ರಾಮನಗರ: ಮಾರ್ಚ್ 31ರಂದು ರಾತ್ರಿ ಸಾತನೂರು ಪೊಲೀಸ್ ಠಾಣೆಯ ಎದುರು ಜಾನುವಾರು ಸಾಗಾಟದ (Cow slaughter) ವಾಹನವನ್ನು ತಡೆದ ವೇಳೆ ಸಂಭವಿಸಿದ ಇದ್ರಿಸ್ ಪಾಷಾ ನಿಗೂಢ ಸಾವಿನ ಪ್ರಕರಣದ ಪ್ರಧಾನ ಆರೋಪಿ, ಹಿಂದು ಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಆತ ಈ ನಡುವೆ ಫೇಸ್ ಬುಕ್ ಲೈವ್‌ನಲ್ಲಿ ಬಂದು ತಾನು ತಪ್ಪಿತಸ್ಥನಲ್ಲ ಎಂದು ಹೇಳಿಕೊಂಡಿದ್ದಾನೆ. ಇದೊಂದು ರಾಜಕೀಯ ಪ್ರೇರಿತ ಕುತಂತ್ರ ಎಂದಿದ್ದಾನೆ.
ಮಾರ್ಚ್ 31ರಂದು ರಾತ್ರಿ 11.30ರ ಸುಮಾರಿಗೆ ಮಂಡ್ಯದಿಂದ ಕೇರಳ ಮತ್ತು ತಮಿಳುನಾಡಿಗೆ ಸಾಗಾಟ ಮಾಡುತ್ತಿದ್ದ ಸುಮಾರು 16 ಜಾನುವಾರುಗಳನ್ನು ಗೋರಕ್ಷಕರು ಸಾತನೂರಿನಲ್ಲಿ ವಶಕ್ಕೆ ಪಡೆದಿದ್ದರು. ವಾಹನವನ್ನು ತಡೆದಾಗ ಅದರಲ್ಲಿದ್ದ ಮೂವರ ಪೈಕಿ ಇಬ್ಬರು ಓಡಿ ಪರಾರಿಯಾಗಿದ್ದರು. ಮತ್ತೊಬ್ಬ ಕೂಡಲೇ ಪೊಲೀಸ್ ಠಾಣೆ ಸೇರಿಕೊಂಡಿದ್ದ. ಓಡಿಹೋದವರಲ್ಲಿ ಒಬ್ಬನಾದ ಇದ್ರಿಸ್ ಪಾಷಾನ ಶವ ಮರುದಿನ ಮುಂಜಾನೆ ಘಟನಾ ಸ್ಥಳದ ಸಮೀಪವೇ ಪತ್ತೆಯಾಗಿತ್ತು. ಹೀಗಾಗಿ ಇದು ವಾಹನವನ್ನು ತಡೆದು ಜಾನುವಾರುಗಳನ್ನು ಪೊಲೀಸರಿಗೆ ಒಪ್ಪಿಸಿದ ಪುನೀತ್ ಕೆರೆಹಳ್ಳಿ ತಂಡದ್ದೇ ಕೃತ್ಯ ಎಂದು ಹೇಳಲಾಗಿತ್ತು. ಈ ನಡುವೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಇದೆಲ್ಲವೂ ನೈತಿಕ ಪೊಲೀಸ್‌ಗಿರಿ ಎಂದು ಹೇಳಿದ್ದರು. ಆರೋಪ ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದಾರೆ.
ಈ ನಡುವೆ, ಫೇಸ್ ಬುಕ್ ಲೈವ್‌ನಲ್ಲಿ ಕಾಣಿಸಿಕೊಂಡಿರುವ ಪುನೀತ್ ಕೆರೆಹಳ್ಳಿ ನಾನು ಯಾವುದೇ ತಪ್ಪು ಮಾಡಿಲ್ಲ. ಇದ್ರಿಸ್ ಪಾಷಾನ ಸಾವಿಗೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ.
ʻಮೊಬೈಲ್‌ನಲ್ಲಿ ಚಾರ್ಜ್ ಇರಲಿಲ್ಲ. ಚಾರ್ಜ್ ಮಾಡಿ ನೋಡಿದಾಗ ನನ್ನ ಮೇಲೆ ಆಪಾದನೆಗಳು ಬಂದಿರುವುದು, ಪೊಲೀಸರು ಹುಡುಕುತ್ತಿದ್ದಾರೆ ಎಂಬೆಲ್ಲ ಹೇಳಿಕೆಗಳು ಕಂಡುಬಂತು. ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರು ಆಡಿರುವ ಮಾತುಗಳನ್ನೂ ಕೇಳಿಸಿಕೊಂಡಿದ್ದೇನೆ. ನಾನು ಅಂದು ಸಾತನೂರು ಪೊಲೀಸ್ ಠಾಣೆಯ ಎದುರೇ ಕಾರ್ಯಾಚರಣೆ ಮಾಡಿದ್ದೆ. ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದೇನೆ. ಘಟನೆ ನಡೆದ ಬಳಿಕ ಕೂಡಲೇ ಠಾಣೆಗೆ ಹೋಗಿದ್ದೇನೆ. ಹೀಗಾಗಿ ಇದ್ರಿಸ್ ಪಾಷಾನ ಕೊಲೆ ಮಾಡಿರುವ ಆಪಾದನೆ ಸುಳ್ಳುʼʼ ಎಂದು ಹೇಳಿದ್ದಾರೆ ಪುನೀತ್ ಕೆರೆಹಳ್ಳಿ.
