ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರೌಡಿ ಪಾಲಿಟಿಕ್ಸ್ (Criminal politics) ಇನ್ನಷ್ಟು ತೀವ್ರಗೊಂಡಿದೆ. ಬಿಜೆಪಿಯ ರೌಡಿಸಂ ರಾಜಕೀಯವನ್ನು ಬಯಲಿಗೆಳೆಯಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಿಂದ ‘ಸೋರಿಕೆಯಾದ’ ಅಭ್ಯರ್ಥಿಗಳ ಪಟ್ಟಿಯೊಂದಿಗೆ ವೆಬ್‌ಸೈಟ್ ಸ್ಥಾಪಿಸಲಾಗಿದೆ. ಇದರಲ್ಲಿ ಬಿಜೆಪಿಗೆ ಸೇರ್ಪಡೆಯಾಗಲು ಇರುವ ಅರ್ಹತೆಗಳ ಪಟ್ಟಿ ಮತ್ತು ಈಗ ಸೇರ್ಪಡೆಯಾಗಿ ಟಿಕೆಟ್ ಪಡೆಯಲು ಕಾಯುತ್ತಿರುವವರ ಅರ್ಹತೆಗಳನ್ನು ಚಿತ್ರ ಸಹಿತ ಬರೆದು ಮೂದಲಿಸಲಾಗಿದೆ!
ʻʻಕರ್ನಾಟಕ ಬಿಜೆಪಿ ರೌಡಿ ಶೀಟರ್‌ಗಳು ಮತ್ತು ಸಮಾಜ ವಿರೋಧಿಗಳ ತಾಣವಾಗಿ ಮಾರ್ಪಟ್ಟಿದೆ. ದಿನಕ್ಕೊಂದು ಹೊಸ ರೌಡಿಗಳು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆʼʼ ಎಂದು ಬಿಜೆಪಿ ಅಭ್ಯರ್ಥಿಯಾಗಲು ಮಾನದಂಡಗಳ ಫೋಟೊಗಳೊಂದಿಗೆ ‘ಸೋರಿಕೆಯಾದ’ ಅಭ್ಯರ್ಥಿಗಳ ಪಟ್ಟಿ ಎಂದು ವಿವರ ಬಿಡುಗಡೆ ಮಾಡಿದೆ!
https://www.leakedbjp.com/ ಎಂಬ ವೆಬ್‌ಸೈಟ್ ಮಾಡಿ ೨೦23ರ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯ ಅನೌಪಚಾರಿಕತೆಯನ್ನು ಪ್ರದರ್ಶಿಸಲು ಸಂಪೂರ್ಣ ವೆಬ್‌ಸೈಟ್ ಅನ್ನು ಮೀಸಲಿಟ್ಟಿದೆ ಎಂದು ಕಾಂಗ್ರೆಸ್ ಬರೆದಿದೆ.
ಹೊಸ ವೆಬ್‌ಸೈಟ್ ಬೆಂಗಳೂರಿನ ರೌಡಿ ಶೀಟರ್‌ಗಳು ಮತ್ತು ಸ್ಲಂ ಲಾರ್ಡ್‌ಗಳನ್ನು ಬಿಜೆಪಿ ತನ್ನ ಕಾರ್ಯಕರ್ತರನ್ನಾಗಿ ಸೇರಿಸಿಕೊಳ್ಳುತ್ತಿದೆ. ರಾಜಕೀಯವನ್ನು ಹೇಗೆ ಅಪರಾಧೀಕರಿಸುತ್ತಿದೆ ಎಂಬುದರ ಕುರಿತು ವಿವರಗಳನ್ನು ಹೊಂದಿರುತ್ತದೆ. ಬೆಂಗಳೂರು ನಗರದ ದೊಡ್ಡ ಕೊಳೆಗೇರಿಯೊಂದರಲ್ಲಿ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರು ಗ್ಯಾಂಗ್ ಸ್ಟಾರ್ ಸೈಲೆಂಟ್ ಸುನಿಲ್ ಜೊತೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ಅಲ್ಲದೆ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ರೌಡಿಶೀಟರ್ ಗಳು ಬಿಜೆಪಿ ಪಕ್ಷವನ್ನು ಸೇರುತ್ತಿದ್ದಾರೆ ಎಂದು ಕಾಂಗ್ರೆಸ್ ಉಲ್ಲೇಖಿಸಿದೆ.
ಬಿಜೆಪಿಯ ಜನಪ್ರತಿನಿಧಿಗಳು ಕೂಡಾ ರೌಡಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಖಂಡಿಸುತ್ತದೆ ಎಂದು ಅಭಿಯಾನದಲ್ಲಿ ಕಾಂಗ್ರೆಸ್ ತಿಳಿಸಿದೆ.
