ರಾಮನಗರ: ಡಿ.ಕೆ. ಬ್ರದರ್ಸ್ ಭದ್ರಕೋಟೆ ಕನಕಪುರ ಕ್ಷೇತ್ರದಲ್ಲಿ (Karnataka Election) ಬಿಜೆಪಿ ಅಭ್ಯರ್ಥಿ ಆರ್. ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಬುಧವಾರ ಪ್ರಚಾರ ನಡೆಸಿದರು. ಬೆಳಗ್ಗೆಯಿಂದಲೂ ಕನಕಪುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಇಬ್ಬರು ನಾಯಕರು ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಸಿ.ಟಿ. ರವಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಕನಕಪುರ ತಾಲೂಕಿನ ಚಿಕ್ಕಮುಕ್ಕೋಡ್ಲು ಗ್ರಾಮದಲ್ಲಿ ಮಾತನಾಡಿದ ಸಿ.ಟಿ.ರವಿ, ಪ್ರಜಾಪ್ರಭುತ್ವದಲ್ಲಿ ಯಾರದ್ದೂ ಭದ್ರಕೋಟೆ ಅಂತ ಇರೋದಿಲ್ಲ. ಜನರ ವಿಶ್ವಾಸ, ಪ್ರೀತಿ ಗಳಿಸಿದರೆ ಮಾತ್ರ ಭದ್ರಕೋಟೆ. ಭಯದಲ್ಲಿಟ್ಟು ಚುನಾವಣೆ ಗೆದ್ದ ತಕ್ಷಣ ಭದ್ರಕೋಟೆ ಅಂತ ಭಾವಿಸಬಾರದು. ಆ ರೀತಿಯಲ್ಲಿ ಭಾವಿಸಿದರೆ ಪ್ರಜಾಪ್ರಭುತ್ವಕ್ಕೆ ಅಪಮಾನ ಎಂದು ಹೇಳಿದರು.
ಜನರ ವಿಶ್ವಾಸ ಗಳಿಸಿ ಕಮಲ ಅರಳಿಸುವ ತಂತ್ರವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಡವಾಗಿಯಾದರೂ ಕನಕಪುರಕ್ಕೆ ಬಂದಿದ್ದೇವೆ. ರಾಯ್‌ಬರೇಲಿ, ಅಮೇಥಿಯನ್ನೇ ಬಿಟ್ಟಿಲ್ಲ ಇನ್ನೂ ಕನಕಪುರ ಬಿಡುತ್ತೇವಾ? ಇದನ್ನೂ ಬಿಡಲ್ಲ. ಪ್ರಜಾಪ್ರಭುತ್ವ ಗೆಲ್ಲಬೇಕು, ಜನರ ವಿಶ್ವಾಸದಿಂದ ಗೆದ್ದು ಬರಬೇಕು. ಪೊಲೀಸ್ ಕೇಸ್, ಎದುರು ನಿಂತವರಿಗೆ ತೊಂದರೆ ಕೊಡುವ ರಾಜಕಾರಣ ಎಷ್ಟು ದಿನ ನಡೆಯುತ್ತದೆ. ಎಲ್ಲದಕ್ಕೂ ಒಂದು ಕೊನೇ ಆಗಬೇಕು ಎಂದು ಹೇಳಿದರು.
ಇದನ್ನೂ ಓದಿ | Karnataka Election 2023: ಯಡಿಯೂರಪ್ಪ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುತ್ತಿರುವ ಬಿ.ಎಲ್. ಸಂತೋಷ್: ಶೆಟ್ಟರ್ ಕಿಡಿ
ಕನಕಪುರಕ್ಕೆ ಬಂದಾಗಿನಿಂದ ಒಂದಷ್ಟು ಜನ ಇಲ್ಲಿನ ಪರಿಸ್ಥಿತಿ ಬಗ್ಗೆ ಹೇಳುತ್ತಿದ್ದಾರೆ. ಇಲ್ಲಿ ಹೊಂದಾಣಿಕೆ ರಾಜಕೀಯ ಇದೆ. ನನ್ನ ತಂಟೆಗೆ ನೀನು ಬರಬೇಡ. ನಿನ್ನ ತಂಟೆಗೆ ನಾನು ಬರಲ್ಲ ಎಂಬ ರೀತಿಯಲ್ಲಿದೆ. ಹೊಂದಾಣಿಕೆ ರಾಜಕೀಯ ಪರಿಣಾಮದಿಂದ ಜನ ಅಸಹಾಯಕರಾಗಿದ್ದರು. ಜನರಿಗೆ ಅಸಹಾಯಕತೆ ಯಾವತ್ತೂ ಕಾಡಬಾರದು ಎಂದು ಹೇಳಿದರು.
