾರ ಹತ್ಯೆ ಪ್ರಕರಣದ ಆರೋಪಿ ಪುನೀತ್‌ ಕೆರೆಹಳ್ಳಿ ವಿಡಿಯೊ ಮೂಲಕ ಪ್ರತ್ಯಕ್ಷ, ಪೊಲೀಸರಿಂದ ಹುಡುಕಾಟ

Exit mobile version