ಧಮ್ ತಾಕತ್ತೆಲ್ಲ ಬಂದದ್ದು ರೌಡಿಗಳಿಂದಾನಾ?: ಕಾಂಗ್ರೆಸ್ ಪ್ರಶ್ನೆ
ಈ ನಡುವೆ ಟ್ವೀಟ್ ಮೂಲಕ ಕಾಂಗ್ರೆಸ್ ಬಿಜೆಪಿಯನ್ನು ತೀವ್ರವಾಗಿ ಕಾಡಿದೆ. ಇತ್ತೀಚೆಗೆ ದೇವನಹಳ್ಳಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ʻಧಮ್ ಇದ್ರೆ.. ತಾಕತ್ತಿದ್ರೆʼ ಎಂಬೆಲ್ಲ ಪದಗಳನ್ನು ಬಳಸಿದ್ದರ ಹಿಂದೆ ಇದೇ ರೌಡಿಸಂನ ಛಾಯೆ ಇದೆ ಎಂದು ಗೇಲಿ ಮಾಡಿದೆ. ಜತೆಗೆ ಸಚಿವರಾದ ಅಶ್ವತ್ಥ ನಾರಾಯಣ, ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲಿ ರೌಡಿಗಳು ಪಕ್ಷ ಸೇರುತ್ತಿದ್ದಾರೆ. ಅವರಿಗೂ ರೌಡಿಗಳಿಗೂ ಏನು ಸಂಬಂಧ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಕೆಲವು ಟ್ವೀಟ್‌ಗಳು
-ಕೊನೆಯ ದಿನಗಳಲ್ಲಿ ಬಿಜೆಪಿಯ ಕಪಾಟಿನಿಂದ ಅಸ್ಥಿಪಂಜರಗಳು ಉರುಳುತ್ತಿವೆ.
ಯಾವ ರೌಡಿಯನ್ನೂ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದ ಸಿಎಂ ಬೊಮ್ಮಾಯಿಯವರೇ ಸೈಕಲ್ ರವಿ ಸಚಿವ ಡಾ. ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಸೇರಿಕೊಂಡಿದ್ದೇನು? ◆ಬೆತ್ತನಗೆರೆ ಶಂಕರನನ್ನು ಸಂಸದ ಪ್ರತಾಪಸಿಂಹ ಸೇರಿಕೊಂಡಿದ್ದೇನು? ◆ಆನೇಕಲ್ ಪುರಸಭೆಗೆ ಸರ್ಕಾರವೇ (ಉಪ್ಪಿ) ಮಂಜುನಾಥನನ್ನು ನಾಮನಿರ್ದೇಶನ ಮಾಡಿದ್ದೇಕೆ? ರೌಡಿಗಳು ಬಿಜೆಪಿಗೆ ಆಪ್ತರೇಕೆ?
– ಸಿಎಂ ಬೊಮ್ಮಾಯಿಯವರು ದಮ್ಮು, ತಾಕತ್ತು ಇದ್ರೆ ಬನ್ನಿ ಎಂದು ರೌಡಿಸಂ ಭಾಷೆಯಲ್ಲಿ ಸವಾಲು ಹಾಕಿದ್ದರ ಹಿಂದೆ ನೈಜ ರೌಡಿಸಂ ಇದೆ ಎಂದು ಈಗ ಬೆಳಕಿಗೆ ಬರುತ್ತಿದೆ. ರೌಡಿ ಮೋರ್ಚಾ ಕಟ್ಟಿಕೊಂಡು ಈ ಸವಾಲು ಹಾಕಿದಿರಾ ಬೊಮ್ಮಾಯಿ ಅವರೇ? ಬಿಜೆಪಿ ಕಚೇರಿ ಈಗ ರೌಡಿಗಳ ಅಡ್ಡೆಯಾಗಿದೆ, ಬೊಮ್ಮಾಯಿಯವರು ರೌಡಿಗಳಿಗೆ ಮಹಾಗುರುವಿನಂತೆ ಆಗಿದ್ದಾರೆ.
– ಸದ್ದಿಲ್ಲದೆ ಬಿಜೆಪಿಯ ರೌಡಿ ಮೋರ್ಚಾ ರೂಪುಗೊಳ್ಳುತ್ತಿದೆ, ಜೈಲಿನಲ್ಲಿರಬೇಕಾದವರು ಬಿಜೆಪಿ ಕಚೇರಿಯಲ್ಲಿದ್ದಾರೆ. ರೌಡಿಗಳಿಗೆ ಪ್ರೋತ್ಸಾಹಿಸುವುದಿಲ್ಲ ಎಂದು ಯೂಟರ್ನ್ ಸ್ಟೇಟ್ಮೆಂಟ್ ನೀಡಿದ್ದ ಬೊಮ್ಮಾಯಿವರೇ ಆನೇಕಲ್ ಪುರಸಭೆಗೆ ರೌಡಿ ಶೀಟರ್‌ನನ್ನು ನಿಮ್ಮದೇ ಸರ್ಕಾರ ನಾಮನಿರ್ದೇಶನ ಮಾಡಿರುವುದೇಕೆ? ದಮ್ಮು ತಾಕತ್ತಿದ್ದರೆ ಉತ್ತರಿಸಿ.
– ರೌಡಿಗಳನ್ನು ಬಿಜೆಪಿ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು ಮತ್ತೊಂದೆಡೆ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನವನ್ನೇ ನಡೆಸುತ್ತಿದೆ. ಬೆತ್ತನಗೆರೆ ಶಂಕರ ಎಂಬ ರೌಡಿ ಶೀಟರ್‌ನನ್ನು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡದ್ದಾರೆ ಸಂಸದ ಪ್ರತಾಪಸಿಂಹ. ಬೊಮ್ಮಾಯಿಯವರೇ ಅವರೇ, ರೌಡಿರಾಜ್ಯ ಕಟ್ಟಲು ಹೊರಟಿದ್ದೀರಾ? ಇದೇನಾ ನಿಮ್ಮ ಸಂಸ್ಕೃತಿ?
ಇದನ್ನೂ ಓದಿ | Criminal politics | ಕೈಗೆ ಸಿಕ್ಕಾಗ ಬಿಟ್ಟುಬಿಟ್ರು, ಈಗ ಪೊಲೀಸರು ಕೇಳಿದ್ರೆ ಕಾನೂನು ಮಾತಾಡ್ತಾ ಇದಾನೆ ಸೈಲೆಂಟ್ ಸುನಿಲ!