ಜನರು ತಾವು ಬಯಸಿದವರಿಗೆ ಮತಹಾಕಲಿ, ಅದು ಅವರ ಹಕ್ಕು. ಆದರೆ ಮತ ಹಾಕದಿದ್ದರೆ ಊರು ಬಿಡಿಸುತ್ತೇನೆ ಎಂಬುದು ಪ್ರಜಾಪ್ರಭುತ್ವಕ್ಕೆ ಗೌರವ ತರಲ್ಲ. ಎಲ್ಲಿ ಭಯ ಇರುತ್ತದೋ ಅಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ಹೊಂದಾಣಿಕೆ ವಿಚಾರದಲ್ಲಿ ಈಗ ಉತ್ತರ ಸಿಗಲ್ಲ, ಮುಂದೆ ಜನರೇ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.
ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಆರ್. ಅಶೋಕ್
ಕನಕಪುರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಅಶೋಕ್ ಮಾತನಾಡುತ್ತಾ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಕನಕಪುರದಲ್ಲಿ ಗೆದ್ದರೆ ವರಿಷ್ಠರು ಮುಖ್ಯಮಂತ್ರಿ ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಏನು ಬೇಕಾದರೂ ಆಗಬಹುದು. ವರಿಷ್ಠರು ಆ ಬಗ್ಗೆಯೂ ನಿರ್ಧಾರ ಮಾಡಬಹುದು ಎಂದು ಪರೋಕ್ಷವಾಗಿ ಕನಕಪುರದಲ್ಲಿ ಗೆದ್ದು ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಇಂದು ನಾಲ್ಕನೇ ದಿನದ ಪ್ರಚಾರ ಮಾಡುತ್ತಿದ್ದೇನೆ. ನಾನು ಬಂದ ಮೇಲೆ ಡಿ.ಕೆ. ಶಿವಕುಮಾರ್ ಶ್ರೀಮತಿಯವರು ಕೂಡ ಚುನಾವಣೆ ಪ್ರಚಾರಕ್ಕೆ ಬರುವ ರೀತಿ ಆಗಿದೆ. ನಾನು ಎಲ್ಲೆಲ್ಲಿ ಹೋಗುತ್ತೇನೋ ಅಲ್ಲಿಗೆ ಡಿ.ಕೆ. ಸುರೇಶ್ ಕೂಡ ಹೋಗುತ್ತಿದ್ದಾರೆ. ಅವರ ಹುಟ್ಟೂರಿಗೆ ನಾನು ಹೋಗಿದ್ದೇನೆ ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ | BJP Karnataka: ಅತಂತ್ರ ಫಲಿತಾಂಶ ಬರಲಿ, ಸಿಎಂ ಆಗ್ತೇನೆ ಎಂದು ಒಬ್ಬರು ಕಾದು ಕುಳಿತಿದ್ದಾರೆ: ಎಚ್‌ಡಿಕೆ ಕಾಲೆಳೆದ ಸುಮಲತಾ ಅಂಬರೀಶ್
ನಾನು ಜೆಡಿಎಸ್ ಮುಖಂಡರಿಗೆ ಮನವಿ ಮಾಡುತ್ತೇನೆ. ಇಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ನಿರ್ಮಾಣ ಆಗುತ್ತಿದೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಜೋಡೆತ್ತುಗಳ ನಡವಳಿಕೆಯನ್ನು ನೀವು ನೋಡಿದ್ದೀರಿ ಕನಕಪುರದಲ್ಲಿ ದಿನ ನಿತ್ಯ ಗಲಾಟೆಗಳು ನಡೆಯುತ್ತಿವೆ. ಇವರಿಬ್ಬರೂ ಮತ್ತೆ ಜೋಡೆತ್ತು ಆದರೆ ನಿಮ್ಮ ಕಥೆ ಏನು ಅಂತ ಒಮ್ಮೆ ಯೋಚನೆ ಮಾಡಿ. ಅದಕ್ಕಾಗಿ ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಡಿ.ಕೆ. ಶಿವಕುಮಾರ್ ವಿರೋಧಿ ಮತಗಳನ್ನು ಒಗ್ಗೂಡಿಸಿದರೆ ಅವರನ್ನು ಮಣಿಸಬಹುದು. ನಾವೇ ಗೆಲ್ಲುತ್ತೇವೆ ಎಂಬ ಭ್ರಮೆಗೆ ತಕ್ಕ ಉತ್ತರ ಕೊಡಬಹುದು ಎಂದು ತಿಳಿಸಿದರು.
