Site icon Vistara News

Criminal politics | ರೌಡಿ ಜಯರಾಜ್‌ನನ್ನು ಬೆಳೆಸಿದ್ದು ಸಂಜಯ್‌ ಗಾಂಧಿ; ಕೊತ್ವಾಲ ಶಿಷ್ಯ ಕೆಪಿಸಿಸಿ ಅಧ್ಯಕ್ಷ: ಬಿಜೆಪಿ ಟೀಕಾಪ್ರಹಾರ

Sanjay gadhi

ಬೆಂಗಳೂರು: ಕಾಂಗ್ರೆಸ್‌ ಬಳಸಿದ ರೌಡಿಸಂ ಪಾಲಿಟಿಕ್ಸ್‌ ಅಸ್ತ್ರವನ್ನು (Criminal politics) ಈಗ ಬಿಜೆಪಿ ತಿರುಗುಬಾಣವಾಗಿ ಬಳಸಿಕೊಳ್ಳಲು ಮುಂದಾಗಿದೆ. ಇದುವರೆಗೆ ರಾಜ್ಯಮಟ್ಟಕ್ಕೆ, ಅದರಲ್ಲೂ ಬೆಂಗಳೂರು ಆಸುಪಾಸಿಗೆ ಸೀಮಿತವಾಗಿದ್ದ ರೌಡಿ ರಾಜಕಾರಣ ವ್ಯಾಖ್ಯಾನವನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸುವ ಪ್ರಯತ್ನವನ್ನು ಮಾಡಿದೆ. ಜತೆಗೆ ಅದನ್ನು ಕಾಂಗ್ರೆಸ್‌ನ ಬೀದಿ ಕಾಳಗವನ್ನೂ ರೌಡಿಸಂಗೆ ಕನೆಕ್ಟ್‌ ಮಾಡಿದೆ.

ಬಿಜೆಪಿ ಮಾಡಿದ ಟ್ವೀಟ್‌ಗಳು ಹೀಗಿವೆ..
೧. ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯನವರ ಒಳಜಗಳ ಬೀದಿಗೆ ಬಂದಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಈ ಇಬ್ಬರ ರಂಪಾಟಗಳು ಕಾರ್ಯಕರ್ತರ ತೋಳುಗಳಲ್ಲಿ ಕಾಣುತ್ತಿರುವುದು ಕಾಂಗ್ರೆಸ್‌ನ ಅಧಃಪತನದ ಸೂಚನೆ.

೨. ಟಿಕೆಟ್‌‌ಗಾಗಿ ಅರ್ಜಿ ಎಂಬುದು ಡಿ.ಕೆ. ಶಿವಕುಮಾರ್‌ ತಮ್ಮ ವಿರೋಧಿ ಸಿದ್ದರಾಮಯ್ಯರನ್ನು ಹಣಿಯಲು ತೋಡಿರುವ ಖೆಡ್ಡ. ಇದರಲ್ಲಿ ಅವರ ಹೊರತಾಗಿ ಮಿಕ್ಕೆಲ್ಲರು ಬಿದ್ದಿರುವುದರಿಂದಲೇ ಈ ಹಾದಿಬೀದಿ ರಂಪ ಶುರುವಾಗಿರುವುದು. ಒರ್ವನ ಸ್ವಾರ್ಥ ಲಾಲಸೆಗೆ ಕಾರ್ಯಕರ್ತರು ಕತ್ತಿನ ಪಟ್ಟಿ ಹಿಡಿದುಕೊಂಡು ಹೊಡೆದಾಡುವುದು ನಾಚಿಕೆಗೇಡಿನ ಸಂಗತಿಯಲ್ಲವೇ?

೩. ರೌಡಿಸಂ ಕಾಂಗ್ರೆಸ್‌ನ ಶಕ್ತಿ. ಸಂಜಯ್ ಗಾಂಧಿ ಕುಖ್ಯಾತ ರೌಡಿ ಜಯರಾಜನನ್ನು ಬೆಳೆಸಿದರು. ಅದೇ ಹಾದಿಯಲ್ಲಿ ಬಂದು ಕೊತ್ವಾಲ ಶಿಷ್ಯರಾಗಿದ್ದವರು ಇಂದು ಕೆಪಿಸಿಸಿ ಅಧ್ಯಕ್ಷ. ಕಾಂಗ್ರೆಸ್ ಇತಿಹಾಸವೇ ಹೀಗಿರಬೇಕಾದರೆ ಬೀದಿ ಹೊಡೆದಾಟಗಳು ಪಕ್ಷಕ್ಕೆ ಸಾಮಾನ್ಯ. ಆದರೆ, ನಾಡಿನ ಜನರಿಗೆ ಇದನ್ನು ಸಹಿಸಿಕೊಳ್ಳುವ ಕರ್ಮ ಏಕೆ?

೪. ಕಾಂಗ್ರೆಸ್ ಒಳಗಿನ ಬೇಗುದಿ, ರೌಡಿಸಂ ವರ್ತನೆಯ ಫಲಶೃತಿಯೇ ಹೊಸಕೋಟೆ, ಹಾಸನ, ತುಮಕೂರು ಗ್ರಾಮಾಂತರ ಪ್ರದೇಶಗಳ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮಲ್ಲೇ ರಂಪಾಟ. ತಮ್ಮ ಕಾಯಕರ್ತರನ್ನು ತಹಬಂದಿಗೆ ತರಲು ಹೆಣಗಾಡುತ್ತಿರುವ ಈ ಕಾಂಗ್ರೆಸ್‌ ನಾಯಕರು ರಾಜ್ಯ ಚುಕ್ಕಾಣಿ ಹಿಡಿದರೆ ಗತಿ ಏನು ಎಂಬುದನ್ನು ಜನತೆ ಯೋಚಿಸಬೇಕು.

