Site icon Vistara News

CPI Suspended: ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ; ಸಿಪಿಐ ಸಸ್ಪೆಂಡ್

CPI Madhukar

ಕೋಲಾರ: ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಪಿ.ಜೆ.ಮಧುಕರ್ ಎಂಬುವವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಪೊಲೀಸ್‌ ಅಧಿಕಾರಿಯನ್ನು ಅಮಾನತು (CPI Suspended) ಮಾಡಿ ಕೇಂದ್ರ ವಲಯ ಪೊಲೀಸ್ ಮಹಾ ನಿರ್ದೇಶಕ ಡಾ.ಬಿ.ಆರ್.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ಜೂ.27 ರಂದು ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋಡಗುರ್ಕಿಯಲ್ಲಿ ಮರ್ಯಾದಾ ಹತ್ಯೆ (honour killing case) ನಡೆದಿತ್ತು. ಪರಿಶಿಷ್ಟ ಜನಾಂಗದ ಯುವಕ ಗಂಗರಾಜು ಎಂಬಾತನನ್ನು ಪ್ರೀತಿಸಿದ ಹಿನ್ನೆಲೆಯಲ್ಲಿ ಬೋಡಗುರ್ಕಿ ಗ್ರಾಮದ ಕೃಷ್ಣಮೂರ್ತಿ ಎಂಬಾತ, ಮಗಳು ಕೀರ್ತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಕಾಮಸಮುದ್ರ ಸಿಪಿಐ ಮಧುಕರ್ ಮೃತದೇಹವನ್ನು ಕೆಜಿಎಫ್ ಶವಾಗಾರಕ್ಕೆ ಸ್ಥಳಾಂತರ ಮಾಡಿ, ಮರ್ಯಾದಾ ಹತ್ಯೆಯನ್ನು ಸೂಕ್ತ ತನಿಖೆ ಮಾಡದೆ ಅಸಹಜ ಸಾವು ಎಂದು ಹೇಳಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಮಹಿಳಾ ಅಧಿಕಾರಿಯೇ ಪ್ರಕರಣದ ತನಿಖೆ ನಡೆಸಬೇಕು, ನಾನು ತನಿಖೆ ನಡೆಸಲು ಸಾಧ್ಯವಿಲ್ಲ. ಇದೊಂದು ಅಸಹಜ ಸಾವು ಎಂದು ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರ ಬಳಿ ಸಿಪಿಐ ಹೇಳಿದ್ದರು ಎನ್ನಲಾಗಿದೆ. ಇನ್ನು ತನಿಖೆ ನಡೆಸಲು ಮೀನಮೇಷ ಎಣಿಸಿ ಸಾರ್ವಜನಿಕರ ಎದುರು ಮುಜುಗರಕ್ಕೆ ಈಡಾದ ಹಿನ್ನೆಲೆಯಲ್ಲಿ ಸಿಪಿಐ ಮಧುಕರ್ ಅಮಾನತುಗೊಂಡಿದ್ದಾರೆ.

ಇದನ್ನೂ ಓದಿ | Attempt Murder Case : ಹೆತ್ತವರಿಂದ ದೂರವಿಟ್ಟು ಡಿವೋರ್ಸ್‌ ಕೊಡದ ಪತ್ನಿಯ ಆ್ಯಕ್ಸಿಡೆಂಟ್‌!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಸರಣಿ ಅಪಘಾತ; ಇಬ್ಬರಿಗೆ ಗಂಭೀರ ಗಾಯ

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಸರಣಿ ಅಪಘಾತ ನಡೆದಿದೆ. ಬಸ್ ಕಾರಿಗೆ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಾಜಹಂಸ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂಬದಿಯ ಮೂರು ಕಾರು ಜಖಂಗೊಂಡಿವೆ. ಕಾರಿನಲ್ಲಿದ್ದ ಮೂರ್ನಾಲ್ಕು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ ಮದ್ದೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಕೆಲವು ಸಮಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಸಂಚಾರ ಪೊಲೀಸರು ಅಪಘಾತವಾದ ವಾಹನಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ | Self Harming : ಪತ್ನಿಯ ಪರಸಂಗಕ್ಕೆ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ

ಬೈಕ್‌ ನಿಯಂತ್ರಣ ತಪ್ಪಿ ಬಿದ್ದು ಯುವತಿಗೆ ಗಾಯ

ಮೈಸೂರು: ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುವಾಗ ರಸ್ತೆಯಲ್ಲಿ ಏಕಾಏಕಿ ಬ್ಯಾರಿಕೇಡ್‌ ಎಳೆದಿದ್ದರಿಂದ ಬೈಕ್‌ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು, ಯುವತಿ ಗಾಯಗೊಂಡಿರುವ ಘಟನೆ ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರನ್ನು ಕಂಡು ಬೈಕ್‌ನಿಂದ ಯುವತಿ ಆಯತಪ್ಪಿ ಬಿದ್ದಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Exit mobile version