ಬೆಂಗಳೂರು: ರಾಜ್ಯ ಸರ್ಕಾರ ಶೀಘ್ರ 7ನೇ ವೇತನ ಆಯೋಗದ ವರದಿ ಪಡೆದು ವೇತನ ಹೆಚ್ಚಳ, ಒಪಿಎಸ್ ಜಾರಿ ಸೇರಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು. ಕೇಂದ್ರ ಸರ್ಕಾರ, ಕೇರಳ ಸೇರಿ 22 ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚು ವೇತನ ಸರ್ಕಾರಿ ನೌಕರರಿಗೆ ಸಿಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಶೇ. 17 ಮಧ್ಯಂತರ ಪರಿಹಾರ ನೌಕರರಿಗೆ ಸಿಕ್ಕಿದೆ. ಉಳಿದ ಶೇ.23 ವೇತನವನ್ನು ಜುಲೈ 27ರಿಂದ ಕೊಡಬೇಕು ಎಂದು ರಾಜ್ಯ ಸರ್ಕಾರವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಒತ್ತಾಯಿಸಿದರು.
ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ (Govt Employees Conference) ಮಾತನಾಡಿದ ಅವರು, ರಾಜ್ಯದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇರುವುದರಿಂದ ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಹೀಗಾಗಿ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.
2017ರಲ್ಲಿ ನಾನು ಶಿವಮೊಗ್ಗ ಜಿಲ್ಲಾಧ್ಯಕ್ಷನಾಗಿದ್ದಾಗ, ಸಿದ್ದರಾಮಯ್ಯ ಅವರು 6ನೇ ವೇತನ ಆಯೋಗವನ್ನು ಜಾರಿ ಮಾಡಿದ್ದರು. ಘೋಷಣೆಯಾದ ಕೇವಲ 8 ತಿಂಗಳಲ್ಲಿ ಶ್ರೀನಿವಾಸಮೂರ್ತಿ ಅವರಿಂದ ವರದಿ ಪಡೆದು, ನೌಕರರಿಗೆ ಅತಿ ಹೆಚ್ಚಿನ ಪ್ರಮಾಣದ ಫಿಟ್‌ಮೆಂಟ್ (ಶೇ.30) ನೀಡಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದಾಗಿದೆ. ಇದೀಗ ಮತ್ತೊಮ್ಮೆ ಆ ದಾಖಲೆಯನ್ನು ಮುರಿಯುವ ಅವಕಾಶ ಮುಖ್ಯಮಂತ್ರಿಗಳಿಗೆ ಸಿಕ್ಕಿದೆ. ಹೀಗಾಗಿ ಶೀಘ್ರ ವೇತನ ಆಯೋಗದ ವರದಿ ಪಡೆದು ನೌಕರರ ಬೇಡಿಕೆ ಈಡೇರಿಸಬೇಕು ಎಂದು ಕೋರಿದರು.
ಇದನ್ನೂ ಓದಿ | 7ನೇ ವೇತನ ಆಯೋಗದ ವರದಿ ಬಂದ ನಂತರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸಿಎಂ ಭರವಸೆ
ರಾಜ್ಯ ಸರ್ಕಾರಿ ನೌಕರರ ಸಂಘ 1920ರಲ್ಲಿ ಸ್ಥಾಪನೆಯಾಗಿ ಇವತ್ತಿಗೆ 103 ವರ್ಷಗಳು ಪೂರೈಸಿದೆ. ಸ್ವಾತಂತ್ರ್ಯ ಪೂರ್ವದ ಸಂಘಟನೆ ಯಾವುದಾದರೂ ಇದ್ದರೆ ಅದು, ರಾಜ್ಯ ಸರ್ಕಾರಿ ನೌಕರರ ಸಂಘವಾಗಿದೆ. 31 ಜಿಲ್ಲೆಗಳಲ್ಲಿ 184 ತಾಲೂಕುಗಳಲ್ಲಿ ಸಂಘದ ಘಟಕಗಳಿದ್ದು, ರಾಜ್ಯದ 6 ಲಕ್ಷ ನೌಕರರು ಸದಸ್ಯತ್ವ ಹೊಂದಿದ್ದಾರೆ ಎಂದು ತಿಳಿಸಿದರು.