ಕನಕಪುರದ ಜನರು ನನಗೆ ಬೆಂಬಲ ಕೊಡುತ್ತಿದ್ದಾರೆ. ಹಿಂದೆಲ್ಲ ಎಲೆಕ್ಷನ್‌ಗೆ ನಿಂತವರೆಲ್ಲ ಓಡಿ ಹೋಗುತ್ತಿದ್ದರು. ಆದರೆ ನಾನು ಇಲ್ಲಿ ಗಟ್ಟಿಯಾಗಿ ನಿಂತಿದ್ದೇನೆ. ನನಗೆ ಹೋದ ಕಡೆಗಳೆಲ್ಲ ಆರತಿ ಎತ್ತಿ ಜನರು ಸ್ವಾಗತ ಮಾಡುತ್ತಿದಾರೆ. ನಾನು ಬಂದ ಮೇಲೆ ಶಿವಕುಮಾರ್‌ಗೆ ಸೋಲಿನ ಭಯ ಕಾಡುತ್ತಿದೆ. ಅವರಿಗೆ ಸೋಲಿನ ಬಗ್ಗೆ ಅರಿವು ಆದ ಕೂಡಲೇ ಹೋಮ, ಹವನ ಮಾಡಿಸುತ್ತಿದ್ದಾರೆ. ಮಾಟ – ಮಂತ್ರ ಎಲ್ಲ ಮಾಡಿಸುತ್ತಿದ್ದಾರೆ ಎಂದರೆ ಅವರಿಗೆ ಸೋಲಿನ ಭೀತಿ ಎಷ್ಟಿದೆ ನೋಡಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | Karnataka Election 2023: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರಾಗ್ತಾರೆ ಸಿಎಂ; ಏನಂದ್ರು ಪ್ರಿಯಾಂಕಾ ಗಾಂಧಿ?
ಡಿಕೆಶಿ ಅವರ ಶ್ರೀಮತಿ ಮೇಲೆ ನನಗೆ ಗೌರವ ಇದೆ. ಆದರೆ ಫಸ್ಟ್ ಟೈಮ್ ಅವರೂ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ನನ್ನನ್ನು ಅವರು ಟ್ರ್ಯಾಕ್ ಮಾಡುತ್ತಿದ್ದಾರೆ. ಆದರೆ, ಅವರಿಗೆ ಈ ಸಾರಿ ಅಷ್ಟು ಸುಲಭವಿಲ್ಲ. ಕನಕಪುರವನ್ನು ಸೂಕ್ಷ್ಮ ಪ್ರದೇಶವಾಗಿ ಘೋಷಣೆ ಮಾಡಿ, ಎಲ್ಲ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸಬೇಕೆಂದು ಚುನಾವಣಾ ಆಯೋಗಕ್ಕೂ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದರು.
ನಾವು ಏನೋ ಮತ ಹಾಕಿಸುತ್ತೇವೆ. ಆದರೆ ಆ ಮತಗಳನ್ನು ಕೊನೆಗೆ ಶಿವಕುಮಾರ್ ಇಲ್ಲದಂತೆ ಮಾಡುತ್ತಾರೆ ಎಂದು ಜೆಡಿಎಸ್‌ನವರು ಕೂಡ ಆತಂಕಗೊಂಡಿದ್ದಾರೆ. ಶಿವಕುಮಾರ್‌ನಡೆಗೆ ಅವರ ಪಕ್ಷದವರೇ ಬೇಸತ್ತು ಹೋಗಿದ್ದಾರೆ. ಅವರ ಎಷ್ಟೋ ಕಾರ್ಯಕರ್ತರು ನನಗೆ ಫೋನ್ ಮಾಡಿ ಬೆಂಬಲ ಕೊಡುತ್ತಿದ್ದಾರಾ ಎಂದು ತಿಳಿಸಿದರು.