ಬೆಂಗಳೂರು: ರೌಡಿಸಂ ಮತ್ತು ಗೂಂಡಾ ಹಿನ್ನೆಲೆಯ (Criminal politics) ವ್ಯಕ್ತಿಗಳು ಪಕ್ಷ ಸೇರುತ್ತಿದ್ದಾರೆ ಎಂಬ ಆಕ್ಷೇಪಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಈ ಬಗ್ಗೆ ಪರಿಶೀಲನೆ ಮುಂದಾಗಿದೆ. ಯಾವ ಕಾರಣಕ್ಕೂ ಸೈಲೆಂಟ್ ಸುನಿಲ್‌ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಈಗಾಗಲೇ ಪಕ್ಷ ಸೇರಿರುವ ನೆಲಮಂಗಲದ ಫೈಟರ್ ರವಿ ಅಲಿಯಾಸ್ ಮಲ್ಲಿಕಾರ್ಜುನ್‌ನಿಂದ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಮಾಹಿತಿ ಕೇಳಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು ಈ ವಿಚಾರವನ್ನು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ. ಫೈಟರ್ ರವಿ ಮೇಲಿನ ಪ್ರಕರಣಗಳ ಮಾಹಿತಿ ಕೊಡುವಂತೆ ಕಟೀಲ್ ಅವರು ಸೂಚಿಸಿದ್ದಾರೆ. ಫೈಟರ್ ರವಿಯಿಂದಲೂ ವಿವರಣೆ ಕೇಳಲಾಗಿದೆ ಎಂದರು.
ʻʻಬಿಜೆಪಿ ಪಾರ್ಟಿ ವಿಥ್ ಡಿಫರೆನ್ಸ್. ವಾಜಪೇಯಿ, ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಪಾರ್ಟಿ ಇದು. ನಾವು ಬೂತ್ ಗಳಲ್ಲಿ ಕೆಲಸ ಮಾಡಿ ಬೆಳೆಸಿದ ಪಕ್ಷ ಬಿಜೆಪಿʼʼ ಎಂದು ಹೇಳಿದ ಅವರು, ʻʻಕಾಂಗ್ರೆಸ್ ಇದಕ್ಕೆ ತದ್ವಿರುದ್ಧ ನಡೆದುಬಂದಿದೆ. ಭಾರತದಲ್ಲಿ ಭಯೋತ್ಪಾದಕರು, ನಕ್ಸಲರನ್ನು ಬೆಳಿಸಿದ್ದು ಕಾಂಗ್ರೆಸ್. ಭಯೋತ್ಪಾದಕರನ್ನ ಸಮರ್ಥನೆ ಮಾಡಿಕೊಳ್ಳುವ ಬುದ್ಧಿಜೀವಿಗಳಿಗೆ ಆಶ್ರಯ ಕೊಟ್ಟಿದ್ದು ಕಾಂಗ್ರೆಸ್. ಬೂತ್ ಕ್ಯಾಪ್ಚರ್ ಮಾಡ್ತಿದ್ದು ಕಾಂಗ್ರೆಸ್ʼʼ ಎಂದು ಹರಿಹಾಯ್ದರು.
ʻʻಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಜನರೇ ಮಾತಾಡ್ತಾರೆ. ಎಷ್ಟೋ ಜನ ರೌಡಿಗಳು ಈಗಲೂ ಇವರ ಹಿಂದೆ ಇದ್ದಾರೆ.ʼʼ ಎಂದು ಹೇಳಿದ ರವಿಕುಮಾರ್, ʻʻಕಾಂಗ್ರೆಸ್ ಭಯೋತ್ಪಾದಕರನ್ನು ಬೆಳೆಸಿದ ಕಾರಣಕ್ಕಾಗಿಯೇ ನಾವು ಇಬ್ಬರು ಪ್ರಧಾನಿಗಳನ್ನ ಕಳೆದುಕೊಂಡೆವುʼʼ ಎಂದು ದೂಷಿಸಿದರು. ʻʻಬಿಜೆಪಿಯಲ್ಲಿ ರೌಡಿಗಳಿಗೆ ಜಾಗವಿಲ್ಲ.. ಅದೆಲ್ಲ ಕಾಂಗ್ರೆಸ್‌ನಲ್ಲಿ ಮಾತ್ರ. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಿಗೆ ರೌಡಿಗಳೇ ಬೇಕುʼʼ ಎಂದು ಹೇಳಿದರು.
ರೌಡಿಸಂ ದೂರಿದ್ದರೆ ತಿಳಿಸಲು ಸೂಚನೆ
ಪಕ್ಷದಲ್ಲಿ ಯಾರ ಮೇಲೆ ರೌಡಿಸಂ ಚಟುವಟಿಕೆಗಳ ಪ್ರಕರಣಗಳಿವೆ ಎಂಬ ಬಗ್ಗೆ ರಾಜ್ಯಾಧ್ಯಕ್ಷರು ಮಾಹಿತಿ ಕೇಳಿದ್ದಾರೆ. ಫೈಟರ್ ರವಿಯಿಂದಲೂ ಮಾಹಿತಿ ಕೇಳಿದ್ದಾರೆ. ರೌಡಿ ಎಲಿಮೆಂಟ್ಸ್‌ಗೆ ನಮ್ಮಲ್ಲಿ ಜಾಗವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ | ಮಂಡ್ಯ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ BJP ಸೇರ್ಪಡೆ; ಫೈಟರ್ ರವಿ ಸೇರ್ಪಡೆಗೆ ಅಶ್ವತ್ಥನಾರಾಯಣ ಸಮರ್ಥನೆ