ನೌಕರರು ನಿಜವಾದ ದೇಶಪ್ರೇಮಿಗಳು, ದೇಶ ಕಟ್ಟುವಲ್ಲಿ ನೌಕರರ ಪಾತ್ರ ಅನನ್ಯವಾಗಿದೆ. 1957ರಿಂದ ಇಲ್ಲಿಯವರೆಗೆ 6 ವೇತನ ಆಯೋಗಗಳು ರಚನೆಯಾಗಿವೆ. ಇವತ್ತು 7ನೇ ವೇತನ ಆಯೋಗ ಪಡೆಯುವ ಹಂತದಲ್ಲಿ ಇದ್ದೇವೆ. ಹಲವಾರು ಅಧ್ಯಕ್ಷರು ಅವರವರ ಕಾಲದಲ್ಲಿ ನೌಕರರ ಪರ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಸರ್ಕಾರದ ಕಾರ್ಯಾಂಗದ ಭಾಗವಾಗಿರುವ ನೌಕರರಿಗೂ ಕುಟುಂಬವಿದೆ, ಹಲವು ಸಮಸ್ಯೆಗಳಿವೆ. ಆದರೆ ಆಳುವ ಸರ್ಕಾರಗಳು, ನೌಕರರಿಗೆ ವೇತನ, ಭತ್ಯೆಗಳನ್ನು ನೀಡುವಲ್ಲಿ ವಿಳಂಬ ಮಾಡಿದ ಸಂದರ್ಭದಲ್ಲಿ ಹೋರಾಟದ ಮೂಲಕ ನೌಕರರು ಹಕ್ಕುಗಳನ್ನು ಪಡೆದಿದ್ದಾರೆ. ಆದರೆ, ಇತ್ತೀಚೆಗೆ ನಾವು ಸರ್ಕಾರದ ವಿರುದ್ಧ ಏಕಾಏಕಿ ಯಾವುದೇ ಹೋರಾಟ, ಮುಷ್ಕರ ಮಾಡಿಲ್ಲ. ನಮ್ಮ ಸಂಘದಲ್ಲಿ ಒಂದು ಸಂಪ್ರದಾಯವಿದೆ. ಮಾತುಕತೆ, ಸಂಧಾನದ ಮೂಲಕ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಹೀಗಾಗಿ ಈ ರೀತಿಯ ಸಮ್ಮೇಳನಗಳನ್ನು ಮಾಡುತ್ತಿದ್ದೇವೆ. ಈ ರೀತಿಯ ಸಮ್ಮೇಳನ ಇತಿಹಾಸದಲ್ಲೇ ಮೊದಲು. ಇದಕ್ಕೆ ಕಾರಣ, ಸಂಘದ ಪದಾಧಿಕಾರಿಗಳಾಗಿದ್ದಾರೆ ಎಂದು ಹೇಳಿದರು.
2017ರಲ್ಲಿ ಸಿದ್ದರಾಮಯ್ಯ ಅವರು ಇದೇ ರೀತಿಯ ಸಮ್ಮೇಳನ ಉದ್ಘಾಟಿಸಿದ್ದರು. ಕಳೆದ ಏಳು ವರ್ಷಗಳಿಂದ ಇಂತಹ ಸಮ್ಮೇಳನ ನಾವು ಮಾಡಿರಲಿಲ್ಲ. ಇವತ್ತು ನೌಕರರ ಸಂಘ, ತಾಲೂಕು, ಹೋಬಳಿ, ಹಳ್ಳಿ ಮಟ್ಟಕ್ಕೆ ತಲುಪಿದೆ. ರಾಜ್ಯದ ವಿವಿಧೆಡೆಯಿಂದ ಸಮಾವೇಶಕ್ಕೆ ನೌಕರರು ಆಗಮಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ, ಸಚಿವರಾದ ಈಶ್ವರ್ ಖಂಡ್ರೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಶೇಷಯ್ಯ, ಭೈರಪ್ಪ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶೀನಿವಾಸ ತಿಮ್ಮೇಗೌಡ, ಖಜಾಂಚಿ ಡಾ: ಸಿದ್ದರಾಮಣ್ಣ, ರಾಜ್ಯ ಮಟ್ಟದ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.