೫. ಅಧಿಕಾರ ದಾಹ ತೀರಿಸಿಕೊಳ್ಳಲು ರೌಡಿಸಂಗೂ ಇಳಿಯುವ ಕಾಂಗ್ರೆಸ್‌ ನಾಯಕರ ರಕ್ಕಸ ಗುಣಗಳು ಪಕ್ಷದ ಕಾರ್ಯಕರ್ತರಲ್ಲೂ ಈಗ ಕಾಣುತ್ತಿರುವುದಕ್ಕೆ ಆಶ್ಚರ್ಯ ಪಡಬೇಕಿಲ್ಲ. ಯಥಾ ರಾಜ ತಥಾ ಪ್ರಜಾ! ಸಮಾಜದ ಅಶಾಂತಿಗೆ, ಸಮಾಜ ಘಾತಕು ಶಕ್ತಿಗಳಿಗೆ ಪ್ರೇರಕರಾಗಿರುವ ಇಂಥವರಿಂದ ಎಂಥ ಆಡಳಿತ ನಿರೀಕ್ಷಿಸಬಹುದು, ನೀವೇ ಯೋಚಿಸಿ?

ಸಂಸ್ಕೃತಿ ಭಂಜಕ ಕಾಂಗ್ರೆಸ್‌
ಈ ನಡುವೆ, ಕಾಂಗ್ರೆಸ್‌ನ್ನು ಸಂಸ್ಕೃತಿ ಭಂಜಕ ಎಂದೂ ಬಿಜೆಪಿ ವ್ಯಾಖ್ಯಾನಿಸಿದೆ. ಬಿಜೆಪಿ ಸಂಸ್ಕೃತಿ ರಕ್ಷಕ ಎಂಬ ಕಾರಣಕ್ಕಾಗಿಯೇ ಗುಜರಾತ್‌ನ ಜನ ಗೆಲ್ಲಿಸಿದ್ದಾರೆ ಎಂದೂ ಅದು ಹೇಳಿದೆ. ಅದಕ್ಕೆ ಸಂಬಂಧಿಸಿಯೂ ಟ್ವೀಟ್‌ ಮಾಡಿದೆ.

೧. ಭಾರತದ ಧಾರ್ಮಿಕ, ಸಾಂಸ್ಕೃತಿಕ ಶ್ರೀಮಂತಿಕೆಯ ಖಜಾನೆಯಾಗಿದ್ದ ಗುಜರಾತಿನ ಸೋಮನಾಥ ಜ್ಯೋತಿರ್ಲಿಂಗ ದೇವಾಲಯದ ಮೇಲೆ ಘಜ್ನಿ ಮಹಮ್ಮದ್ 17 ಬಾರಿ ದಾಳಿ ಮಾಡಿದ್ದರೂ ಇಂದಿಗೂ ನಮ್ಮ ಸಂಸ್ಕೃತಿ ಉಳಿದಿದೆ. ಕಾಂಗ್ರೆಸ್ಸಿಗೂ ಘಜ್ನಿ ಸಂತತಿಗೂ ಬಹಳವೇ ಸಾಮ್ಯತೆಯಿದೆ. ಇದರ ವಿರುದ್ಧ ನಿಂತಿದ್ದು ಬಿಜೆಪಿ.

೨. ದೇಶದ ಜನ ಈ ನೆಲದ ಸಂಸ್ಕೃತಿ, ಪರಂಪರೆ ರಕ್ಷಕರ ಬೆನ್ನಿಗೆ ನಿಲ್ಲುತ್ತಾರೆ ಎಂಬುದಕ್ಕೆ ಗುಜರಾತಿನಲ್ಲಿ ಈ ಬಾರಿ ಬಿಜೆಪಿಗೆ ಜನರು ನೀಡಿದ ಐತಿಹಾಸಿಕ ಗೆಲುವೇ ಸಾಕ್ಷಿ. ಎಷ್ಟೇ ನಕಾರಾತ್ಮಕ ತಂತ್ರಗಳನ್ನು ಮಾಡಿದರೂ ಜನರು ಮತ ಹಾಕುವುದು ಅಭಿವೃದ್ಧಿಗೆ ಮಾತ್ರ ಎಂಬುದು ಸಾಬೀತಾಗಿದೆ.

೩. ಗುಜರಾತ್‌ನಲ್ಲಿ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಗೆ ಮಣೆ ಹಾಕಿದಂತೆ, ಕರ್ನಾಟಕದಲ್ಲೂ ಡಬಲ್ ಎಂಜಿನ್ ಸರ್ಕಾರದ ಜನಪರ ಆಡಳಿತ, ಅಭಿವೃದ್ಧಿಗೆ ಗುಜರಾತ್ ಮಾದರಿಯ ಗೆಲುವನ್ನು ಬಿಜೆಪಿಗೆ ನೀಡಲಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್‌ ಹೆದರಿ ಬಿಜೆಪಿ ವಿರುದ್ಧ ದಿನಕ್ಕೊಬ್ಬರಂತೆ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ | ಶರತ್‌ ಬಚ್ಚೇಗೌಡಗೆ ಕಾಂಗ್ರೆಸ್‌ ಟಿಕೆಟ್‌ ಬೇಡ: ಮೂಲ ಕಾಂಗ್ರೆಸಿಗರ ಸಭೆಯಲ್ಲಿ ಒತ್ತಾಯ, ಜಟಾಪಟಿ

Exit mobile version