ರಾಯಚೂರು: ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯನೊಬ್ಬ ಒಂದೇ ಕುಟುಂಬದ ಇಬ್ಬರು ಮಹಿಳೆಯರಿಗೆ ನಿತ್ಯ ಲೈಂಗಿಕ ಕಿರುಕುಳ ನೀಡಿ ಕ್ರೌರ್ಯ ಮೆರೆಯುತ್ತಿರುವ ಘಟನೆಯೊಂದು (Crime News) ನಡೆದಿದೆ.
ರಾಯಚೂರು ಜಿಲ್ಲೆ ಕವಿತಾಳ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗ್ರಾಪಂ ಮಾಜಿ ಸದಸ್ಯನಾಗಿರುವ ಆರೋಪಿ ಹಿರೇಹಣಗಿ ಗ್ರಾಮದ ನಿವಾಸಿ ಹನುಮಂತಪ್ಪ ಎಂಬಾತ ರಾಜೇಶ್ವರಿ ಮತ್ತು ಸುವರ್ಣ ಎಂಬ ಮಹಿಳೆಯರಿಗೆ ಕಳೆದ ಎರಡು ವರ್ಷಗಳಿಂದ ನಿತ್ಯ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ದಾಖಲಾಗಿದೆ.
ಮಹಿಳೆಯರಿಬ್ಬರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಗ್ರಾಪಂ ಮಾಜಿ ಸದಸ್ಯನ ಕಿರುಕುಳದಿಂದ ನೊಂದು ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿ ಹನುಮಂತಪ್ಪ ಈ ಮಹಿಳೆಯರು ಬಹಿರ್ದೆಸೆರೆ ಹೋದಾಗ ಫಾಲೋ ಮಾಡುತ್ತಿದ್ದ, ಮನೆಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಆರೋಪಿಯು ರಾಜೇಶ್ವರಿ ಎಂಬವರ ಮೈಗೆ ಸಿಗರೇಟಿನಿಂದ ಸುಟ್ಟು ವಿಕೃತಿಯನ್ನು ಮೆರೆದಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಕೆಲವೊಂದು ವಿಡಿಯೊ ಮತ್ತು ಆಡಿಯೊವನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎಂಬ ಆರೋಪವೂ ಇದೆ. ಈತನ ವಿಕೃತಿಗಳನ್ನು ಸಹಿಸಲಾಗದೆ ರಾಜೇಶ್ವರಿ ಅವರು ತಮ್ಮ ಗಂಡನ ಬಳಿ ವಿಷಯವನ್ನು ಹೇಳಿಕೊಂಡಿದ್ದರು. ಇದೀಗ ರಾಜೇಶ್ವರಿ ಅವರು ದೂರು ನೀಡಿದ್ದು, ಇಬ್ಬರು ಮಹಿಳೆರಯರಿಗೆ ಆಗಿರುವ ಅನ್ಯಾಯವನ್ನು ವಿವರಿಸಲಾಗಿದೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿಯಲು ಹಣ ಕೊಡಲಿಲ್ಲ ಎಂದು ತಾತನನ್ನೇ ಕೊಲೆಗೈದ ಮೊಮ್ಮಗ
ಬೆಂಗಳೂರು: ಯುವಕನೊಬ್ಬ ಕುಡಿಯಲು ಹಣ ಕೊಡಲಿಲ್ಲ ಎಂದು ತನ್ನ ತಾತನನ್ನೇ ಕೊಲೆ (Murder Case) ಮಾಡಿದ್ದಾನೆ. ಕಮ್ಮನಹಳ್ಳಿ ಕೊಳೆಗೇರಿಯಲ್ಲಿ ಈ ಘಟನೆ ನಡೆದಿದೆ. ಆಶ್ರಯ ಕೊಟ್ಟವ ಅಜ್ಜನನ್ನೇ ಕತ್ತು ಹಿಸುಕಿ ಕೊಂದ ಧೂರ್ತನನ್ನು ಆ್ಯಂಟೋನಿ ಎಂದು ಗುರುತಿಸಲಾಗಿದೆ. ಕೊಲೆಯಾದವರು ಜೋಸೆಫ್ (೫೪)
ಆ್ಯಂಟೋನಿ ಜೋಸೆಫ್ ಅವರ ನೇರ ಮೊಮ್ಮಗನೇನಲ್ಲ. ಜೋಸೆಫ್ ಅವರ ಅಕ್ಕನ ಮೊಮ್ಮಗ. ಆದರೆ, ಅಕ್ಕನ ಮೊಮ್ಮಗನನ್ನೂ ತನ್ನ ಮೊಮ್ಮಗ ಎಂಬಂತೆ ಸಣ್ಣ ವಯಸ್ಸಿನಿಂದಲೂ ಸಾಕುತ್ತಿದ್ದರು ಜೋಸೆಫ್.
ಈ ನಡುವೆ ಬೆಳೆಯುತ್ತಾ ಬೆಳೆಯುತ್ತಾ ಆ್ಯಂಟೊನಿ ಕುಡಿತದ ದಾಸನಾಗಿದ್ದ. ಕುಡಿಯಲು ದುಡ್ಡು ಕೇಳಿ ಆಗಾಗ ಜೋಸೆಫ್ ಜೊತೆ ಜಗಳವಾಡುತಿದ್ದ. ಮಂಗಳವಾರವೂ ರಾತ್ರಿ ಇದೇ ವಿಚಾರವಾಗಿ ಜಗಳ ನಡೆದಿತ್ತು. ಗಲಾಟೆ ವೇಳೆ ಆ್ಯಂಟೊನಿ ದೊಣ್ಣೆಯಿಂದ ಜೋಸೆಫ್ ತಲೆಗೆ ಹೊಡೆದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಜೋಸೆಫ್ ಅವರನ್ನು ಸ್ಥಳೀಯರು ಆತನ ಆಸ್ಪತ್ರೆಗೆ ಒಯ್ದಿದ್ದರು. ಆದರೆ, ಮಾರ್ಗ ಮಧ್ಯಯೇ ಜೋಸೆಫ್ ಮೃತಪಟ್ಟಿದ್ದ.
ಜೋಸೆಫ್ ಕೊಲೆಯಾಗಿರುವ ಬಗ್ಗೆ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ಬಂದಿದ್ದು, ಇದನ್ನು ಆಧರಿಸಿ ತನಿಖೆ ನಡೆಸಿದರು. ಈ ನಡುವೆ, ಕೊಲೆ ಮಾಡಿದ ಬಳಿಕ ಆ್ಯಂಟೊನಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆತನನ್ನು ಆರ್ ಟಿ ನಗರದಿಂದ ಬಂಧಿಸಲಾಯಿತು. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Murder case: ಪತ್ನಿಯನ್ನು ಕೊಂದ ಕಿರಾತಕ ಆಸ್ತಿಗಾಗಿ ತಂದೆಯ ಕೊಲೆಗೂ ಸುಪಾರಿ ನೀಡಿದ!