ಹಾವೇರಿ: ಚಾಲಾಕಿ ವ್ಯಾಪಾರಿಯೊಬ್ಬ ಕೋಟ್ಯಂತರ ರೂಪಾಯಿ ವಂಚಿಸಿದ್ದರಿಂದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ವರ್ತಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವ್ಯಾಪಾರಿ ಮೋಸ ಮಾಡಿದ್ದರಿಂದ ತಮ್ಮ ಹಣ ಕೊಡಿಸಿ ಎಂದು 37 ವರ್ತಕರು ಪೊಲೀಸರ ಮೊರೆ ಹೋಗಿದ್ದಾರೆ.
ಬ್ಯಾಡಗಿ ಅಂತ ಹೇಳಿದ ತಕ್ಷಣ ಮೂಗಿಗೆ ಬಡಿಯೋದು ಮೆಣಸಿನಕಾಯಿ ಘಾಟು. ಇಲ್ಲಿ ನೂರಾರು ವರ್ತಕರು, ಸಾವಿರಾರು ಕಾರ್ಮಿಕರಿದ್ದು, ದಿನನಿತ್ಯ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ವ್ಯಾಪಾರಿಯೊಬ್ಬ ವರ್ತಕರಿಗೆ ₹4.80 ಕೋಟಿ ವಂಚಿಸಿದ್ದು, ತಮ್ಮ ಹಣ ಕೊಡಿಸಿ ಎಂದು ವರ್ತಕರು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.
ಇದನ್ನೂ ಓದಿ | ಮದ್ಯ ದರದಲ್ಲಿ ಮೋಸ ಖಂಡಿಸಿ Gandhigiri ಗಾಂಧಿ, ಅಂಬೇಡ್ಕರ್ ಪೋಟೊ ಇಟ್ಟು ಪ್ರೊಟೆಸ್ಟ್
ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ನಿವಾಸಿ ಮೈನುದ್ದೀನ್ ತರಿನ್ ಎಂಬ ವ್ಯಾಪಾರಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. SYT&SONS ಎಂಬ ಅಂಗಡಿ ಹೆಸರಿನಲ್ಲಿ ಮೆಣಸಿನಕಾಯಿ ಖರೀದಿ ಮಾಡಿಕೊಂಡಿದ್ದ ಈತ, ಸುಮಾರು 2 ವರ್ಷದಿಂದ ಹಣ ಕೊಡದೆ ವರ್ತಕರಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರು ನೀಡಲಾಗಿದೆ.
ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡ ವರ್ತಕರು ತುರ್ತು ಸಭೆ ನಡೆಸಿ, ಆರೋಪಿ ಮೈನುದ್ದೀನ್ ಹಣ ನೀಡುವ ತನಕ ಎಲ್ಲಿಯೂ ಮೆಣಸಿನಕಾಯಿ ವ್ಯವಹಾರ ಹಾಗೂ ಖರೀದಿ ಮಾಡಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಇದಲ್ಲದೆ ಅಲ್ಲಿಯ ತನಕ ಮಾರುಕಟ್ಟೆಯಿಂದ ಘೇರಾವ್ ಹಾಕುವುದಾಗಿ ಸಭೆಯಲ್ಲಿ ತಿರ್ಮಾನ ಮಾಡಿದ್ದಾರೆ. ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷರಾದ ಸುರೇಶಗೌಡ ಪಾಟೀಲ್ ನೇತೃತ್ವದಲ್ಲಿ ಹಲವು ತೀರ್ಮಾನ ಕೈಗೊಳ್ಳಲಾಗಿದ್ದು, ಮಾರುಕಟ್ಟೆಯಲ್ಲಿ ಮೋಸ ಮಾಡುವವರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ವರ್ತಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಮೈನುದ್ದೀನ್ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡಗಿ ಪೊಲೀಸರು ವಂಚಕನ ಬಂಧನಕ್ಕೆ ಬಲೆ ಬಿಸಿದ್ದಾರೆ.
ವರದಿ: ಸುರೇಶ ನಾಯ್ಕ, ಹಾವೇರಿ
ಇದನ್ನೂ ಓದಿ | ಹಾವೇರಿಯಲ್ಲಿ ಕಂಟ್ರೀಮೇಡ್ ಗನ್ ಸಪ್ಲೈ ಮಾಡುತ್ತಿದ್ದವರ ಬಂಧನ!