ಬೆಂಗಳೂರು: ನಾವು ಕೆಲಸ ಮಾಡಿಲ್ಲ ಎಂದು ಸೋತಿಲ್ಲ, ಸುಳ್ಳು ಸುದ್ದಿ ಹಾಗೂ ಹಣಕೊಟ್ಟು ಮಾಡಿಸಿದ ಸುದ್ದಿಗಳಿಂದ ಈ ರೀತಿಯ ಫಲಿತಾಂಶ ಬಂದಿದೆ. ನಾವು ಚುನಾವಣೆಯಲ್ಲಿ ಸೋತಿರಬಹುದು, ಆದರೆ ಸತ್ತಿಲ್ಲ ಎಂದು ಕಾರ್ಯಕರ್ತರು ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿದ್ದಾರೆ. ಹೀಗಾಗಿ ಸೋತಿದ್ದೇನೆ ಎಂದು ಹಿಂದೆ ಸರಿಯಲ್ಲ, ಪಕ್ಷ ಸಂಘಟನೆಗಾಗಿ ಸದಾ ಮುಂದಿರುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಸಿ.ಟಿ.ರವಿ (C T Ravi) ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗ ಕಾಂಗ್ರೆಸ್‌ನವರು ಹಲವಾರು ಭರವಸೆ ಕೊಟ್ಟಿದ್ದಾರೆ, ಭರವಸೆ ಈಡೇರಿಸುತ್ತಾರಾ ಎಂಬುದನ್ನು ನೋಡೋಣ. ರಾಷ್ಟ್ರ ಹಾಗೂ ಪಕ್ಷದ ಜವಾಬ್ದಾರಿ ಜತೆಗೆ ಇರುವುದರಿಂದ ಕ್ಷೇತ್ರದ ಕಡೆ ಮುಖ ಮಾಡಲು ಆಗಿಲ್ಲ. ಆದರೆ ಸೋತ ನಂತರ ಬೇರೆಯವರ ಕಡೆ ಬೆರಳು ಮಾಡಿ ತೋರಿಸವವನು ನಾನಲ್ಲ. ಇನ್ಮುಂದೆ ಮತ್ತೆ ಪರಿಶ್ರಮ ಹಾಗೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಮಂತ್ರಿಗಿರಿ ಬಿಟ್ಟು ಪಕ್ಷದ ಪದಾಧಿಕಾರಿ ಜವಾಬ್ದಾರಿ ಆರಿಸಿಕೊಂಡವನು ನಾನು. ಹೀಗಾಗಿ ಸೋಲಿನಿಂದ ನನಗೆ ಯಾವುದೇ ಚಿಂತೆ ಇಲ್ಲ. ಸೋತು ಮನೆಯಲ್ಲಿ ಕುಳಿತುಕೊಳ್ಳಲ್ಲ ಎಂದು ಹೇಳಿದರು.
ಇದನ್ನೂ ಓದಿ | MP Renukacharya: ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ; ಇದು ನನ್ನ ಸ್ಪಷ್ಟ ನಿರ್ಧಾರ: ಎಂ.ಪಿ. ರೇಣುಕಾಚಾರ್ಯ
ವ್ಯಕ್ತಿಗತ ಲಾಭ, ನಷ್ಟ ಲೆಕ್ಕಾಚಾರ ಹಾಕಲ್ಲ. ನಮ್ಮ ಕಾರ್ಯಕರ್ತರಿಗೆ ರವಿ ಅಣ್ಣನ ಸೋಲಿಸುವವರು ಯಾರಿದ್ದಾರೆ ಎಂಬ ಭಾವನೆ ಕೂಡ ಸೋಲಿಗೆ ಕಾರಣವಾಯ್ತು. ಅತಿಯಾದ ವಿಶ್ವಾಸ ಕೂಡ ಸೋಲಿಗೆ ಕಾರಣವಾಗಿದೆ. ಲಾಭ ಆಗುತ್ತೆ ಎಂದು ತೆಗೆದುಕೊಂಡ ನಿರ್ಧಾರ ನಷ್ಟ ಉಂಟುಮಾಡಿದೆ. ಇದನ್ನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಮೊದಲು ಕಾಂಗ್ರೆಸ್ ಜನರಿಗೆ ಕೊಟ್ಟ ಭರವಸೆ ಈಡೇರಿಸಲಿ, ಅವರ ಬಗ್ಗೆ ಈಗಲೇ ಮಾತನಾಡುವುದು ಬೇಡ ಎಂದು ಹೇಳಿದರು.
ಸೋಲನ್ನು ಸಮಚಿತ್ತವಾಗಿ ಸ್ವೀಕಾರ ಮಾಡಿದ್ದೇನೆ. ಇದನ್ನೇ ನನಗೆ ಸಂಘ ಹೇಳಿದ್ದು, ಈ ಸೋಲನ್ನು ಸವಾಲಾಗಿ ಸ್ವೀಕರಿಸುವೆ. ಗೆದ್ದಿರುವ ಅಮಲಿನಲ್ಲಿ ಈಗ ಕಾಂಗ್ರೆಸ್ ಶಾಸಕರು ಏನು ಬೇಕಾದರೂ ಮಾತನಾಡುತ್ತಾರೆ ಎಂದು ಚಿಕ್ಕಮಗಳೂರು ಶಾಸಕ ತಮ್ಮಯ್ಯ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ ಅವರು, ಅಮಲು ಇಳಿಯಲಿ, ಆಮೇಲೆ ಏನು ಮಾತಾನಾಡುವರೋ ನೋಡೋಣ. ರಾಜ್ಯದಲ್ಲಿ ಜನರು ಗ್ಯಾರಂಟಿ ಕಾರ್ಡ್ ನಂಬಿದ್ದಾರೆ. ಮೋದಿ ಕೊಟ್ಟಿರುವ ಯೋಜನೆ ಮರೆತಿದ್ದಾರೆ. ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿ ಕಾರ್ಡ್ ಜನರಿಗೆ ಸಿಗುತ್ತಾ ಎಂಬುದನ್ನು ನೋಡೋಣ ಎಂದರು.
ಇದನ್ನೂ ಓದಿ | V Somanna: ಚುನಾವಣೆಯಲ್ಲಿ ಸೋತಿದ್ದೇನೆ, ಜನರ ತೀರ್ಪು ಸ್ವೀಕರಿಸಿದ್ದೇನೆ: ವಿ.ಸೋಮಣ್ಣ
ಸಿ.ಟಿ.ರವಿಗೆ ಪ್ರಬಲ ಹುದ್ದೆ ಸಿಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ಪ್ರಬಲ ಹುದ್ದೆಯಲ್ಲಿ ಇದ್ದೇನೆ. ಶನಿವಾರವಷ್ಟೇ ರಿಸಲ್ಟ್ ಕೂಡ ಬಂದಿದೆ. ನಾನು ಮತ್ತೆ ಯಾವ ಹುದ್ದೆಯ ಆಕಾಂಕ್ಷೆ ಇಟ್ಟುಕೊಂಡಿಲ್ಲ. ಹಾಗೆ ಅಪೇಕ್ಷೆ ಇಟ್ಟುಕೊಳ್ಳುವುದು ನನ್ನ ಜಯಮಾನವಲ್ಲ ಎಂದು ಹೇಳಿದರು.