ʻನಾನು ಗೋಸಾಗಾಟಗಾರರಿಂದ ಎರಡು ಲಕ್ಷ ರೂ. ಕೇಳಿದ್ದೇನೆ ಎಂದು ಆಪಾದಿಸಿದ್ದಾರೆ. ನಾನು ಗೋರಕ್ಷಣೆಯ ಕೆಲಸದಿಂದ ಹಣ ಕಳೆದುಕೊಂಡಿದ್ದೇನೆಯೇ ಹೊರತು ಹಣ ಮಾಡಿಲ್ಲ. ಇದು ಗೋಸೇವೆ ಎಂದು ಮಾಡುತ್ತಿದ್ದೇನೆ. ಮುಂದಕ್ಕೂ ಮಾಡುತ್ತೇನೆʼʼ ಎಂದು ಹೇಳಿದರು. ʻʻನನಗೆ ಯಾವುದೇ ಭಯವಿಲ್ಲ. ಪೊಲೀಸರು ವಿಚಾರಣೆಗೆ ಕರೆದರೆ ಹೋಗುತ್ತೇನೆʼʼ ಎಂದಿದ್ದಾರೆ.
ʻಇಡೀ ಪ್ರಕರಣದಲ್ಲಿ ನಮ್ಮವು ಯಾವುದೇ ರೀತಿಯ ತಪ್ಪು ಇಲ್ಲ. ಸಂಪೂರ್ಣ ತನಿಖೆ ಎದುರಿಸುತ್ತೇನೆ. ಅಂದು ನಡೆದ ಘಟನೆಯನ್ನು ಸಂಪೂರ್ಣ ಲೈವ್ ಮಾಡಿದ್ದೇನೆ. ಆದರೆ ಪೊಲೀಸರು ನನ್ನ ಲೈವ್ ವೀಡಿಯೋ ಡಿಲೀಟ್ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಪ್ರಕರಣವನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಾ ರೀತಿಯ ತನಿಖೆಗೂ ನಾನು ಸಿದ್ಧʼʼ ಎಂದು ಪುನೀತ್ ಕೆರೆಹಳ್ಳಿ ಹೇಳಿದ್ದಾನೆ.
ಮೂರು ಎಫ್‌ಐಆರ್ ದಾಖಲು
ಸಾತನೂರಿನಲ್ಲಿ ಜಾನುವಾರು ಸಾಗಾಟ ತಡೆ ವೇಳೆ ಸಂಭವಿಸಿದ ಇದ್ರಿಸ್ ಪಾಷಾ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿ ಮೂರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಮಾ.31ರಂದು ರಾತ್ರಿ 11:30ರ ಹೊತ್ತಿಗೆ ಪ್ರಕರಣ ನಡೆದಿದೆ. ಈ ಪ್ರಕರಣ ಕುರಿತು ಸಾತನೂರು ಠಾಣೆಯಲ್ಲಿ ಮೂರು ಎಫ್ಐಆರ್ ದಾಖಲಾಗಿದೆ. ಅಕ್ರಮ ಹಸು ಸಾಗಣೆ ಬಗ್ಗೆ ಪುನೀತ್ ಕೆರೆಹಳ್ಳಿ ಕೊಟ್ಟ ದೂರಿನ ಮೇಲೆ ಒಂದು ಎಫ್ಐಆರ್ ದಾಖಲಾಗಿದೆ. ಕ್ಯಾಂಟರ್ ಡ್ರೈವರ್ ಹಾಗೂ ಮೃತವ್ಯಕ್ತಿ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಎರಡು ಎಫ್ಐಆರ್ ದಾಖಲಾಗಿದೆ. ಮೂರು ಕೇಸ್ ಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ʻʻಸದ್ಯ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದಾನೆ. ಈಗಾಗಲೇ ನಾಲ್ಕು ತಂಡಗಳನ್ನ ರಚನೆ ಮಾಡಿ ಆರೋಪಿಗೆ ಹುಡುಕಾಟ ನಡೆಸುತ್ತಿದ್ದೇವೆ. ಅಲ್ಲದೇ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆʼʼ ಎಂದು ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ : Cow slaughter : ಗೋರಕ್ಷಕರ ಹೆಸರಲ್ಲಿ ಮುಸ್ಲಿಂ ವ್ಯಕ್ತಿಯ ಕೊಲೆ; ಪುನೀತ್ ಕೆರೆಹಳ್ಳಿ ಟೀಮ್ ಕೃತ್ಯ; ಮಂಡ್ಯದಲ್ಲಿ ಭಾರಿ ಪ್ರತಿಭಟನೆ