ಹಾವೇರಿ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ವಿಚಿತ್ರವಾದ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ. ಈ ಕಾಯಿಲೆಯಿಂದ ಜಾನುವಾರುಗಳು ಮಲಗಿದ್ದಲ್ಲಿಂದ ಮೇಲೆ ಏಳಲು ಆಗದ ಸ್ಥಿತಿಯಲ್ಲಿವೆ. ಇವುಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆಯಿಂದಾಗಿ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ರೈತರಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಎತ್ತುಗಳ ಸಾವು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದೆರಡು ತಿಂಗಳ ಹಿಂದಷ್ಟೆ ಹಾವೇರಿ ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿತ್ತು. ಹಾವೇರಿ ತಾಲೂಕಿನ ಯತ್ತಿನಹಳ್ಳಿ, ಅಗಡಿ, ವೀರಾಪುರ ಗ್ರಾಮದಲ್ಲಿ ಜಾನುವಾರುಗಳಿಗೆ ಬಿಟ್ಟುಬಿಡದಂತೆ ಕಾಡಿದ್ದ ಈ ಕಾಯಿಲೆ ಈಗ ಜಿಲ್ಲೆಯಾದ್ಯಂತ ವ್ಯಾಪಿಸಿದೆ. ಜಿಲ್ಲೆಯ 120 ಗ್ರಾಮದ 1700ಕ್ಕೂ ಹೆಚ್ಚು ಜಾನುವಾರುಗಳು ಚರ್ಮ ಗಂಟು ಕಾಯಿಲೆಯಿಂದ ನರಳುತ್ತಿವೆ.
ಕಾಯಿಲೆಯಿಂದಾಗಿ ನೆಲ ಬಿಟ್ಟು ಮೇಲೆಳಲಾಗದೆ ಮಲಗಿದಲ್ಲಿಯೇ ನರಳಾಡುತ್ತಿದ್ದ ಜಾನುವಾರುಗಳು ಮೃತಪಡುತ್ತಿವೆ. ಜಾನುವಾರುಗಳ ಸಾವಿನ ಪ್ರಮಾಣ ಹೆಚ್ಚಾಗಿದ್ದು ಪ್ರತಿನಿತ್ಯ ಒಂದರಿಂದ ಎರಡು ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲವೆಂದು ಆಕ್ರೋಶಗೊಂಡ ರೈತರು ಗುರುವಾರ ಹಾವೇರಿಯ ತಾಲೂಕಿನ ಕನವಳ್ಳಿ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಸತ್ತಿರುವ ಎತ್ತನ್ನು ತಳ್ಳುಗಾಡಿಯಲ್ಲಿ ಹಾಕಿಕೊಂಡು ಪಂಚಾಯತ್ ಕಚೇರಿ ಎದುರು ತಂದಿಟ್ಟು ಪ್ರತಿಭಟಿಸಿದರು.
ಒಂದು ಕಡೆ ಮಳೆಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ಜಿಲ್ಲೆಯ ರೈತರು, ಈಗ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎತ್ತುಗಳನ್ನು ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸೊಳ್ಳೆ, ನೊಣಗಳ ಮೂಲಕ ಕಾಯಿಲೆ ಹಬ್ಬುತ್ತಿದ್ದು, ಇದುವರೆಗೂ ಈ ಕಾಯಿಲೆಗೆ ಸೂಕ್ತವಾದ ಚಿಕಿತ್ಸೆ ಇಲ್ಲವಾಗಿದೆ. ಮಳೆಗಾಲದಲ್ಲಿ ವೈರಸ್‌ನಿಂದಾಗಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ನೊಣ, ಸೊಳ್ಳೆಗಳು ಬಾರದಂತೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಕಾಯಿಲೆ ಕಾಣಿಸಿಕೊಂಡ ಜಾನುವಾರುಗಳಿಗೆ ಕಚ್ಚಿದ ಸೊಳ್ಳೆ, ನೊಣ ಮತ್ತೊಂದು ಜಾನುವಾರಿಗೆ ಕಚ್ಚಿದಾಗ ಇದು ಹರಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ | ಅನಧಿಕೃತವಾಗಿ ಜಾನುವಾರುಗಳ ವಧೆ ಆಗದಂತೆ ಕ್ರಮ ವಹಿಸಲು ಡಿಸಿ ಸೂಚನೆ