Site icon Vistara News

Crime News | ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ, ಯುವತಿ ತಂದೆಗೆ ಚಾಕು ಇರಿತ

crime ಉಪ್ಪಿನಂಗಡಿ ದಾಂಧಲೆ

ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಯುವಕನೊಬ್ಬ ತಂಡ ಕಟ್ಟಿಕೊಂಡು ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಅಯೋಧ್ಯಾ ನಗರದ ಮನೆಯೊಂದಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ಯುವತಿಯ ಮನೆಯವರಿಗೆ ಹಲ್ಲೆ ನಡೆಸಿದ್ದಾನೆ. ಈಗ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಅಪರಾಧ ಕೃತ್ಯದಲ್ಲಿ (Crime News) ಭಾಗಿಯಾಗಿದ್ದ ನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಮುಹಮ್ಮದ್ ನಿಝಾಮುದ್ದೀನ್ (25), ತೌಫೀಕ್ (20) ಅಬ್ದುಲ್ ಸಲೀಂ (23) ಹಾಗೂ ಮಹಮ್ಮದ್ ಶಫೀಕ್ (22) ಬಂಧಿತ ಆರೋಪಿಗಳಾಗಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ನಾಸಿರ್ ಮತ್ತು ಸಮೀರ್ ಎಂಬುವವರು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಅಯೋಧ್ಯಾ ನಗರ ನಿವಾಸಿ ತಾಹಿರಾ (38) ಎಂಬುವವರು ನೀಡಿರುವ ದೂರಿನಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ | Border Dispute | ಮಹಾರಾಷ್ಟ್ರ ಕನ್ನಡಿಗರಿಗೆ ಕರವೇ ಬೆಂಬಲ; ತಾಯಿ ಭುವನೇಶ್ವರಿ ಫೋಟೊ ನೀಡಿ ರಾಜ್ಯಕ್ಕೆ ಆಹ್ವಾನ

ಕಳೆದ ಶುಕ್ರವಾರ ರಾತ್ರಿ 11:15ರ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿಗಳಾದ ಮುಹಮ್ಮದ್ ನಿಝಾಮುದ್ದೀನ್, ತೌಫೀಕ್, ಅಬ್ದುಲ್ ಸಲೀಂ ಹಾಗೂ ಮಹಮ್ಮದ್ ಶಫೀಕ್, ನಾಸಿರ್ ಮತ್ತು ಸಮೀರ್ ಎಂಬ ಗುಂಪು ಅತಿಕ್ರಮವಾಗಿ ಯುವತಿಯ ಮನೆಯನ್ನು ಪ್ರವೇಶ ಮಾಡಿದೆ. ಮನೆಯಲ್ಲಿದ್ದ ಯುವತಿಯ ತಂದೆ ಉಸ್ಮಾನ್ ಬ್ಯಾರಿ ಮತ್ತು ಮಕ್ಕಳನ್ನು ಅವ್ಯಾಚ ಪದಗಳಿಂದ ನಿಂದಿಸಿದೆ.

ಈ ವೇಳೆ ಮನೆಗೆ ಆಗಮಿಸಿದ ಯೂಸುಫ್ ಎಂಬುವವರ ಮೇಲೆ ತಂಡ ಹಲ್ಲೆ ನಡೆಸಿದೆ. ಬಿಡಿಸಲು ಯತ್ನಿಸಿದ ಉಸ್ಮಾನ್ ಬ್ಯಾರಿಗೆ ನಿಝಾಮುದ್ದೀನ್ ಚೂರಿಯಿಂದ ಎದೆಗೆ ಇರಿದಿದ್ದಾನೆ. ಅಲ್ಲದೆ ತಂಡವು ದೊಣ್ಣೆ, ಕಲ್ಲುಗಳಿಂದ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದೆ ಎಂದು ಯುವತಿಯ ತಾಯಿ ತಾಹಿರಾ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಉಸ್ಮಾನ್ ಬ್ಯಾರಿಯವರ ಮಗಳನ್ನು ತನಗೆ ವಿವಾಹ ಮಾಡಿಕೊಡಬೇಕೆಂದು ನಿಝಾಮುದ್ದೀನ್‌ನ ಕೋರಿಕೆಯನ್ನು ನಿರಾಕರಿಸಿದ ಕಾರಣಕ್ಕೆ ಆತ ತಂಡ ಕಟ್ಟಿಕೊಂಡು ಬಂದು ಈ ಕೃತ್ಯ ಎಸಗಿದ್ದಾಗಿ ಪೊಲೀಸ್ ದೂರಿನಲ್ಲಿ ಆಪಾದಿಸಲಾಗಿದೆ. ಗಾಯಾಳು ಉಸ್ಮಾನ್ ಬ್ಯಾರಿಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ | Border Dispute | ಗಡಿ ರಕ್ಷಣೆ ಆಯೋಗದ ಮೊದಲ ಸಭೆ ನಡೆಸಿದ ಸಿಎಂ ಬೊಮ್ಮಾಯಿ; ಈ ವಾರದಲ್ಲಿ ಸರ್ವಪಕ್ಷ ಸಭೆಯ ಭರವಸೆ

Exit mobile version