Site icon Vistara News

Video: ಗದ್ದೆಗೆ ಬಂದಿದ್ದ ಮೊಸಳೆಯನ್ನು ಹೆಡೆಮುರಿ ಕಟ್ಟಿದ ಗ್ರಾಮಸ್ಥರು; ಹೊತ್ತು ಹೋಗಲು ಬಂದ ಬುಲ್ಡೋಜರ್​!

Crocodile Capture

#image_title

ಬೆಳಗಾವಿ: ಆಹಾರ ಹುಡುಕುತ್ತ ನದಿ ನೀರಿನಿಂದ ಈಚೆಗೆ ಬಂದು, ಹಳ್ಳಿ ಪ್ರವೇಶ ಮಾಡಿದ್ದ ಮೊಸಳೆಯನ್ನು ಗ್ರಾಮಸ್ಥರೇ ಸೆರೆ ಹಿಡಿದು (Crocodile Capture) ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಜಿಲ್ಲೆಯ ಗೋಕಾಕ್​ ತಾಲೂಕಿನ ಉದಗಟ್ಟಿ ಎಂಬ ಗ್ರಾಮದಲ್ಲಿ ಬೃಹತ್​ ಗಾತ್ರದ ಮೊಸಳೆ ಸೆರೆಯಾಗಿದೆ. ಗ್ರಾಮಸ್ಥರು ಜೆಸಿಬಿ ತರಿಸಿ ಅದನ್ನು ಸಾಗಿಸಿದ್ದಾರೆ.

ಮಳೆಯಿಲ್ಲದ ಕಾರಣ ಘಟಪ್ರಭಾ ನದಿಯಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ಇತ್ತೀಚೆಗೆ ನದಿ ತೀರದ ಊರ ಜನರಿಗೆ ಮೊಸಳೆ ಕಾಟ ಹೆಚ್ಚಿತ್ತು. ಮೊಸಳೆ ದಡಕ್ಕೆ ಬಂದು ಮಲಗುವುದು, ಊರಿಗೆ ಪ್ರವೇಶ ಮಾಡುವುದು, ಅಲ್ಲಿಯೇ ಇದ್ದ ಗದ್ದೆಗೆ ಬಂದು ಮಲಗುವುದು ಸಾಮಾನ್ಯವಾಗಿತ್ತು. ಹೀಗಾಗಿ ಸಮೀಪದ ಊರುಗಳ ಜನರು ಸದಾ ಭಯದಲ್ಲಿಯೇ ಇರುವಂತಾಗಿತ್ತು. ಹಾಗೇ, ನಿನ್ನೆ ರಾತ್ರಿ ಕೂಡ ಮೊಸಳೆ ಆಹಾರ ಅರಸಿ ಗದ್ದೆಯೊಂದಕ್ಕೆ ಬಂದು ಮಲಗಿತ್ತು. ಅದನ್ನು ನೋಡಿದ ಗ್ರಾಮಸ್ಥರು ಕೂಡಲೇ ತಾವೇ ಮುಂದಾಗಿ ಅದನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನೊಂದು ಚೀಲದಲ್ಲಿ ಬಿಗಿಯಾಗಿ ಕಟ್ಟಿದ್ದಾರೆ. ಜೆಸಿಬಿಯೊಂದನ್ನು ತರಿಸಿ ಮೊಸಳೆ ಸಾಗಿಸಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿ, ಮೊಸಳೆಯನ್ನು ಅವರ ಸುಪರ್ದಿಗೆ ವಹಿಸಿದ್ದಾರೆ.

ಇದನ್ನೂ ಓದಿ: Viral Video: ಮೊಸಳೆ ಕ್ರೂರಿಯೋ? ಮಾನವ ಕಟುಕನೋ?-ಗಂಗಾನದಿ ತಟದಲ್ಲಿ ಭಯಾನಕ ಘಟನೆ!

ತುಂಗಭದ್ರಾ ನದಿ ದಡದಲ್ಲೂ ಮೊಸಳೆ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ಗ್ರಾಮದ ಜನರಿಗೂ ಮೊಸಳೆ ಭಯ ಶುರುವಾಗಿದೆ. ಇಲ್ಲಿನ ಗಡ್ಡಿ ಶಂಕರಲಿಂಗ ದೇವಸ್ಥಾನದ ಬಳಿ, ತುಂಗಭದ್ರಾ ನದಿ ದಡದಲ್ಲಿ ಮೊಸಳೆ ಪತ್ತೆಯಾಗಿದೆ. ಪ್ರತಿದಿನವೂ ರೈತರು ಇಲ್ಲಿಗೆ ತಮ್ಮ ದನಕರುಗಳನ್ನು ಕರೆದುಕೊಂಡು ಬಂದು ನೀರು ಕುಡಿಸುತ್ತಾರೆ. ಜಾನುವಾರುಗಳು ಇಲ್ಲಿ ಆಗಮಿಸುತ್ತವೆ. ಮನೆಗಳೂ ಸಮೀಪವೇ ಇದೆ. ಹಾಗಾಗಿ ಕೂಡಲೇ ಮೊಸಳೆಯನ್ನು ಸೆರೆ ಹಿಡಿಯಬೇಕು ಎಂದು ಅಲ್ಲಿನ ಜನರು ಆಗ್ರಹ ಮಾಡುತ್ತಿದ್ದಾರೆ.

Exit mobile version